ಟಿವಿಕೆ ಪ್ರಣಾಳಿಕೆ ಬಿಡುಗಡೆ; ರೈತರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣದ ಭರವಸೆ...ಡಿಎಂಕೆ ಭದ್ರಕೋಟೆಗೆ ಲಗ್ಗೆ ಇಟ್ಟ ವಿಜಯ್​​! | TVK Manifesto

TVK Manifesto | ತಂಜಾವೂರಿನಲ್ಲಿ ಬೃಹತ್ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ವಿಜಯ್​​
TVK Manifesto | ತಂಜಾವೂರಿನಲ್ಲಿ ಬೃಹತ್ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ವಿಜಯ್​​
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ರಣಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ಪ್ರಣಾಳಿಕೆಯ (TVK Manifesto) ಪ್ರಮುಖ ಅಂಶಗಳನ್ನು ಇಂದು (ಮಾ.4) ಅನಾವರಣಗೊಳಿಸಿದ್ದಾರೆ.
ತಂಜಾವೂರಿನಲ್ಲಿ ಬೃಹತ್ ಜನಸಾಗರವನ್ನು ಉದ್ದೇಶಿಸಿ ಮಾತನಾಡಿದ ವಿಜಯ್​​, ಮುಂಬರುವ ಚುನಾವಣೆಯನ್ನು ಕೇವಲ ರಾಜಕೀಯ ಹೋರಾಟವಲ್ಲ, ತಮ್ಮ ಪಾಲಿನ ಸಾಗರದ ಭಾವನೆ ಎಂದು ಕರೆದರು.
ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಕುಟುಂಬಗಳನ್ನು ಗುರಿಯಾಗಿಸಿಕೊಂಡಿರುವ ವಿಜಯ್, ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತ ಕುಟುಂಬಗಳ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡುವ ಮಹತ್ವದ ಭರವಸೆಯನ್ನು ಘೋಷಿಸಿದರು. ಇದು ಯಾವುದೇ ಸರ್ಕಾರಿ ಉದ್ಯೋಗಿಗಳಿಲ್ಲದ ಬಡ ಕುಟುಂಬಗಳಿಗೆ ಅನ್ವಯಿಸಲಿದ್ದು, ಶಿಕ್ಷಣ ವೆಚ್ಚದ ಹೊರೆ ಇಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಸ್ಟಾಲಿನ್​ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯ್,​ ಡಿಎಂಕೆ ಒಂದು ದುಷ್ಟ ಶಕ್ತಿ ಎಂಬ ತಮ್ಮ ಮಾತನ್ನು ಪುನರುಚ್ಚರಿಸಿದರು. ನೀಟ್ ಪರೀಕ್ಷೆಯ ನಿಷೇಧದ ವಿಚಾರದಲ್ಲಿ ಡಿಎಂಕೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದ ನಟ, ನೀವು ಈ ವಿಜಯ್‌ನನ್ನು ನಂಬುತ್ತೀರಾ ಅಥವಾ ಸುಳ್ಳು ಭರವಸೆ ನೀಡುವ ಸ್ಟಾಲಿನ್ ಅವರನ್ನು ನಂಬುತ್ತೀರಾ? ಎಂದು ಮತದಾರರನ್ನು ಪ್ರಶ್ನಿಸಿದರು.
ಇದೇ ವೇಳೆ ತಮ್ಮ ಜನನಾಯಗನ್ ಚಿತ್ರದ ವಿವಾದಕ್ಕೆ ಬೆಂಬಲ ನೀಡಿದ್ದಕ್ಕಾಗಿ ಮುಖ್ಯಮಂತ್ರಿ ಸ್ಟಾಲಿನ್​​ಗೆ ಧನ್ಯವಾದ ಅರ್ಪಿಸಿದ ಟಿವಿಕೆ ಮುಖ್ಯಸ್ಥರು, ನನ್ನನ್ನು ಮೌನಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ಮೀನುಗಾರ ಸಮುದಾಯದ ರಕ್ಷಣೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡುತ್ತಾ, ರಾಜ್ಯ ರಾಜಕಾರಣಕ್ಕೆ ತಮ್ಮ ಪಕ್ಷವೇ ಸೂಕ್ತ ಪರ್ಯಾಯ ಎಂದು ಕರೆದರು.

