ಡಿ. 4 ಮತ್ತು 5ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ; ಕ್ರೆಮ್ಲಿನ್ ಮಾಹಿತಿ | Vladimir Putin

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
Published on
ಮಾಸ್ಕೋ: ಮುಂದಿನ ತಿಂಗಳು ಡಿ. 4 ಮತ್ತು 5ರಂದು ಪ್ರಧಾನಿ ಮೋದಿ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಮಾಹಿತಿ ಉಲ್ಲೇಖಿಸಿ ಶುಕ್ರವಾರ(ನ. 28) ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಪುಟಿನ್ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರೆಸಿದ್ದರಿಂದ ಅಮೆರಿಕಾ ಹೆಚ್ಚುವರಿ ಸುಂಕ ವಿಧಿಸಿದ ಮೇಲೆ ಭಾರತ ಮತ್ತು ರಷ್ಯಾ ಎರಡೂ ದೇಶಗಳ ನಿಕಟ ಸಂಬಂಧ ಮತ್ತಷ್ಟು ಬೆಸೆದಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ರಷ್ಯಾದ ಒಕ್ಕೂಟದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ 2025 ರ ಡಿಸೆಂಬರ್ 4-5 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.
ಭೇಟಿಯ ಸಂದರ್ಭದಲ್ಲಿ ಪುಟಿನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಪುಟಿನ್​ರನ್ನು ಬರಮಾಡಿಕೊಂಡು ಔತಣಕೂಟ ಆಯೋಜಿಸಲಿದ್ದಾರೆ ಎಂದು ಹೇಳಿದೆ.
ಇದೇ ವೇಳೆ ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಲು, ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ದೃಷ್ಟಿಕೋನವನ್ನು ಹೊಂದಿದೆ. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಈ ಭೇಟಿ ಅವಕಾಶವನ್ನು ಒದಗಿಸುತ್ತದೆ ಎನ್ನಲಾಗಿದೆ.
ಆಗಸ್ಟ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಆಶಯದಂತೆ ಪುಟಿನ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ತಿಳಿಸಿದ್ದರು. ಆದಾಗ್ಯೂ ಆ ಸಮಯದಲ್ಲಿ ಭೇಟಿಯ ದಿನಾಂಕಗಳನ್ನು ಅಂತಿಮಗೊಳಿಸಲಾಗಿರಲಿಲ್ಲ. ಬಳಿಕ ಪ್ರಧಾನಿ ಮೋದಿ ಮತ್ತು ಪುಟಿನ್ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಮಯದಲ್ಲಿ ಚೀನಾದಲ್ಲಿ ಭೇಟಿಯಾಗಿದ್ದರು. ಲಿಮೋಸಿನ್‌ನಲ್ಲಿ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net