ಸಿಂಧ್​ ಎಂದರೆ ನೆನಪುಗಳ ನೆರೆ ನನಗೂ, ನನ್ನ ದೇಶಕ್ಕೂ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
"ನೆಲದ ಬಗ್ಗೆ ಹೇಳುವುದಾದರೆ ಸಿಂಧ್​ ಇಂದು ಭಾರತದ ಭಾಗವಾಗಿಲ್ಲದಿರಬಹುದು. ಆದರೆ ನಾಗರಿಕತೆಯ ದೃಷ್ಟಿಯಿಂದ ಸಿಂಧ್​ ಭಾರತದ ಭಾಗವಾಗಿಯೇ ಇದೆ. ಗಡಿಗಳು ಬದಲಾಗುತ್ತವೆ. ಯಾರಿಗೆ ಗೊತ್ತು ಮುಂದೊಂದು ದಿನ ಸಿಂಧ್​ ಭಾರತಕ್ಕೆ ಹಿಂತಿರುಗಬಹುದು.' ಇದೇ ಸೋಮವಾರ, ನವೆಂಬರ್​ 24ರಂದು ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ನವದೆಹಲಿಯಲ್ಲಿ ಸಿಂಧಿ ಸಮುದಾಯದ ಸಭೆ ಉದ್ದೇಶಿಸಿ ಮಾತನಾಡುತ್ತ ಹೇಳಿದ ಮಾತಿದು. ಇದನ್ನು ಕೇಳುತ್ತಿದ್ದಾಗ ನನ್ನ ಮನಸ್ಸಿನಲ್ಲಿ ನೆನಪುಗಳ ಮಹಾಪೂರ. ಅವು ಸಿಂಧ್​ನ ಕುರಿತಾಗಿ ನಾನು ಓದಿ ಕೇಳಿ ತಿಳಿದುಕೊಂಡ ವಿಷಯಗಳ ಜತೆಗೆ ನನ್ನದೇ ಅನುಭವಗಳ ಮೆಲುಕು ಸಹ ಆಗಿವೆ.
1980ರ ದಶಕದಲ್ಲಿ ದಕ್ಷಿಣ ದೆಹಲಿಯಲ್ಲಿ ನಾವಿದ್ದ ಅಪಾರ್ಟ್​ಮೆಂಟ್​ ಕಟ್ಟಡದ ಮೇಲಿನ ಅಂತಸ್ತಿನಲ್ಲಿದ್ದ ಸಿಂಧಿ ಸಂಸಾರ, ಯಾವಾಗಲೂ ಮೃದು ಧ್ವನಿಯಲ್ಲಿ "ಬೇಟಾ ಬೇಟಾ' ಎಂದು ಪ್ರೀತಿಯಿಂದ ಮಾತಾಡಿಸುತ್ತಿದ್ದ ವಿಧಾನಿ ಆಂಟಿ, ಅವರ ಮಹಾನ್​ ಸಿಂಧಿ ಸಂತ ಜೂಲೆಲಾಲನ ಆರಾಧನೆ, ವರ್ಷಕ್ಕೊಂದು ಸಲ ಅಕ್ಕಪಕ್ಕದ ಐವರು ಎಳೆಯ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಪೂಜೆ ಮಾಡಿ ಭಕ್ಷ್ಯಭೋಜ್ಯಗಳನ್ನು ತಿನ್ನಿಸಿ ಅವರೆಲ್ಲರ ಕಾಲುಗಳಿಗೆ ನಮಸ್ಕರಿಸುತ್ತಿದ್ದ ಅವರ ಆಚರಣೆ; ದೆಹಲಿ ವಿಶ್ವವಿದ್ಯಾಲಯದ ನನ್ನ ಗೆಳತಿ ಕಿರಣ್​, ಅವಳ ಚಂದದ ನಗೆಯೊಂದಿಗಿನ ಸಂಗೀತದಂತಹ ಸ್ವರ... ಎಲ್ಲವೂ ನೆನಪಾಗಿಬಿಟ್ಟವು. ನೆನಪುಗಳ ಸರಣಿ ಮುಂದುವರಿದು ಹೊಸ ಶತಮಾನ ತಲುಪಿತು. ಹದಿನೈದು ವರ್ಷಗಳ ಅಂತರದ ನಂತರ 2007ರಲ್ಲಿ ಮತ್ತೆ ದೆಹಲಿಗನಾದಾಗ ವಿಧಾನಿ ಆಂಟಿ ಇಲ್ಲವಾಗಿದ್ದರು, ಕಿರಣ್​ ಗುರುತೇ ಇಲ್ಲದಂತೆ ಆ ವಿಶಾಲ ನಗರದಲ್ಲಿ ಕಳೆದುಹೋಗಿದ್ದಳು. ಆದರೆ ನಮ್ಮ ಸಿಂಧ್​ ಸಾಂಗತ್ಯವನ್ನು ಮತ್ತೆ ಚಿಗುರಿಸುವಂತೆ ನಮಗೊಬ್ಬರು ಸಿಂಧಿ ಡಾಕ್ಟರ್​ ಸಿಕ್ಕಿಬಿಟ್ಟರು. ಮುಂದಿನ ಹದಿನೈದು ವರ್ಷಗಳವರೆಗೆ ಮನೆಯ ಎಲ್ಲರ ಆರೋಗ್ಯದ ಜವಾಬ್ದಾರಿ ಆ ಭಾರಿ ದೇಹದ, ಮೃದು ಮಾತಿನ ವೈದ್ಯರದು. ಆ ಅವಧಿಯ ಅಂತಿಮ ಮೂರು ವರ್ಷಗಳಲ್ಲಿ ನಾವು ಬದುಕಿದ್ದುದು ಒಂದು ಸಿಂಧಿ ಕುಟುಂಬದ ಜತೆ, ಒಂದೇ ಆವರಣದೊಳಗೆ...
ಸಿಂಧಿಗಳ ಜತೆ ನನ್ನ ಒಡನಾಟದ ನೆನಪುಗಳ ಜತೆಗೆ ಹೆಣೆದುಕೊಳ್ಳುವ ಇನ್ನೊಂದು ನೆನಪೆಂದರೆ ವಿದ್ಯಾರ್ಥಿ ದಿನಗಳಲ್ಲಿ ನಾನು ಓದಿದ್ದ ಒಂದು ಸಿಂಧಿ ಹನಿಗಥೆ. ಸಂಭಾಷಣೆಯ ರೂಪದಲ್ಲಿದ್ದ, ಆ ಕಥೆಯ ಶೀರ್ಷಿಕೆಯಾಗಲೀ, ಕಥೆಗಾರರ ಹೆಸರಾಗಲೀ ನನಗೀಗ ನೆನಪಿಲ್ಲ. ಆದರೆ ಆ ಕಥೆ ಮಾತ್ರ ನೆನಪಿದೆ. ಅದು ಹೀಗಿತ್ತು&"ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಏಕೆ ನಿರ್ಮಿಸಲಾಯಿತು?'
"ಯಾಕೆಂದರೆ ನಾವು ಭಾರತೀಯರಿಗಿಂತ ಬೇರೆ. ಅವರಿಂದ ದೂರವಾಗಿ ನಾವು ಪಾಕಿಸ್ತಾನಿಯರಾಗಿ ಒಂದಾಗಿ ಬದುಕಬೇಕಿತ್ತು.'
"ನಾವೀಗ ಪಾಕಿಸ್ತಾನಿಯರಾಗಿ ಒಂದಾಗಿ ಬದುಕುತ್ತಿದ್ದೇವೆಯೇ?'
"ಹೌದು.'
"ಹಾಗಿದ್ದರೆ ಪಂಜಾಬಿಗಳು, ಸಿಂಧಿಗಳು, ಬಲೂಚಿಗಳು, ಪಖ್ತೂನಿಗಳು ಎಂಬ ಭೇದ ಯಾಕಿದೆ? ದ್ವೇಷ ಯಾಕಿದೆ? ಭಾರತವನ್ನು ಒಡೆದದ್ದು ಇದಕ್ಕೇ ಏನು?'
