ನವದೆಹಲಿ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (UP Election) ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಕಸರತ್ತು ದಿನ ಕಳೆದಂತೆ ಜಟಿಲವಾಗುತ್ತಿದೆ. ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಸಮಾಜವಾದಿ ಪಕ್ಷವು ಕಾಂಗ್ರೆಸ್ಗೆ 26 ವಿಧಾನಸಭಾ ಕ್ಷೇತ್ರಗಳನ್ನು ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ಮಂಗಳವಾರ (ನವೆಂಬರ್ 24) ತಿಳಿಸಿದ್ದು, ಈ ಪ್ರಸ್ತಾವನೆಯನ್ನು ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಹಿರಿಯ ನಾಯಕರಿಗೆ ಕಳುಹಿಸಿಲ್ಲ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸಮಾಜವಾದಿ ಪಕ್ಷ ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ ಎರಡು ಕ್ಷೇತ್ರಗಳಾದ ರಾಮ್ಪುರ ಖಾಸ್ ಮತ್ತು ಫರೆಂಡಾ ಸೇರಿವೆ. ಇದರ ಜೊತೆಗೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಎರಡನೇ ಸ್ಥಾನ ಪಡೆದಿದ್ದ ನಾಲ್ಕು ಪ್ರಮುಖ ಕ್ಷೇತ್ರಗಳನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. 2022ರಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿದ್ದ ಆ ನಾಲ್ಕು ಕ್ಷೇತ್ರಗಳೆಂದರೆ, ಮಥುರಾ, ಖೇರಾಘರ್, ಜಗದೀಶ್ಪುರ ಮತ್ತು ಕಿದ್ವೈ ನಗರ.
ಇನ್ನುಳಿದ 20 ಕ್ಷೇತ್ರಗಳ ವಿವರ ಹೀಗಿದೆ: ಬಾಗ್ಪತ್, ಮೋದಿನಗರ, ಹಾಪುರ್, ಜೇವರ್, ಸ್ಯಾನಾ, ಖುರ್ಜಾ, ಖೈರ್, ಇಗ್ಲಾಸ್, ಮಾಂಟ್, ಆಗ್ರಾ ಉತ್ತರ, ಫತೇಪುರ್ ಸಿಕ್ರಿ, ಬಿಲ್ಗ್ರಾಮ್-ಮಲ್ಲಾವಾನ್, ಗೋವಿಂದ್ ನಗರ, ನಾನ್ಪಾರಾ, ಗೋರಖ್ಪುರ ನಗರ, ಖಜ್ನಿ, ಪದ್ರೌನಾ, ಫಾಜಿಲ್ನಗರ, ಪಿಂದ್ರಾ ಮತ್ತು ವಾರಣಾಸಿ ಕ್ಯಾಂಟ್.
ಉಭಯ ಪಕ್ಷಗಳ ನಡುವಿನ ಮಾತುಕತೆ ಮುಂದುವರಿದಂತೆ ಕಾಂಗ್ರೆಸ್ಗೆ ನೀಡಲಾಗುವ ಕ್ಷೇತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಆದರೆ, ಸಮಾಜವಾದಿ ಪಕ್ಷದ ಈ ಪ್ರಸ್ತಾವಿತ ಸೂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 2027ರ ವಿಧಾನಸಭಾ ಚುನಾವಣೆಗೂ ಮುನ್ನ ಎರಡೂ ಪಕ್ಷಗಳ ನಾಯಕರು ಸೀಟು ಹಂಚಿಕೆ ಕುರಿತು ಮತ್ತಷ್ಟು ಸುತ್ತಿನ ಮಹತ್ವದ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಈ ಬೆಳವಣಿಗೆಯ ನಡುವೆಯೇ ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಮ್ ಗೋಪಾಲ್ ಯಾದವ್ ಅವರು ಸೀಟು ಹಂಚಿಕೆ ಕುರಿತು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಏನು ಹೇಳಬೇಕಿತ್ತೋ ಅದನ್ನು ನಾವು ನಿನ್ನೆಯೇ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ 26 ಸೀಟುಗಳನ್ನು ನಾವು ಅವರಿಗೆ ನೀಡಿದ್ದೇವೆ, ಮತ್ತು ಇಂದು ನಾವು ಮತ್ತೆ ಮಾತುಕತೆ ನಡೆಸಲು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿರುವ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷಕ್ಕೆ 120 ವಿಧಾನಸಭಾ ಕ್ಷೇತ್ರಗಳ ಬೃಹತ್ ಪಟ್ಟಿಯನ್ನು ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಈ ಪಟ್ಟಿಯನ್ನು ಎ, ಬಿ ಮತ್ತು ಸಿ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ:
'ಎ' ವರ್ಗ: ಇದರಲ್ಲಿ ಕಾಂಗ್ರೆಸ್ ಅತ್ಯಂತ ಪ್ರಬಲವಾಗಿ ಸ್ಪರ್ಧಿಸಲು ಮತ್ತು ಗೆಲ್ಲಲು ಬಯಸುವ 55 ಕ್ಷೇತ್ರಗಳಿವೆ.
