ಇದೆಂಥಾ ಹಣೆಬರಹ? ಕಣ್ಣೆದುರೇ ಬದುಕಿದ್ರು ನೀನು ಸತ್ತಿದ್ಯಾ ಎಂದ ಆಸ್ಪತ್ರೆ ಸಿಬ್ಬಂದಿ! ಸರ್ಕಾರವೇ ಕೇಳ್ಬೇಕು ಈತನ ಗೋಳು

Sawai Man Singh Hospital
ಇದೆಂಥಾ ಹಣೆಬರಹ? ಕಣ್ಣೆದುರೇ ಬದುಕಿದ್ರು ನೀನು ಸತ್ತಿದ್ಯಾ ಎಂದ ಆಸ್ಪತ್ರೆ ಸಿಬ್ಬಂದಿ! ಸರ್ಕಾರವೇ ಕೇಳ್ಬೇಕು ಈತನ ಗೋಳು
Published on: 

ಜೈಪುರ: ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು ಇದೀಗ ಜೀವಂತವಾಗಿರುವ ಯುವಕನನ್ನು ತಾನು ಇನ್ನೂ ಬದುಕಿದ್ದೇನೆ ಎಂದು ಸಾಬೀತುಪಡಿಸುವಂತ ಪರಿಸ್ಥಿತಿಗೆ ದೂಡಿರುವುದು ನಿಜಕ್ಕೂ ಭಾರಿ ಬೇಸರದ ಸಂಗತಿ. ಸರ್ಕಾರಿ ದಾಖಲೆಗಳಲ್ಲಿ ಆತ ಮೃತಪಟ್ಟಿರುವುದಾಗಿ ತೋರಿಸಿರುವ ಆಸ್ಪತ್ರೆಯ ವಿರುದ್ಧ ಆತನ ಆಕ್ರೋಶ, ಅಸಮಾಧಾನ, ಕಣ್ಣೀರಿನ ಪರಿಸ್ಥಿತಿ ಯಾವ ಪಾಪ ಮಾಡಿದನಿಗೂ ಬೇಡ ಎನ್ನುವಂತಿದೆ.

ಆಸ್ಪತ್ರೆ ಸಿಬ್ಬಂದಿಗಳ ಮುಂದೆಯೇ ಜೀವಂತವಾಗಿ ಓಡಾಡುತ್ತಿರುವ ಯುವಕನನ್ನು, ನೀನು ಈಗಾಗಲೇ ಮೃತ ವ್ಯಕ್ತಿ. ಸತ್ತಿರುವ ಬಗ್ಗೆ ಡೆತ್​ ಸರ್ಟಿಫಿಕೆಟ್​ನಲ್ಲಿ ದಾಖಲಾಗಿದೆ ಎಂದು ವಾದಿಸಿದ್ದಾರೆ. ನಾನು ನಿಮ್ಮ ಮುಂದೆಯೇ ಬದುಕಿದ್ದರೂ ಇದೆಂಥಾ ಮಾತಾಡ್ತೀರಿ ಎಂದರೆ, ಆಸ್ಪತ್ರೆಯ ಆಡಳಿತ ಮಂಡಳಿ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದಿರುವುದು ಇನ್ನೂ ವಿಚಿತ್ರ. ತಾನು ಜೀವಂತ ಎಂದು ಸಾಬೀತುಪಡಿಸಲು ಆತ ಕಳೆದ 25 ದಿನಗಳಿಂದ ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳಿಗೆ ಅಲೆದಾಡುತ್ತಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.

ಜೈಪುರದ ಆಮೇರ್ ನಿವಾಸಿ ದಿನೇಶ್ ಸೈನಿ ಎಂಬುವವರೇ ಈ ಸಂಕಷ್ಟಕ್ಕೆ ಸಿಲುಕಿರುವ ಯುವಕ. ನವೆಂಬರ್ 3ರಂದು ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಟ್ರಾಮಾ ಕೇಂದ್ರಕ್ಕೆ ಬಂದಿದ್ದರು. ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಮನೆಗೆ ಹೋಗಿದ್ದರು. ಆದರೆ, ಅದೇ ದಿನ ಸಂಜೆ ಆಸ್ಪತ್ರೆ ಮತ್ತು ಪೊಲೀಸರಿಂದ ಅವರಿಗೆ ಕರೆಗಳು ಬಂದಿವೆ. ದಿನೇಶ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದು, ಮೃತದೇಹವನ್ನು ಸ್ವೀಕರಿಸಲು ಯಾರೂ ಬಂದಿಲ್ಲ ಎಂದು ಹೇಳಲಾಯಿತು.

