ಯಾರಿಗೆ ಬಂಗಾಳದ ಗದ್ದುಗೆ...? ದೀದಿ-ಬಿಜೆಪಿ ಭವಿಷ್ಯ ನಿರ್ಧರಿಸಲಿವೆ ಈ ಏಳು ಎಂ ಸೂತ್ರಗಳು! | West Bengal Election

West Bengal Election | ಯಾರಿಗೆ ಬಂಗಾಳದ ಗದ್ದುಗೆ...?
West Bengal Election | ಯಾರಿಗೆ ಬಂಗಾಳದ ಗದ್ದುಗೆ...?
Published on
West Bengal Election: ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ಯಶಸ್ಸು ಮಾ, ಮಾತಿ ಮತ್ತು ಮನುಷ್ (ತಾಯಿ, ಮಣ್ಣು ಮತ್ತು ಮನುಷ್ಯ) ಎಂಬ ಭಾವನಾತ್ಮಕ ಘೋಷಣೆಯ ಸುತ್ತಲೇ ಸುತ್ತುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಚುನಾವಣಾ ಸಮರದಲ್ಲಿ ರಾಜಕೀಯದ ಚಿತ್ರಣ ಬದಲಾಗಿದ್ದು, ವಿಜಯದ ಹಾದಿಯನ್ನು ಈಗ ಏಳು ಎಂ (7-M) ಅಂಶಗಳು ನಿರ್ಧರಿಸಲಿವೆ.
ಮುಸ್ಲಿಂ ಮತದಾರರು, ಮಹಿಳೆಯರು, ವಲಸಿಗರು, ಮಾತುವಾ ಸಮುದಾಯ ಮತ್ತು ಬಿಜೆಪಿ ನಿಯೋಜಿಸಿರುವ ಚುನಾವಣಾ ಯಂತ್ರೋಪಕರಣಗಳ ಜೊತೆಗೆ, ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ಅವರ ವೈಯಕ್ತಿಕ ವರ್ಚಸ್ಸು ಈ ಚುನಾವಣೆಯ ಫಲಿತಾಂಶವನ್ನು ರೂಪಿಸಲಿವೆ. 2011ರಲ್ಲಿ ಎಡಪಕ್ಷಗಳ 34 ವರ್ಷಗಳ ಸುದೀರ್ಘ ಆಳ್ವಿಕೆಯನ್ನು ಅಂತ್ಯಗೊಳಿಸಿದಾಗಿನಿಂದಲೂ ಮಮತಾ ಬ್ಯಾನರ್ಜಿಗೆ ಮಹಿಳಾ ಮತ್ತು ಮುಸ್ಲಿಂ ಮತದಾರರೇ ಭದ್ರ ಬುನಾದಿಯಾಗಿದ್ದಾರೆ. ಈ ಬಾರಿಯೂ ದೀದಿ ಸತತ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯುತ್ತಾರೋ ಅಥವಾ ಬಿಜೆಪಿ ಮೊದಲ ಬಾರಿಗೆ ಬಂಗಾಳದ ಗದ್ದುಗೆ ಏರುತ್ತದೆಯೋ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶಗಳು ಇಲ್ಲಿವೆ.
ಮಹಿಳಾ ಮತದಾರರು (Mahila Voters): ಟಿಎಂಸಿಯ ಪ್ರತಿ ಚುನಾವಣಾ ಗೆಲುವಿನ ಹಿಂದೆ ಮಹಿಳೆಯರ ಬೆಂಬಲ ದೊಡ್ಡದಿದೆ. ಲಕ್ಷ್ಮಿರ್ ಭಂಡಾರ್ ನಂತಹ ನೇರ ನಗದು ವರ್ಗಾವಣೆ ಯೋಜನೆ ಮತ್ತು ಬಾಲ್ಯ ವಿವಾಹ ತಡೆದು ಶಿಕ್ಷಣಕ್ಕೆ ಉತ್ತೇಜನ ನೀಡುವ ಕನ್ಯಾಶ್ರೀ ಯೋಜನೆಗಳು ಮಹಿಳೆಯರನ್ನು ಮಮತಾರತ್ತ ಸೆಳೆದಿವೆ. ಆದರೆ, ಈ ಬಾರಿ ಬಿಜೆಪಿ ಮಹಿಳಾ ಸುರಕ್ಷತೆಯನ್ನೇ ಅಸ್ತ್ರವಾಗಿಸಿಕೊಂಡಿದೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ಸಂತ್ರಸ್ತೆಯ ತಾಯಿಯನ್ನೇ ಪಣಿಹತಿ ಕ್ಷೇತ್ರದಿಂದ ಕಣಕ್ಕಿಳಿಸಿ ಮಮತಾಗೆ ಮಹಿಳಾ ಮತಗಳಲ್ಲೇ ಪೆಟ್ಟು ನೀಡಲು ಮುಂದಾಗಿದೆ.