"ತಪ್ಪಾಯಿತು. ಮಿಸಿ. ಮತ್ತೊಮ್ಮೆ ಹೀಗೆ ಮಾಡುವುದಿಲ್ಲ.'
ಕಥೆ ಇಷ್ಟೇ. ಆದರೆ ಅದೆಂತಹ ಸತ್ಯವನ್ನು ಅದು ಅನಾವರಣಗೊಳಿಸುತ್ತದೆ! ಭಾರತವನ್ನು ಒಡೆದು ಪಾಕಿಸ್ತಾನವನ್ನು ನಿರ್ಮಿಸಿದ್ದು ತಪ್ಪು ಎನ್ನುವುದು ಇಂದು ಇತಿಹಾಸದ ನಿರ್ಮೋಹಿ ನೋಡುಗರ ಎದೆಗೆ ನಾಟುವ ಸತ್ಯ. ಅದನ್ನೇ ನಮ್ಮ ರಕ್ಷಣಾ ಮಂತ್ರಿ ಕೆಲವೇ ಮಾತುಗಳಲ್ಲಿ ಹೇಳಿದ್ದು. ಸರಿಸುಮಾರು ಎಂಟು ದಶಕಗಳ ಹಿಂದೆ ಕೆಲವರಿಂದಾದ ಇತಿಹಾಸ ನಿರಾಕರಣೆಯ ತಪ್ಪನ್ನು, ಆ ತಪ್ಪು ಸರಿಯಾಗಬಹುದಾದ ಸಾಧ್ಯತೆಯನ್ನು ಅವರ ಮಾತುಗಳು ಧ್ವನಿಸುತ್ತವೆ. ಸಿಂಧ್​ ನಮ್ಮ ನಾಗರಿಕತೆಯ ಭಾಗ. ಉಪಖಂಡದಲ್ಲಿ ಮಾನವನ ನಾಗರಿಕ ಬದುಕು ಆರಂಭವಾದದ್ದೇ ಸಿಂಧ್​ನಲ್ಲಿ, ಸಿಂಧೂ ನದಿಯ ದಡದಲ್ಲಿ. ಅದನ್ನು ಇಂದು ಪಾಕಿಸ್ತಾನಿಯರು ಮರೆತಿರಬಹುದು. ಆದರೆ ನಾವು ಭಾರತೀಯರು ಅದನ್ನೆಂದೂ ಮರೆಯುವುದಿಲ್ಲ. ಈ ನೆಲದ ಜನರಿಗೆ "ಹಿಂದೂ' ಎಂಬ, ಈ ನಾಡಿಗೆ "ಹಿಂದೂಸ್ತಾನ' ಎಂಬ ಹೆಸರು ಬಂದದ್ದೇ ಸಿಂಧೂ ನದಿಯಿಂದ. ಪ್ರಾಚಿನ ಪಾರಸಿ ಭಾಷೆಯಲ್ಲಿ "ಸ'ಕಾರ "ಹ'ಕಾರವಾಗಿ ಬದಲಾಗುತ್ತಿದ್ದುದರಿಂದ ಸಿಂಧೂ ಎನ್ನುವುದು ಹಿಂದೂ ಆಯಿತು. ಆ ಹೆಸರು ಇಲ್ಲಿನ ಜನಕ್ಕೂ, ಅವರ ಧಾರ್ಮಿಕ ನಂಬುಗೆಗಳಿಗೂ, ಅವರ ನೆಲಕ್ಕೂ ಬಂತು. ಇಂದಿಗೂ ಪಶ್ಚಿಮ ಏಷ್ಯನ್ನರು ಭಾರತವನ್ನು ಕರೆಯುವುದು "ಹಿಂದ್​' ಎಂದು. ಹಿಂದ್​ ಎಂಬ ಹೆಸರು ಬಂದದ್ದು ಸಿಂಧ್​ ಎಂಬ ಹೆಸರಿನಿಂದ!