ತಾನು ಬದುಕಿದ್ದರೂ ಮೃತಪಟ್ಟಿರುವ ಸುದ್ದಿ ಕೇಳಿ ದಿನೇಶ್ ಒಂದು ನಿಮಿಷ ಬೆಕ್ಕಸ ಬೆರಗಾಗಿದ್ದಾರೆ. ಆಸ್ಪತ್ರೆಯಲ್ಲಿ ಕರೌಲಿಯ ಮೂಲದ ಮತ್ತೊಬ್ಬ ರೋಗಿಯನ್ನು ದಾಖಲಿಸುವಾಗ ದಿನೇಶ್ ಅವರ ಗುರುತಿನ ದಾಖಲೆಗಳನ್ನು ಬಳಸಿದ್ದೇ ಈ ದೊಡ್ಡ ಗೊಂದಲ ಉಂಟಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ತಮ್ಮ ಮೂಲ ದಾಖಲೆಗಳೊಂದಿಗೆ ಆಸ್ಪತ್ರೆಗೆ ತೆರಳಿದ ದಿನೇಶ್, ಟ್ರಾಮಾ ಕೇಂದ್ರ ಮತ್ತು ವೈದ್ಯಕೀಯ ದಾಖಲೆ ವಿಭಾಗದ ಅಧಿಕಾರಿಗಳನ್ನು ಭೇಟಿಯಾಗಿ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಹಲವು ಬಾರಿ ಮನವಿ ಮಾಡಿದ್ರೂ ದಾಖಲೆಗಳಲ್ಲಿನ ತಪ್ಪನ್ನು ಸರಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

Also Read
ದಿನೇ ದಿನೇ ಮುಳುಗುತ್ತಿದೆ ಜಗತ್ತಿನ ಅತೀ ಚಿಕ್ಕ ರಾಷ್ಟ್ರ! 2100ರ ವೇಳೆಗೆ ಭೂಮಿ ಮೇಲೇ ಇರಲ್ವಂತೆ ಈ ದ್ವೀಪ | Tuvalu
Sawai Man Singh Hospital

ಇಷ್ಟಾದರೂ ಸಮಸ್ಯೆ ಬಗೆಹರಿಯದಿರುವುದು ದಿನೇಶ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ನವೆಂಬರ್ 21ರಂದು ಮತ್ತೊಮ್ಮೆ ಅವರ ಹೆಸರನ್ನು ಮೃತಪಟ್ಟವರ ಪಟ್ಟಿಯಲ್ಲಿ ಸೇರಿಸಿರುವುದಾಗಿ ಮೊಬೈಲ್​ಗೆ ಮೆಸೇಜ್​ ಬಂದಿದೆ. ಹೀಗಾಗಿ, ಕಳೆದ 25 ದಿನಗಳಿಂದ ಅವರು ತಾನು ಬದುಕಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರಿ ಕಚೇರಿಗಳು ಮತ್ತು ಆಸ್ಪತ್ರೆಗೆ ಅಲೆದಾಡುತ್ತಲೇ ಇದ್ದಾರೆ. ಆದರೆ, ತಪ್ಪು ಮಾಡಿರುವ ಆಸ್ಪತ್ರೆ ಸಿಬ್ಬಂದಿಗಳು ಮಾತ್ರ, ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಇರುವುದು ಸ್ಥಳೀಯರನ್ನು ಅಕ್ಷರಶಃ ಕೆರಳಿಸಿದೆ.

ಆಸ್ಪತ್ರೆಯ ದಾಖಲೆಗಳಲ್ಲಿನ ಒಂದು ತಪ್ಪು ವ್ಯಕ್ತಿಯೊಬ್ಬನನ್ನು ಬದುಕಿದ್ದರೂ ಮೃತರ ಪಟ್ಟಿಗೆ ಸೇರಿಸಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಅದರಲ್ಲೂ, ಯಾರೋ ಮಾಡಿದ ತಪ್ಪಿಗೆ, ಇನ್ಯಾರೋ ಪರದಾಡುವಂತಾಗುವುದು ಸಹಿಸಲಾಗದು. ಯುವಕನನ್ನು ಇಂತಹ ಪರಿಸ್ಥಿತಿಗೆ ದೂಡಿರುವ ಆಸ್ಪತ್ರೆ ಸಿಬ್ಬಂದಿ ಅಥವಾ ಸರ್ಕಾರಿ ಅಧಿಕಾರಿಗಳು ಈ ಎಡವಟ್ಟನ್ನು ಶೀಘ್ರವೇ ಸರಿಪಡಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).