ಇದರ ಜೊತೆಗೆ ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಡಿಎಂಕೆ ಕೈಬಿಟ್ಟು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದೊಂದಿಗೆ ಸರ್ಕಾರ ರಚಿಸಲು ಕೈಜೋಡಿಸಿದೆ. ಇದರಿಂದ ತೀವ್ರ ನೊಂದಿರುವ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ, ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟ ಮುಗಿದ ಕಥೆ ಎಂದು ಘೋಷಿಸಿದೆ. ಡಿಎಂಕೆಯ 22 ಲೋಕಸಭಾ ಸಂಸದರು ವಿಧೇಯಕದ ಆಧಾರದ ಮೇಲೆ ಎನ್‌ಡಿಎಗೆ ಬೆಂಬಲ ನೀಡುವ ಸೂಚನೆ ನೀಡಿದ್ದಾರೆ. ಶಿವಸೇನಾ (ಯುಬಿಟಿ) ಪಕ್ಷದ ಕೆಲವು ಸಂಸದರು ಕೂಡ ಸರ್ಕಾರದ ಪರ ನಿಲ್ಲುವ ಸಾಧ್ಯತೆಯಿದೆ. ಇವೆಲ್ಲವೂ ಒಟ್ಟಾದರೆ ಎನ್‌ಡಿಎ ಬಲ 345ಕ್ಕೆ ಏರಲಿದ್ದು, ಮ್ಯಾಜಿಕ್ ನಂಬರ್ 360 ತಲುಪಲು ಕೇವಲ 15 ಸೀಟುಗಳಷ್ಟೇ ಬಾಕಿಯಿರುತ್ತವೆ. ಇದನ್ನು ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ಮೂಲಕ ಕ್ರೋಢೀಕರಿಸಲು ಬಿಜೆಪಿ ತಂತ್ರ ರೂಪಿಸಿದೆ.