ಗಾಯಗೊಂಡ ಹುಲಿ ಮುಂದೆ ಜನರ ಹುಚ್ಚಾಟ: ವೈರಲ್ ವಿಡಿಯೋಗೆ ವನ್ಯಜೀವಿ ಪ್ರೇಮಿಗಳು ಕೆಂಡಾಮಂಡಲ!Tiger accident

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಕಾರಿಗೆ ಡಿಕ್ಕಿಯಾಗಿ ಹುಲಿಯೊಂದು ಗಂಭೀರವಾಗಿ ಗಾಯಗೊಂಡಿದೆ. ಆದರೆ, ಗಾಯಗೊಂಡು ಪೊದೆಗಳ ನಡುವೆ ಮಲಗಿದ್ದ ಹುಲಿಯನ್ನು ರಕ್ಷಿಸುವ ಬದಲು, ಸುತ್ತ ನೆರೆದಿದ್ದ ಜನರು ವಿಚಿತ್ರ ಶಬ್ದಗಳನ್ನು ಮಾಡುತ್ತಾ ಕೆಣಕಿರುವ ಘಟನೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ. Tiger accident
ಗಾಯಗೊಂಡ ಹುಲಿ ಮುಂದೆ ಜನರ ಹುಚ್ಚಾಟ
ಗಾಯಗೊಂಡ ಹುಲಿ ಮುಂದೆ ಜನರ ಹುಚ್ಚಾಟWEB
Published on: 

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಕಾರಿಗೆ ಡಿಕ್ಕಿಯಾಗಿ ಹುಲಿಯೊಂದು ಗಂಭೀರವಾಗಿ ಗಾಯಗೊಂಡಿದೆ. ಆದರೆ, ಗಾಯಗೊಂಡು ಪೊದೆಗಳ ನಡುವೆ ಮಲಗಿದ್ದ ಹುಲಿಯನ್ನು ರಕ್ಷಿಸುವ ಬದಲು, ಸುತ್ತ ನೆರೆದಿದ್ದ ಜನರು ವಿಚಿತ್ರ ಶಬ್ದಗಳನ್ನು ಮಾಡುತ್ತಾ ಕೆಣಕಿರುವ ಘಟನೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುರುವಾರ ಬೆಳಗ್ಗೆ ನಾಗಪುರ ಹೆದ್ದಾರಿಯ ಸಿಂದೇವಾಹಿ ಸಮೀಪದ ಖಟ್‌ಗಾಂವ್ ಫಾಟಾ ಬಳಿ ಈ ಅಪಘಾತ ಸಂಭವಿಸಿದೆ. ಬೆಳಗ್ಗೆ ಸುಮಾರು 10.15ರ ವೇಳೆಗೆ ಹುಲಿಯೊಂದು ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನದ ಮೇಲೆ ದಾಳಿ ಮಾಡಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಬಲ್ಲಾರ್‌ಪುರ ನಿವಾಸಿ ಆಶಿಶ್ ಸುಧಾಕರ್ ಸಂತೋಷ್ವರ್ ಎಂಬುವವರು ತಮ್ಮ ಕುಟುಂಬದೊಂದಿಗೆ ನಾಗಭಿಡ್‌ನಿಂದ ಚಂದ್ರಾಪುರದ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಖಟ್‌ಗಾಂವ್ ಫಾಟಾ ಬಳಿ ಏಕಾಏಕಿ ರಸ್ತೆ ಮೇಲೆ ಕಾಣಿಸಿಕೊಂಡ ಹುಲಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಹುಲಿ ಗಂಭೀರವಾಗಿ ಗಾಯಗೊಂಡಿದ್ದು, ಚಾಲಕ ತಕ್ಷಣವೇ ವಾಹನ ನಿಲ್ಲಿಸಿದ್ದಾನೆ ಎಂದು ವರದಿಯಾಗಿದೆ.

ಗಾಯಗೊಂಡ ಹುಲಿಯನ್ನು ಕೆಣಕಿದ ಜನರು

ಅಪಘಾತದ ಬಳಿಕ ಗಾಯಗೊಂಡ ಹುಲಿ ಹೆದ್ದಾರಿ ಪಕ್ಕದ ಪೊದೆಗಳ ನಡುವೆ ಮಲಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹುಲಿಯನ್ನು ನೋಡಲು ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಆದರೆ, ಕೆಲವರು ಅದರ ಬಳಿ ನಿಂತು ವಿಚಿತ್ರ ಶಬ್ದಗಳನ್ನು ಮಾಡುತ್ತಾ ಪ್ರಾಣಿಯನ್ನು ಕೆಣಕಲು ಯತ್ನಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಜನರ ಕಿರುಚಾಟ ಮತ್ತು ಶಬ್ದಗಳಿಂದ ಕಿರಿಕಿರಿಗೊಂಡ ಹುಲಿ ಹಲ್ಲುಗಳನ್ನು ತೋರಿಸುತ್ತಾ ಆಕ್ರಮಣಕಾರಿ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಆದರೂ ಪೊದೆಯಿಂದ ಹೊರಬಂದು ಯಾರ ಮೇಲೂ ದಾಳಿ ಮಾಡಿಲ್ಲ. ಈಗಾಗಲೇ ವಾಹನ ಡಿಕ್ಕಿಯಿಂದ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಾಡುಪ್ರಾಣಿಯ ಬಳಿ ಜನರು ಹೀಗೆ ವರ್ತಿಸಿರುವುದು ಪ್ರಾಣಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಭೂಮಿಯತ್ತ ಧಾವಿಸುತ್ತಿದೆ ಬೃಹತ್ ಆಕಾಶಕಾಯ! ಆಗಸದಲ್ಲಿ ನಡೆಯಲಿದೆ ಮಹಾ ವಿಸ್ಮಯ | NASA

ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರ

ಅಪಘಾತದಲ್ಲಿ ಗಾಯಗೊಂಡ ಹುಲಿಗೆ ಆರಂಭದಲ್ಲಿ ಸವರ್‌ಗಾಂವ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಂದ್ರಾಪುರದ ಟ್ರಾನ್ಸಿಟ್ ಟ್ರೀಟ್‌ಮೆಂಟ್ ಸೆಂಟರ್‌ (TTC)ಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡ ವನ್ಯಜೀವಿಗಳ ಸುತ್ತ ಜನರು ಗುಂಪುಗೂಡುವುದು ಮತ್ತು ಅವುಗಳನ್ನು ಕೆಣಕುವುದು ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ ಪ್ರಾಣಿಗಳಿಗೆ ತೊಂದರೆ ನೀಡದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.