ಟಿವಿಕೆಯ ಶಿಳ್ಳೆ ಸದ್ದು ಮಾಡಲಿದೆ

ತಮ್ಮ ಭಾಷಣದಲ್ಲಿ ಪ್ರಾದೇಶಿಕ ಹೆಮ್ಮೆಯನ್ನು ಎತ್ತಿಹಿಡಿದ ವಿಜಯ್, ಕ್ರಿಕೆಟ್ ಲೋಕದ ಉದಾಹರಣೆಯನ್ನು ನೀಡುತ್ತಾ ಬಿಜೆಪಿಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ದೆಹಲಿ ತಂಡವು ಎಂದಿಗೂ ತಮಿಳುನಾಡು ತಂಡವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕೇಂದ್ರದ ಹಿಡಿತದ ವಿರುದ್ಧ ಗುಡುಗಿದರು.
ಐಪಿಎಲ್‌ನ ಸಿಎಸ್‌ಕೆ ತಂಡದ ಜನಪ್ರಿಯತೆ ಮತ್ತು ತಮ್ಮ ಪಕ್ಷದ 'ಶಿಳ್ಳೆ' ಗುರುತನ್ನು ಹೋಲಿಸಿದ ವಿಜಯ್​, ಪ್ರತಿ ಮತಗಟ್ಟೆಯಲ್ಲೂ ಟಿವಿಕೆಯ ಶಿಳ್ಳೆ ಸದ್ದು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೈಯಕ್ತಿಕ ಜೀವನದಲ್ಲಿ ವಿಚ್ಛೇದನದಂತಹ ಕಠಿಣ ಸವಾಲುಗಳ ನಡುವೆಯೂ ವಿಜಯ್ ಅವರು ನಡೆಸಿದ ಈ ಬೃಹತ್ ಸಭೆ ಮುಂಬರುವ ಏಪ್ರಿಲ್ ಚುನಾವಣೆಯಲ್ಲಿ ದ್ರಾವಿಡ ಕೋಟೆಗಳಿಗೆ ದೊಡ್ಡ ಮಟ್ಟದ ಪೈಪೋಟಿ ನೀಡುವ ಮುನ್ಸೂಚನೆ ನೀಡಿದೆ.

ಡಿಎಂಕೆ ಭದ್ರಕೋಟೆಯಲ್ಲಿ ವಿಜಯ್ ಅಬ್ಬರ

ನಟ ವಿಜಯ್ ತಮ್ಮ ಮೊದಲ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ತಂಜಾವೂರು ಜಿಲ್ಲೆಯನ್ನು ಆಯ್ದುಕೊಂಡಿರುವುದು ರಾಜಕೀಯವಾಗಿ ಬಹಳ ಮಹತ್ವದ್ದಾಗಿದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಜಿಲ್ಲೆಯು ಪ್ರಸ್ತುತ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಗೋವಿ ಚೆಝಿಯಾನ್ ಅವರು ಪ್ರತಿನಿಧಿಸುವ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ತಿರುವಿಡೈಮರುದೂರ್ ಅನ್ನು ಸಹ ಒಳಗೊಂಡಿದೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಡಿಎಂಕೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಎಂಟು ಸ್ಥಾನಗಳ ಪೈಕಿ ಏಳನ್ನು ಗೆಲ್ಲುವ ಮೂಲಕ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದ್ದ ಡಿಎಂಕೆಗೆ ಪೈಪೋಟಿ ನೀಡಿದ್ದ ಎಐಎಡಿಎಂಕೆ, ಕೇವಲ ಒರಥನಾಡು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು.
ಜಿಲ್ಲೆಯ ಉಳಿದ ಪ್ರಮುಖ ಕ್ಷೇತ್ರಗಳಾದ ಕುಂಭಕೋಣಂ, ಪಾಪನಾಶಂ, ತಿರುವೈಯಾರು, ತಂಜಾವೂರು, ಪಟ್ಟುಕೊಟ್ಟೈ ಮತ್ತು ಪೆರವುರಾಣಿ ಕ್ಷೇತ್ರಗಳಲ್ಲಿ ಕಳೆದ ಬಾರಿ ಡಿಎಂಕೆ ಪರವಾಗಿ ಏಕಪಕ್ಷೀಯ ತೀರ್ಪು ಬಂದಿತ್ತು. ಇಂತಹ ಪ್ರಬಲ ದ್ರಾವಿಡ ಭದ್ರಕೋಟೆಯಲ್ಲೇ ವಿಜಯ್ ಈಗ ತಮ್ಮ ಪ್ರಣಾಳಿಕೆ ಮಂಡಿಸಿರುವುದು, ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳ ಮತಬ್ಯಾಂಕ್‌ಗೆ ಲಗ್ಗೆ ಹಾಕುವ ಸ್ಪಷ್ಟ ಮುನ್ಸೂಚನೆಯಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net