ವೈದ್ಯೆಯಾಗಬೇಕಿದ್ದವಳು ಹೆಣವಾದಳು: ಲವರ್​ ನೀಡುತ್ತಿದ್ದ ಆ ಭೀಕರ ಕಿರುಕುಳಕ್ಕೆ ಸಾಕ್ಷಿಯಾಯ್ತು 6 ಪುಟಗಳ ಪತ್ರ! | Doctor

Doctor
Doctor
Published on
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಸ್ನಾತಕೋತ್ತರ ದಂತವೈದ್ಯಕೀಯ (MDS) ವಿದ್ಯಾರ್ಥಿನಿಯೊಬ್ಬಳು(Doctor) ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯತಮನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮನ ಮಾನಸಿಕ ಕಿರುಕುಳ ಹಾಗೂ ಶಂಕೆ ಈ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮುಂಬೈನ ಆಂಟೊಪ್ ಹಿಲ್ ಪ್ರದೇಶದಲ್ಲಿ ವಾಸವಾಗಿದ್ದ 24 ವರ್ಷದ ಸ್ತುತಿ ಸೋನವಾನೆ ನಿನ್ನೆ ಬೆಳಿಗ್ಗೆ ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಿಗ್ಗೆ 11 ಗಂಟೆಯಾದರೂ ಸ್ತುತಿ ತನ್ನ ಕೊಠಡಿಯಿಂದ ಹೊರಬಾರದಿದ್ದಾಗ ಆತಂಕಗೊಂಡ ಪೋಷಕರು ಬಾಗಿಲು ಮುರಿದು ಒಳಹೋದಾಗ ಈ ದುರಂತ ಬೆಳಕಿಗೆ ಬಂದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

6 ಪುಟಗಳ ಡೆತ್‌ನೋಟ್‌..!

ಪೊಲೀಸರಿಗೆ ಸ್ತುತಿ ಅವರ ಕೊಠಡಿಯಲ್ಲಿ 6 ಪುಟಗಳ ಸುದೀರ್ಘ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ಪ್ರಿಯತಮ ಫುಜೈಲ್ ಮೊಹಮ್ಮದ್ ಖಾನ್ ನೀಡುತ್ತಿದ್ದ ಮಾನಸಿಕ ಹಿಂಸೆಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಫುಜೈಲ್ ಸದಾ ಸ್ತುತಿಯ ನಡತೆಯನ್ನು ಶಂಕಿಸುತ್ತಿದ್ದನು. ಆಕೆ ಬೇರೆಯವರ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ನೋವುಂಟು ಮಾಡುತ್ತಿದ್ದನು. ಪ್ರಿಯತಮನ ನಿರಂತರ ಶಂಕೆ ಮತ್ತು ಕೀಳುಮಟ್ಟದ ಮಾತುಗಳಿಂದಾಗಿ ಇವರ ಸಂಬಂಧವು ಅತ್ಯಂತ ವಿಷಕಾರಿಯಾಗಿತ್ತು ಎಂದು ಸ್ತುತಿ ಪತ್ರದಲ್ಲಿ ಬರೆದಿದ್ದಾರೆ.

ಪ್ರಿಯತಮನ ಬಂಧನ

ಡೆತ್‌ನೋಟ್ ಆಧಾರದ ಮೇಲೆ ಪೊಲೀಸರು ಫುಜೈಲ್ ಮೊಹಮ್ಮದ್ ಖಾನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ದಂತವೈದ್ಯೆಯಾಗುವ ಕನಸು ಹೊತ್ತಿದ್ದ ಪ್ರತಿಭಾವಂತ ಯುವತಿಯೊಬ್ಬಳು ಪ್ರೇಮ ವೈಫಲ್ಯ ಮತ್ತು ಮಾನಸಿಕ ಕಿರುಕುಳಕ್ಕೆ ಬಲಿಯಾಗಿರುವುದು ಮುಂಬೈನ ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net