ಮೂರು ತಾಸುಗಳಲ್ಲಿ ಮೂರು ಹೆಣ್ಣು ಮಕ್ಕಳು ಸಾ*; ಸಮಾಧಿಯಿಂದ ಶವಗಳನ್ನು ಹೊರತೆಗೆದು ತನಿಖೆ ಆರಂಭಿಸಿದ ಪೊಲೀಸರು | Three girls die

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಭೋಪಾಲ್​​: ಮಧ್ಯಪ್ರದೇಶಲ್ಲಿ ಶನಿವಾರ(ಆ. 22) ಒಂಬತ್ತು ತಿಂಗಳು, ನಾಲ್ಕು ವರ್ಷ ಹಾಗೂ ಏಳು ವರ್ಷ ವಯಸ್ಸಿನ ಮೂವರು ಸಹೋದರಿಯರು(Three girls die) ಮೂರು ತಾಸುಗಳಲ್ಲೇ ಮೃತಪಟ್ಟಿದ್ದು, ಕುಟುಂಬವು ಅವರನ್ನು ಸಮಾಧಿ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅವರ ಶವಗಳನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಛತ್ತರ್ಪುರ ಜಿಲ್ಲೆಯ ಪಿಪೋರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8 ಗಂಟೆಗೆ ಮನೀಷಾ(4), 9 ಗಂಟೆಗೆ ಪೂನಂ(7) ಹಾಗೂ 10 ಗಂಟೆಗೆ 9 ತಿಂಗಳ ಚಾಹತ್ ಎಂಬ ಮಗು ಸಾವನ್ನಪ್ಪಿದೆ. ಕುಟುಂಬಸ್ಥರು ಬೆಳಿಗ್ಗೆ 10.30 ರಿಂದ 11 ಗಂಟೆಯ ನಡುವೆ ಮೂವರ ಶವಗಳನ್ನು ಸಮಾಧಿ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಗ್ರಾಮದ ಸರಪಂಚ್ ಸಾವು ಮತ್ತು ಸಮಾಧಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಗ್ರಾಮಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಮಕ್ಕಳ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಛತ್ತರ್ಪುರ ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಖ್ಲೇಚಾ, ಮೂರೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರು ಹುಡುಗಿಯರು ಸಾಯುವ ಮುನ್ನ ಪದೇ ಪದೇ ವಾಂತಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದಾಗ್ಯೂ, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಶವಪರೀಕ್ಷೆ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೂಲಕ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

ಇನ್ನೂ ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಪೂನಂ ಮತ್ತು ಮನೀಷಾ ಶುಕ್ರವಾರ ರಾತ್ರಿ ಇತರ ಕುಟುಂಬ ಸದಸ್ಯರೊಂದಿಗೆ ಚಪಾತಿ ಮತ್ತು ಬದನೆಕಾಯಿ ಪಲ್ಲೆ ತಿಂದಿದ್ದಾರೆ. ಚಾಹತ್ ಎದೆಹಾಲು ಕುಡಿಸಲಾಗಿದೆ. ಬೆಳಗಿನ ಜಾವ 3 ಗಂಟೆಯ ನಂತರ ಮಕ್ಕಳು ಅಸ್ವಸ್ಥರಾದರು,  ವಾಂತಿ ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡವು ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಡಳಿತ, ಪೊಲೀಸ್, ಆಹಾರ ಮತ್ತು ಆರೋಗ್ಯ ಇಲಾಖೆಗಳ ತಂಡಗಳು ಸಾವಿನ ತನಿಖೆ ನಡೆಸುತ್ತಿವೆ. ಆಹಾರ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ಪ್ರಯೋಗಾಲಯ ವಿಶ್ಲೇಷಣೆಗಾಗಿ ಕುಟುಂಬದ ಮನೆಯಿಂದ ಆಹಾರ ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ತನಿಖೆ ನಡೆಯುತ್ತಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net