ತಾವು ಮಿತ್ರಪಕ್ಷಗಳಲ್ಲ: ಸಿಎಂ ವಿಜಯ್ ನೇತೃತ್ವದ ಹೊಸ ಮೈತ್ರಿಕೂಟ ರಚನೆಯ ಸಭೆಯಿಂದ ದೂರ ಉಳಿದ ಎಡಪಕ್ಷಗಳು | Left parties

ಸಿಎಂ ವಿಜಯ್
ಸಿಎಂ ವಿಜಯ್
Published on
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ ಪಕ್ಷ, ರಾಜ್ಯದಲ್ಲಿ ಹೊಸ ಜಾತ್ಯಾತೀತ ಮೈತ್ರಿಕೂಟವನ್ನು ರಚಿಸಲು ಮುಂದಾಗಿದ್ದು, ಇಂದು(ಜು. 01) ಸಿಎಂ ಸಿ. ಜೋಸೆಫ್ ವಿಜಯ್ ನೇತೃತ್ವದಲ್ಲಿ ಮೈತ್ರಿ ಪಕ್ಷಗಳ ಸಭೆ ಕರೆದಿದೆ. ಆದರೆ ಸಿಪಿಐ ಮತ್ತು ಸಿಪಿಎಂ(Left parties) ಸಭೆಯಿಂದ ದೂರ ಉಳಿದಿದ್ದು, ತಾವು ಟಿವಿಕೆಯ ಮೈತ್ರಿಕೂಟದ ಭಾಗವಾಗಿಲ್ಲ ಎಂದು ಹೇಳಿವೆ.
ಆದರೆ ಇದೇ ವೇಳೆ ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಪಿಐ ಮತ್ತು ಸಿಪಿಎಂ ಎರಡೂ ಪಕ್ಷಗಳ ನಾಯಕರು ಸಚಿವಾಲಯದಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದು, ಕಾರ್ಮಿಕರು, ರೈತರು ಮತ್ತು ಸಮಾಜದ ಇತರ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ.
ಇದೇ ವೇಳೆ ಎಡಪಕ್ಷಗಳ ನಾಯಕರು, ಮೈತ್ರಿಕೂಟದ ಸಭೆಯಿಂದ ದೂರ ಉಳಿಯುವ ತಮ್ಮ ನಿರ್ಧಾರವನ್ನು ಸರ್ಕಾರಕ್ಕೆ ವಿರೋಧವೆಂದು ಪರಿಗಣಿಸಬಾರದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಎಡಪಕ್ಷಗಳಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಡಿಎಂಕೆ ಅನಿವಾರ್ಯ ಎನ್ನುವ ಸಂದರ್ಭವಿದ್ದು, ಹಾಗಾಗಿ ಟಿವಿಕೆಯಿಂದ ಅಂತರ ಕಾಯ್ದುಕೊಂಡಿವೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಸಿಪಿಎಂ ಮಾಜಿ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್, ಪಕ್ಷದ ನಿಲುವು ಸ್ಪಷ್ಟವಾಗಿದೆ. ಟಿವಿಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿ ಸಿಪಿಎಂ ಇಲ್ಲ. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಲಾಗಿದೆ. ಮೈತ್ರಿ ಪಕ್ಷಗಳಿಗಾಗಿ ಈ ಸಭೆಯನ್ನು ಕರೆಯಲಾಗಿದ್ದು, ಆದ್ದರಿಂದ ನಾವು ಅದರಲ್ಲಿ ಭಾಗವಹಿಸಲಾಗಲ್ಲ ಎಂದು ಹೇಳಿದ್ದಾರೆ. ಸಿಪಿಐ ರಾಜ್ಯ ಕಾರ್ಯದರ್ಶಿ ಎಂ.ವೀರಪಾಂಡ್ಯನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net