'ಬಿ' ವರ್ಗ: ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ ಹಾಗೂ ಸಾಂಪ್ರದಾಯಿಕ ಮತಬ್ಯಾಂಕ್ ಹೊಂದಿರುವ ಕ್ಷೇತ್ರಗಳನ್ನು ಇದರಲ್ಲಿ ಸೇರಿಸಲಾಗಿದೆ.
'ಸಿ' ವರ್ಗ: ಸೂಕ್ತ ಅಭ್ಯರ್ಥಿ ಮತ್ತು ಮೈತ್ರಿ ಬಲದಿಂದ ಗೆಲುವಿನ ಉತ್ತಮ ಸಾಧ್ಯತೆ ಇದೆ ಎಂದು ಪಕ್ಷ ಭಾವಿಸಿರುವ ಕ್ಷೇತ್ರಗಳನ್ನು ಈ ವರ್ಗ ಒಳಗೊಂಡಿದೆ.
ಕಾಂಗ್ರೆಸ್ ಸಲ್ಲಿಸಿರುವ ಈ 120 ಕ್ಷೇತ್ರಗಳ ಪಟ್ಟಿಯ ಕುರಿತು ಸಮಾಜವಾದಿ ಪಕ್ಷದ ನಾಯಕರೊಂದಿಗೆ ವಿಸ್ತೃತ ಚರ್ಚೆ ನಡೆಯಲಿದೆ. ಇದಕ್ಕೂ ಮುನ್ನ, ಸೀಟು ಹಂಚಿಕೆ ಮಾತುಕತೆಯಲ್ಲಿ ಪರಿಗಣಿಸಲು ಬರೋಬ್ಬರಿ 181 ಕ್ಷೇತ್ರಗಳ ಹೆಸರನ್ನು ಕಾಂಗ್ರೆಸ್ ಸಲ್ಲಿಸಿತ್ತು ಎಂದು ವರದಿಯಾಗಿತ್ತು. ಆ ಪಟ್ಟಿಯಲ್ಲಿ 135 ಸಾಮಾನ್ಯ ಕ್ಷೇತ್ರಗಳು, 45 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳು ಮತ್ತು ಒಂದು ಪರಿಶಿಷ್ಟ ಪಂಗಡ ಕ್ಷೇತ್ರ ಸೇರಿತ್ತು.
ಸೀಟು ಹಂಚಿಕೆ ಮಾತುಕತೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಪಾಲಿನ ನಿರೀಕ್ಷೆಯಲ್ಲಿದ್ದರೂ, ಅಷ್ಟು ದೊಡ್ಡ ಸಂಖ್ಯೆಯ ಸೀಟುಗಳನ್ನು ಎಸ್ಪಿ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ ಇದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವೇ ಸಿಂಹಪಾಲು ಉಳಿಸಿಕೊಂಡು, ಕಾಂಗ್ರೆಸ್ ಗರಿಷ್ಠ 60 ರಿಂದ 70 ಸೀಟುಗಳಿಗೆ ತೃಪ್ತಿಪಡಬೇಕು ಎಂಬುದು ಹಲವು ಎಸ್ಪಿ ನಾಯಕರ ಅಭಿಪ್ರಾಯವಾಗಿದೆ. ಇದನ್ನು ಅನೇಕ ಬಾರಿ ಆ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಿನಿಂದಲೇ ಮೈತ್ರಿ ರಾಜಕಾರಣ ಗರಿಗೆದರಿದೆ(ಏಜೆನ್ಸೀಸ್).