ಹೀಗೆ ಭಾರತಕ್ಕೆ ಅಂದರೆ ಹಿಂದ್​ಗೆ ಅಂದರೆ ಇಂಡಿಯಾಗೆ ಹೆಸರು ನೀಡಿದ ಸಿಂಧ್​ನ ಇತಿಹಾಸ ಕ್ರಿ.ಶ. 111&12ರಲ್ಲಿ ಮಹತ್ತರ ತಿರುವು ಪಡೆಯಿತು. ಅರಬ್​ ದಂಡನಾಯಕ ಮಹಮ್ಮದ್​ ಬಿನ್​ ಖಾಸಿಂ ಸಿಂಧ್​ನ ಅರಸ ದಹೀರ್​ನನ್ನು ಸೋಲಿಸಿ ಆ ಪ್ರದೇಶವನ್ನು ಅರಬ್​ ಸಾಮ್ರಾಜ್ಯಕ್ಕೆ ಸೇರಿಸಿದ. ಅದರೊಂದಿಗೆ ಸಿಂಧ್​ನಲ್ಲಿ, ಆ ಮೂಲಕ ಭಾರತದಲ್ಲಿ ಇಸ್ಲಾಂ ವೇಗವಾಗಿ ಹರಡತೊಡಗಿತು. ಆದಾಗ್ಯೂ ಸಿಂಧ್​ನ ಪೂರ್ವಭಾಗ 1947ರವರೆಗೂ ಹಿಂದೂ ಬಹುಸಂಖ್ಯಾತವಾಗಿಯೇ ಉಳಿದಿದ್ದೊಂದು ವಿಶೇಷ.
ಬ್ರಿಟಿಷ್​ ವಸಾಹತುಶಾಹಿಗಳ ಕಾಲದಲ್ಲಿ ಸಿಂಧ್​ ವಿಶಾಲ ಬಾಂಬೆ ಪ್ರೆಸಿಡೆನ್ಸಿಯ ಭಾಗ. ಆದರೆ ಸಿಂಧ್​ನ ಜನತೆ ತಮ್ಮದು ಪ್ರತ್ಯೇಕ ಪ್ರಾಂತ್ಯವಾಗಬೇಕೆಂದು ಬಯಸಿದ್ದರಿಂದ (ಅದರ ಹಿಂದೆ ಬ್ರಿಟಿಷರು ಮತ್ತು ಮುಸ್ಲಿಂಲೀಗ್​ನ ಕಿತಾಪತಿ ಇತ್ತು!) 1935ರಲ್ಲಿ ಸಿಂಧ್​ ಅನ್ನು ಬಾಂಬೆ ಪ್ರೆಸಿಡೆನ್ಸಿಯಿಂದ ಪ್ರತ್ಯೇಕಿಸಲಾಯಿತು. ನಂತರದ ಇಂದಿನ ಪಾಕಿಸ್ತಾನದ ಪ್ರಾಂತ್ಯಗಳಲ್ಲಿ 1946ರ ಪ್ರಾಂತೀಯ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್​ ಅನ್ನು ಆಯ್ಕೆ ಮಾಡಿದ ಏಕೈಕ ಪ್ರಾಂತ್ಯ ಸಿಂಧ್​! ಪರಿಣಾಮವಾಗಿ 1947ರಲ್ಲಿ ದೇಶವಿಭಜನೆಯಾದಾಗ ಸಿಂಧ್​ ಪಾಕಿಸ್ತಾನದ ಭಾಗವಾಗಲು ಯಾವ ಅಡ್ಡಿಯೂ ಆಗಲಿಲ್ಲ.