ಮುಸ್ಲಿಂ ಮತದಾರರು (Muslim Votesrs): ಬಂಗಾಳದ ಒಟ್ಟು ಜನಸಂಖ್ಯೆಯಲ್ಲಿ ಶೇ. 27 ರಷ್ಟಿರುವ ಮುಸ್ಲಿಂ ಸಮುದಾಯವು ಚುನಾವಣೆಯ ದಿಕ್ಸೂಚಿಯಾಗಿದೆ. 2021ರಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ 146 ಕ್ಷೇತ್ರಗಳ ಪೈಕಿ ಟಿಎಂಸಿ 131ರಲ್ಲಿ ಜಯಭೇರಿ ಬಾರಿಸಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ಎನ್‌ಆರ್‌ಸಿ (NRC) ಭೀತಿಯಿಂದಾಗಿ ಈ ಸಮುದಾಯ ಮಮತಾ ಬೆನ್ನಿಗೆ ನಿಂತಿತ್ತು. ಈ ಬಾರಿ ಕೂಡ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಬಿಜೆಪಿಯ ಭರವಸೆಯು, ಮುಸ್ಲಿಂ ಮತದಾರರು ಮತ್ತೊಮ್ಮೆ ಸಾಮೂಹಿಕವಾಗಿ ತೃಣಮೂಲ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲು ಪ್ರೇರೇಪಿಸುವ ಸಾಧ್ಯತೆಯಿದೆ(ಏಜೆನ್ಸೀಸ್​).
ವಲಸಿಗರು (Migrants): ಬಂಗಾಳದ ಚುನಾವಣಾ ಫಲಿತಾಂಶವನ್ನು ದಿಕ್ಕಾಪಾಲು ಮಾಡುವ ಶಕ್ತಿ ಹೊಂದಿರುವ ಗುಂಪೆಂದರೆ ಅದು ವಲಸಿಗ ಮತದಾರರು. ಸಾಮಾನ್ಯವಾಗಿ ಇವರ ಒಲವನ್ನು ಊಹಿಸುವುದು ಕಷ್ಟವಾದರೂ, ಈ ಬಾರಿ ಇವರ ಪ್ರಭಾವ ಹೆಚ್ಚಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ಮತ್ತು ತಾವು ಈ ರಾಜ್ಯದ ಕಾನೂನುಬದ್ಧ ನಿವಾಸಿಗಳು ಎಂದು ಸಾಬೀತುಪಡಿಸಲು ಈ ಬಾರಿ ಮತದಾನ ಮಾಡುವುದು ಅನಿವಾರ್ಯ ಎಂಬ ಆತಂಕ ವಲಸಿಗರಲ್ಲಿ ಮನೆಮಾಡಿತ್ತು. ಈ ಕಾರಣದಿಂದಾಗಿ, ರಾಜ್ಯದ ಹೊರಗಿದ್ದ ವಲಸೆ ಕಾರ್ಮಿಕರು ಮತ್ತು ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಬಂಗಾಳಕ್ಕೆ ಮರಳಿ ಮತ ಚಲಾಯಿಸಿದ್ದಾರೆ.
ಮಾತುವಾ ಸಮುದಾಯ (Matua Community): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇಂದು ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಲು ಪರಿಶಿಷ್ಟ ಜಾತಿಗೆ ಸೇರಿದ ಮಾತುವಾ ಸಮುದಾಯದ ಬೆಂಬಲವೇ ಕಾರಣ. ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು ಶೇ. 17ರಷ್ಟಿರುವ ಈ ಸಮುದಾಯದ ಮತಗಳು ಯಾವುದೇ ಪಕ್ಷದ ಗೆಲುವಿಗೆ ಅತ್ಯಗತ್ಯ. ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿರುವುದರಿಂದ, ಮಾತುವಾ ಸಮುದಾಯದ ಒಲವು ಯಾರ ಪರವಾಗಲಿದೆ ಎಂಬುದು ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net