ತಾಜ್‌ಮಹಲ್‌ನಲ್ಲಿ ಪ್ರವಾಸಿಗರ ಕುಟುಂಬದ ಮೇಲೆ ಸಿಐಎಸ್‌ಎಫ್ ಸಿಬ್ಬಂದಿಯಿಂದ ಹಲ್ಲೆ ಆರೋಪ | Taj Mahal

ವಿಶ್ವವಿಖ್ಯಾತ ತಾಜ್‌ಮಹಲ್ ವೀಕ್ಷಣೆಗೆ ತೆರಳಿದ್ದ ದೆಹಲಿಯ ಪ್ರವಾಸಿಗರೊಬ್ಬರು, ತಮ್ಮ ಮೂರು ವರ್ಷದ ಮಗನ ಗುರುತಿನ ದಾಖಲೆ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ (CISF) ಸಿಬ್ಬಂದಿ ತಮ್ಮ ಹಾಗೂ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭಾನುವಾರ ಆರೋಪಿಸಿದ್ದಾರೆ. Taj Mahal
ತಾಜ್‌ಮಹಲ್‌ನಲ್ಲಿ ಪ್ರವಾಸಿಗರ ಕುಟುಂಬದ ಮೇಲೆ ಸಿಐಎಸ್‌ಎಫ್ ಸಿಬ್ಬಂದಿಯಿಂದ ಹಲ್ಲೆ ಆರೋಪ
ತಾಜ್‌ಮಹಲ್‌ನಲ್ಲಿ ಪ್ರವಾಸಿಗರ ಕುಟುಂಬದ ಮೇಲೆ ಸಿಐಎಸ್‌ಎಫ್ ಸಿಬ್ಬಂದಿಯಿಂದ ಹಲ್ಲೆ ಆರೋಪ WEB
Published on: 

ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್ ವೀಕ್ಷಣೆಗೆ ತೆರಳಿದ್ದ ದೆಹಲಿಯ ಪ್ರವಾಸಿಗರೊಬ್ಬರು, ತಮ್ಮ ಮೂರು ವರ್ಷದ ಮಗನ ಗುರುತಿನ ದಾಖಲೆ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ (CISF) ಸಿಬ್ಬಂದಿ ತಮ್ಮ ಹಾಗೂ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭಾನುವಾರ ಆರೋಪಿಸಿದ್ದಾರೆ. ತಾಜ್‌ಮಹಲ್‌ನ ಪೂರ್ವ ದ್ವಾರದ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಪ್ರವಾಸಿಗರ ಆರೋಪವನ್ನು ನಿರಾಕರಿಸಿರುವ ಸಿಐಎಸ್‌ಎಫ್ ಅಧಿಕಾರಿಯೊಬ್ಬರು, ವಿಐಪಿ ಪ್ರವೇಶ ದ್ವಾರದ ಬಳಕೆಗೆ ಸಂಬಂಧಿಸಿದಂತೆ ವ್ಯಕ್ತಿ ಮತ್ತು ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗ ಸಾಜಿದ್ ನೀಡಿರುವ ಹೇಳಿಕೆಯ ಪ್ರಕಾರ, ತಾಜ್‌ಮಹಲ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಅವರ ಮೂರು ವರ್ಷದ ಮಗ ಸುಮಾರು ಐದು ನಿಮಿಷಗಳ ಕಾಲ ಕಾಣೆಯಾಗಿದ್ದ. ಬಳಿಕ ಸಿಐಎಸ್‌ಎಫ್ ಸಿಬ್ಬಂದಿಯೊಬ್ಬರ ಬಳಿ ಮಗು ಪತ್ತೆಯಾಗಿತ್ತು. ಈ ವೇಳೆ ಸಿಬ್ಬಂದಿ ಮಗುವಿನ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : 'ಕಾಂಗ್ರೆಸ್ ಗೆದ್ದಿದೆ, ಕರೆಂಟ್ ಬಿಲ್ ಯಾರು ಕಟ್ಟುತ್ತಾರೆ?'; ಚುನಾವಣೆಯಲ್ಲಿ ಸೋತಿದ್ದಕ್ಕೆ ಗ್ರಾಮದಲ್ಲಿ ಅಳವಡಿಸಿದ್ದ 50 ಬೀದಿ ದೀಪಗಳನ್ನು ತೆರವುಗೊಳಿಸಿದ ಬಿಜೆಪಿ ಅಭ್ಯರ್ಥಿ..Rajasthan