ಆದರೆ ಇಲ್ಲೊಂದು ದುರದೃಷ್ಟಕರ ಸಂಗತಿಯನ್ನು ನೆನಪಿಸಿಕೊಳ್ಳಬೇಕು. ಸಿಂಧ್​ನ ಪೂರ್ವಭಾಗದ ಥಾರ್​ಪಾರ್ಕರ್​ ಜಿಲ್ಲೆ ಅಂದು ಹಿಂದೂ ಬಹುಸಂಖ್ಯಾತ. ಅಸ್ಸಾಂನ ಮುಸ್ಲಿಂ ಬಹುಸಂಖ್ಯಾತ ಸಿಲ್ಹೆಟ್​ ಜಿಲ್ಲೆಯನ್ನು ಪೂರ್ವ ಪಾಕಿಸ್ತಾನದ ಭಾಗವಾಗಿಸುವಂತೆ ಮುಸ್ಲಿಂ ಲೀಗ್​ ಮಾಡಿಕೊಂಡ ಮನವಿಯನ್ನು ಬ್ರಿಟಿಷ್​ ವಸಾಹತುಶಾಹಿಗಳು ಮಾನ್ಯ ಮಾಡಿದ ಹಿನ್ನೆಲೆಯಲ್ಲಿ ಹಿಂದೂ ಬಹುಸಂಖ್ಯಾತ ಥಾರ್​ಪಾರ್ಕರ್​ ಜಿಲ್ಲೆಯನ್ನು ಸಿಂಧ್​ನಿಂದ ಪ್ರತ್ಯೇಕಿಸಿ ಭಾರತಕ್ಕೆ ನೀಡುವಂತೆ ಕಾಂಗ್ರೆಸ್​ ಪ ಬ್ರಿಟಿಷ್​ ಸರ್ಕಾರಕ್ಕೆ ಮನವಿ ಸಲ್ಲಿಸಬಹುದಾಗಿತ್ತು. ಆದರೆ ಆ ಕುರಿತಾಗಿ ಕಾಂಗ್ರೆಸ್​ ನಾಯಕರು ದಿವ್ಯರ್ನಿಲ್ಯ ತೋರಿದ ಕಾರಣ ಅಲ್ಲಿನ ಹಿಂದೂಗಳು ಪಾಕಿಸ್ತಾನಿಗಳಾಗಿಹೋದರು. ಅವರಲ್ಲಿ ಬಹಳಷ್ಟು ಜನ 1965ರ ಯುದ್ಧದ ಸಮಯದಲ್ಲಿ ಭಾರತಕ್ಕೆ ಓಡಿಬಂದರು. ಇಷ್ಟಾಗಿಯೂ ಇಂದಿಗೂ ಆ ಜಿಲ್ಲೆಯ ಸುಮಾರು ಶೇಕಡ 40ರಷ್ಟು ಜನ ಇಂದಿಗೂ ಹಿಂದೂಗಳೇ.
ಪಾಕಿಸ್ತಾನದ ಏಕೈಕ ಬಂದರು ನಗರ ಕರಾಚಿ ಇರುವುದು ಸಿಂಧ್​ನಲ್ಲಿ. ದೇಶದ ಅತಿ ದೊಡ್ಡ ನಗರವೂ ಆದ ಅದು ಪಾಕಿಸ್ತಾನದ ರಾಜಧಾನಿಯಾಯಿತು. ಆದರೆ ಮುಂದಿನ ಒಂದು ದಶಕದಲ್ಲಿ ಪಾಕಿಸ್ತಾನದ ರಾಜಕೀಯ ಅಧಿಕಾರ ಭಾರತದಿಂದ ವಲಸೆಹೋಗಿದ್ದ ಮುಸ್ಲಿಮರ ಕೈತಪ್ಪಿ ಸ್ಥಳಿಯ ಪಂಜಾಬಿಗಳ ಕಪಿಮುಷ್ಟಿಗೆ ಬಿದ್ದಾಗ ಅವರು ರಾಜಧಾನಿಯನ್ನೂ ತಮ್ಮ ಪಂಜಾಬ್​ಗೆ ಸ್ಥಳಾಂತರಿಸಿದರು. 