ಯುಪಿಐ ವಹಿವಾಟುಗಳ ಮೇಲಿನ ಶುಲ್ಕಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್: ಕೇಂದ್ರಕ್ಕೆ ನೋಟಿಸ್ ಜಾರಿ | Supreme Court

2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲಿನ ಶುಲ್ಕವನ್ನು ವಿಧಿಸುವ ಕೇಂದ್ರ ಸರ್ಕಾರದ ಹೊಸ ಆದೇಶಕ್ಕೆ ತಡೆ ಕೋರಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಸೋಮವಾರ(ಸೆ. 28) ವಿವರವಾದ ಅಫಿಡವಿಟ್ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.
Supreme Court
ಸುಪ್ರೀಂಕೋರ್ಟ್
Published on: 

ನವದೆಹಲಿ: 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲಿನ ಶುಲ್ಕವನ್ನು ವಿಧಿಸುವ ಕೇಂದ್ರ ಸರ್ಕಾರದ ಹೊಸ ಆದೇಶಕ್ಕೆ ತಡೆ ಕೋರಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಸೋಮವಾರ(ಸೆ. 28) ವಿವರವಾದ ಅಫಿಡವಿಟ್ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ.

ಅಕ್ಟೋಬರ್ 15 ರಿಂದ ಜಾರಿಗೆ ಬರಲಿರುವ 2,000 ರೂ.ಗಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ಪಾವತಿಗಳ ಮೇಲಿನ 0.4% ವ್ಯಾಪಾರಿ ರಿಯಾಯಿತಿ ದರ ವಿಧಿಸುವುದನ್ನು ಪ್ರಶ್ನಿಸಿ ವಕೀಲ ಅಂಜನ್ ದತ್ತ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಕೇಂದ್ರದ ಸೆಪ್ಟೆಂಬರ್ 14-15ರ ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ ನೀಡಲು ಅಥವಾ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿತು. ಅಫಿಡವಿಟ್ ಮೂಲಕ ಎಲ್ಲಾ ಸಂಗತಿಗಳನ್ನು ಮಂಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

Also Read
ನೇಪಾಳದ ಹಸಿರು ಬಣ್ಣದ ಒಂಟಿ ಮನೆ ನೆನಪಿಸಿದ ಈ ದುರಂತ! ಆದರೆ, ಇಲ್ಲಿ ಆಗಿದ್ದೇ ಬೇರೆ... | Nepal Flood
Supreme Court

ಅರ್ಜಿದಾರರ ಪರ ವಕೀಲರು, ಯುಪಿಐ ಕಪ್ಪು ಹಣವನ್ನು ನಿಯಂತ್ರಿಸಿದೆ. ಮತ್ತು ಹೊಸ ಶುಲ್ಕಗಳು ಡಿಜಿಟಲ್ ವಹಿವಾಟುಗಳನ್ನು ನಿರುತ್ಸಾಹಗೊಳಿಸುತ್ತದೆ ಎಂದು ವಾದಿಸಿದರು.

ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್, ಅ. 15ರಿಂದ ಅನುಷ್ಠಾನ ಪ್ರಾರಂಭವಾಗಲಿದ್ದು, ಶೇ. 96 ರಷ್ಟು ಗೇಟ್‌ವೇ ಬಳಕೆದಾರರು ಇದರಿಂದ ವಿನಾಯಿತಿ ಪಡೆಯಲಿದ್ದಾರೆ. ಅಗತ್ಯ ಸೇವೆಗಳಿಗೆ ಕೇವಲ 5 ರೂಪಾಯಿಗಳ ಮಿತಿ ಅನ್ವಯಿಸುತ್ತದೆ. ಒಟ್ಟಾರೆ ಮೌಲ್ಯದ ಮೇಲೂ ಒಂದು ಮಿತಿಯಿದೆ. ಇದು ತೆರಿಗೆಯೂ ಅಲ್ಲ ಅಥವಾ ಶುಲ್ಕವೂ ಅಲ್ಲ ಎಂದ ಅವರು, ಇದನ್ನು ಉದ್ಯಮ ಇತ್ಯರ್ಥ ಕಾರ್ಯವಿಧಾನ ಎಂದು ಬಣ್ಣಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಪೀಠ, ತಾಂತ್ರಿಕ ವಿವರಗಳನ್ನು ಅಫಿಡವಿಟ್‌ನಲ್ಲಿ ಸೇರಿಸಲಿ ಎಂದು ವಿಚಾರಣೆಯನ್ನು ಮುಂದೂಡಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net