ಇದಕ್ಕೆ ಪ್ರತಿಕ್ರಿಯಿಸಿದ ಸಾಜಿದ್, ತಮ್ಮ ಮೊಬೈಲ್‌ನಲ್ಲಿದ್ದ ಮಗುವಿನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು ಹಾಗೂ ಮಗುವಿನ ಜನನ ಪ್ರಮಾಣಪತ್ರವನ್ನು ತೋರಿಸಿ, ಆತ ತಮ್ಮ ಮಗನೆಂದು ಗುರುತಿಸಲು ಪ್ರಯತ್ನಿಸಿದ್ದಾರೆ. ಆದರೂ ಸಿಬ್ಬಂದಿ ಆಧಾರ್ ಕಾರ್ಡ್ ತೋರಿಸುವಂತೆ ಪಟ್ಟು ಹಿಡಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಒಂದು ವೇಳೆ ಆಧಾರ್ ಕಾರ್ಡ್ ನೀಡದಿದ್ದರೆ ನಾಲ್ಕು ದಿನಗಳ ಬಳಿಕವಷ್ಟೇ ಮಗುವನ್ನು ಹಿಂತಿರುಗಿಸುವುದಾಗಿ ಸಿಬ್ಬಂದಿ ಹೇಳಿದ್ದಾರೆ ಎಂದು ಸಾಜಿದ್ ದೂರಿದ್ದಾರೆ.

ಇಷ್ಟಕ್ಕೇ ನಿಲ್ಲದೆ, ಸಿಐಎಸ್‌ಎಫ್ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಕಸಿದುಕೊಂಡು, ತಮ್ಮ ಭಾವ ಅಜಾದ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಾಜಿದ್ ಆರೋಪಿಸಿದ್ದಾರೆ. ಹಲ್ಲೆಯಿಂದ ಅಜಾದ್ ಪ್ರಜ್ಞೆ ತಪ್ಪಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ತನಿಖೆಗೆ ಸೂಚನೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞೆ ಡಾ. ಸ್ಮಿತಾ ಎಸ್. ಕುಮಾರ್, ಪ್ರವಾಸಿಗರು ಮತ್ತು ಸಿಐಎಸ್‌ಎಫ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳಿಂದ ವರದಿ ಕೇಳಲಾಗಿದೆ. ಅಲ್ಲದೆ, ಸಿಐಎಸ್‌ಎಫ್ ಕಮಾಂಡೆಂಟ್ ಅವರಿಂದಲೂ ವಿವರಣೆ ಪಡೆಯಲಾಗುವುದು. ಈ ಕುರಿತು ದೆಹಲಿಯಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೂ ಲಿಖಿತವಾಗಿ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜ್‌ಮಹಲ್‌ನಂತಹ ಪ್ರಮುಖ ಪ್ರವಾಸಿ ತಾಣದಲ್ಲಿ ನಡೆದಿರುವುದಾಗಿ ಹೇಳಲಾದ ಈ ಘಟನೆ ಇದೀಗ ಗಮನ ಸೆಳೆದಿದ್ದು, ಪ್ರವಾಸಿಗರ ಆರೋಪ ಹಾಗೂ ಭದ್ರತಾ ಸಿಬ್ಬಂದಿಯ ಸ್ಪಷ್ಟನೆ ಕುರಿತು ಮುಂದಿನ ತನಿಖೆಯ ವರದಿಯ ಮೇಲೆ ಎಲ್ಲರ ಗಮನ ನೆಟ್ಟಿದೆ.