1959ರಲ್ಲಿ ಗ್ಯಾರಿಸನ್​ ಪಟ್ಟಣ ರಾವಲ್​ಪಿಂಡಿಯ ಬಳಿ ಹೊಸದಾಗಿ ಇಸ್ಲಾಮಾಬಾದ್​ ನಗರವನ್ನು ಕಟ್ಟಿ ಅದನ್ನು ರಾಜಧಾನಿಯನ್ನಾಗಿಸಿದರು. ಅದರೊಂದಿಗೆ ಪಾಕಿಸ್ತಾನದ ಉಳಿದೆಲ್ಲ ಪ್ರಾಂತ್ಯಗಳ ಮೇಲೆ ಪಂಜಾಬಿಗಳ ದಬ್ಬಾಳಿಕೆ ಆರಂಭವಾಯಿತು. ಹೆಚ್ಚು ದೌರ್ಜನ್ಯಕ್ಕೊಳಗಾದುದೆಂದರೆ ಸಿಂಧ್​. ಇಂದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ. 14 ಸಿಂಧಿಗಳು. ಆದರೆ ಪಾಕಿಸ್ತಾನಿ ಆಡಳಿತಶಾಹಿಯಲ್ಲಿ ಅವರ ಪಾಲು ಶೇ. 5 ಮಾತ್ರ. ಸೇನೆಯಲ್ಲಂತೂ ಸಿಂಧಿಗಳ ಪಾಲು ಇನ್ನೂ ನಿಕೃಷ್ಟ, ಕೇವಲ ಶೇ. 2! ಜತೆಗೆ ಶಿಣಕ್ರಮದಲ್ಲಿ ಉರ್ದು ಭಾಷೆಯ ಹೇರಿಕೆ ಬೇರೆ. ಇದೆಲ್ಲದರಿಂದ ನೊಂದ ಸಿಂಧಿಗಳು ಪಾಕಿಸ್ತಾನದಿಂದ ಪ್ರತ್ಯೇಕಗೊಳ್ಳಲು 1970ರ ದಶಕದಿಂದಲೂ ಆಂದೋಲನ ನಡೆಸುತ್ತಿದ್ದಾರೆ. ಅದರ ಮುಂಚೂಣಿಯಲ್ಲಿರುವುದು ಜಿಯೇ ಸಿಂಧ್​ ಸಂಟನೆ.
ಪ್ರತ್ಯೇಕ "ಸಿಂಧೂದೇಶ್​'ಗಾಗಿ ಸಿಂಧಿಗಳ ಹೋರಾಟ ಇಂದು ತೀವ್ರಗೊಂಡಿದೆ. ಸಿಂಧೂನದಿಯ ನೀರನ್ನು ಹೆಚ್ಚು ಬಳಸಿಕೊಳ್ಳುತ್ತಿರುವುದು ಪಂಜಾಬ್​. ಸಿಂಧ್​ಗೆ ಹರಿಯುತ್ತಿದ್ದ ನೀರನ್ನು ಇನ್ನೂ ಕಡಿಮೆಗೊಳಿಸಿ ಅದನ್ನು ಪಂಜಾಬ್​ನ ಚೋಲಿಸ್ತಾನ್​ ಮರುಭೂಮಿಗೆ ಹರಿಸಲು ಇದೇ ಏಪ್ರಿಲ್​& ಮೇನಲ್ಲಿ ಹುನ್ನಾರ ಆರಂಭವಾದಾಗ ಸಿಂಧ್​ ವ್ಯಾಪಕ ಅಶಾಂತಿಯನ್ನು ಕಂಡಿತು. ಅದು ಇಂದಿಗೂ ನಿಂತಿಲ್ಲ. ನೀರಿನ ಜತೆ ಸರ್ಕಾರಿ ನೌಕರರಿಗೆ ಸಂಬಳ ಸಿಗದಿರುವುದು ಹಾಗೂ ಕಳಪೆ ಆರೋಗ್ಯ ಸೇವೆಯೂ ಸಿಂಧಿಗಳನ್ನು ರೊಚ್ಚಿಗೆಬ್ಬಿಸಿದೆ. ಇಂದು ಸಿಂಧ್​ನಲ್ಲಿ ವ್ಯಾಪಕ ದಂಗೆಗಳಾಗುತ್ತಿವೆ.
ಇಂತಹ ಸನ್ನಿವೇಶದಲ್ಲಿ ಸಿಂಧ್​ ಮತ್ತೆ ಭಾರತದ ಭಾಗವಾಗಬಹುದು ಎಂದು ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಹೇಳಿದ್ದು, ಅದನ್ನು ಸಮರ್ಥಿಸಿ, "ನಾವು ಭಾರತದಲ್ಲಿ ಸೇರಲು ತಯಾರಾಗಿದ್ದೇವೆ' ಎಂದು ಸಿಂಧಿ ಪ್ರತ್ಯೇಕತಾವಾದಿ ನಾಯಕ ಶಬೀಬುರ್​ಫತ್​ ಹೇಳಿದ್ದು ಪಾಕಿಸ್ತಾನಿ ಸರ್ಕಾರವನ್ನು ಕಂಗೆಡಿಸಿದೆ. ರಾಜನಾಥ್​ ಸಿಂಗ್​ ಹಿಂದುತ್ವ ವಿಸ್ತರಣಾವಾದದ ಮಾತಾಡುತ್ತಿದ್ದಾರೆ ಎಂದು ಅಲವತ್ತುಕೊಂಡ ಅದು, ವಾಸ್ತವಗಳನ್ನು ನಿರ್ಲಕ್ಷಿಸಿ ಶಾಂತಿಯನ್ನು ಭಂಗಗೊಳಿಸುವ ಮಾತುಗಳನ್ನು ಭಾರತ ಆಡಬಾರದು ಎಂದು ಹೇಳಿಕೆ ನೀಡಿದೆ. ವಾಸ್ತವವೆಂದರೆ ರಾಜನಾಥ್​ ಸಿಂಗ್​ ಹೇಳಿದ್ದು ವಾಸ್ತವವನ್ನು ಸರಿಯಾಗಿ ಗ್ರಹಿಸಿಯೇ.
ಪಾಕಿಸ್ತಾನವನ್ನು ಸರಿದಾರಿಗೆ ತರುವ ಪ್ರಯತ್ನ$ ಸಿಂಧ್​ನಿಂದಲೇ ಆರಂಭಿಸಬೇಕು, ಅದಕ್ಕೆ ಕಾಲ ಕೂಡಿಬಂದಿದೆ ಎಂದವರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಹೀಗಾಗಿಯೇ ಅವರು ಕರಾಚಿಯ ಹಾದಿ ಸರ್​ ಕ್ರೀಕ್​ ಮೂಲಕ ಸಾಗುತ್ತದೆ, ಪಾಕಿಸ್ತಾನದ ಇತಿಹಾಸವನ್ನಷ್ಟೇ ಅಲ್ಲ, ನಕ್ಷೆಯನ್ನೂ ನಾವು ಬದಲಾಯಿಸುತ್ತೇವೆ ಎಂಬ ಮಾತುಗಳನ್ನು ತಿಂಗಳಿಂದಲೂ ಹೇಳುತ್ತಿರುವುದು ಮತ್ತದನ್ನು ಸೇನಾ ದಂಡನಾಯಕ ಜ. ಉಪೇಂದ್ರ ದ್ವಿವೇದಿ ಪುನರುಚ್ಚರಿಸುತ್ತಿರುವುದು. ಇದೆಲ್ಲದರ ಅರ್ಥ ಉಪಖಂಡದಲ್ಲಿ ಸದ್ಯದಲ್ಲೆ ಗಮನಾರ್ಹ ಬೆಳವಣಿಗೆಗಳಾಗಲಿವೆ. ಸಿಂಧೂನದಿ ಮತ್ತೆ ಭಾರತದ ಧ್ವಜದಡಿ ಹರಿಯುವುದನ್ನು ನೋಡುವ ನಮ್ಮ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net