ನವದೆಹಲಿ: ದೇಶಾದ್ಯಂತದ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಅಹವಾಲುಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸತ್ಯಾಗ್ರಹ ಎಂಬ ವೆಬ್‌ಸೈಟ್ ತೆರೆದಿದ್ದು, ಸಾರ್ವಜನಿಕರು ಅದರಲ್ಲಿ ಅನ್ಯಾಯ ಮತ್ತು ಪ್ರತಿಭಟನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ದೇಶಾದ್ಯಂತ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಮತ್ತು ಅನೇಕ ಬಾರಿ ಅವರು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಜೆನ್ ಜಿ ಯುವಜನರು, ವಿದ್ಯಾರ್ಥಿಗಳು, ರೈತರು, ಆದಿವಾಸಿಗಳು, ದಲಿತರು, ಮಹಿಳೆಯರು - ಹೀಗೆ ಪ್ರತಿಯೊಬ್ಬರ ಹೋರಾಟಕ್ಕೂ ಅದರದೇ ಆದ ಕಥೆಯಿದೆ. ಆದರೆ ಏಕಾಂಗಿ ಧ್ವನಿಗಳನ್ನು ಅಡಗಿಸುವುದು ಸುಲಭ.
ಇಂತಹ ಧ್ವನಿಗಳನ್ನೆಲ್ಲವನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನವೇ 'ಸತ್ಯಾಗ್ರಹ'. ಬಾಪು ನಮಗೆ ಕಲಿಸಿದ್ದು ಇದನ್ನೇ, ಸತ್ಯವೇ ಅತ್ಯಂತ ಶಕ್ತಿಶಾಲಿ ಆಯುಧ. ಆದರೆ, ಸತ್ಯದ ಪರವಾಗಿ ಒಗ್ಗಟ್ಟಿನಿಂದ ನಿಲ್ಲುವುದು ಅದಕ್ಕಿಂತಲೂ ಮಿಗಿಲಾದ ಶಕ್ತಿಶಾಲಿ ಆಯುಧವಾಗಿದೆ. ನೀವೂ ಯಾವುದೇ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದರೆ, ನಿಮ್ಮ ಕಥೆಯನ್ನು ಹಂಚಿಕೊಳ್ಳಿ. ಇದಕ್ಕೆ ಕೇವಲ ಎರಡು ನಿಮಿಷಗಳು ಸಾಕು ಎಂದು ಹೇಳಿದ್ದಾರೆ.
ನಿಮ್ಮ ಕಥೆಯು ಈ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ. ನಿಮ್ಮಂತೆಯೇ ಹೋರಾಡುತ್ತಿರುವ ಇತರರು ಯಾರೆಂದು ನಿಮಗೆ ತಿಳಿಯಲಿದೆ. ವಿರೋಧ ಪಕ್ಷದ ನಾಯಕನಾಗಿ, ಸಂಸತ್ತಿನಲ್ಲಿ ಹಾಗೂ ಬೀದಿಗಳಲ್ಲಿ ಧ್ವನಿ ಎತ್ತುವ ಮೂಲಕ, ಪತ್ರಗಳನ್ನು ಬರೆಯುವ ಮೂಲಕ ಮತ್ತು ಅಗತ್ಯವಿರುವಲ್ಲೆಲ್ಲಾ ನಿಮ್ಮೊಂದಿಗೆ ನಿಲ್ಲುವ ಮೂಲಕ ನನ್ನಿಂದಾದ ಎಲ್ಲವನ್ನೂ ಮಾಡುತ್ತೇನೆ ಇದು ನನ್ನ ಜವಾಬ್ದಾರಿ ಎಂದಿದ್ದಾರೆ.
ಇನ್ನೂ ಹಂಚಿಕೊಂಡಿರುವ ವಿಡಿಯೋದಲ್ಲಿ, ದೇಶದ ಮೂಲೆಮೂಲೆಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿವೆ. ಯಾರೋ ವಿದ್ಯಾರ್ಥಿಗಳ ಪರವಾಗಿ, ಇನ್ನು ಕೆಲವರು ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಮತ್ತೆ ಕೆಲವರು ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೀಗೆ ದೇಶಾದ್ಯಂತ ಲಕ್ಷಾಂತರ ವಿವಿಧ ಪ್ರತಿಭಟನೆಗಳು ನಡೆಯುತ್ತಿವೆ. ವಿರೋಧ ಪಕ್ಷದ ನಾಯಕನಾಗಿ, ಈ ಎಲ್ಲಾ ಪ್ರತಿಭಟನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೇ ಕಡೆ ಕ್ರೋಢೀಕರಿಸುವ ಅಗತ್ಯವಿದೆ ಎಂದು ನನಗೆ ಅನ್ನಿಸಿತು.
ಅದಕ್ಕಾಗಿಯೇ ನಾವು ನಿಮಗಾಗಿ 'ಸತ್ಯಾಗ್ರಹ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದೇವೆ. ನಿಮ್ಮ ಪ್ರತಿಭಟನೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅದರಲ್ಲಿ ನಿಮ್ಮ ಹೆಸರು, ನಿಮ್ಮ ಸಂಘಟನೆಯ ಹೆಸರು ಮತ್ತು ಪ್ರತಿಭಟನೆಯ ವಿಷಯದ ವಿವರಗಳನ್ನು ನಮೂದಿಸಿ. ನಾವು ನಿಮಗೆ ಸಹಾಯ ಮಾಡಲು ಸಾಧ್ಯವಾದರೆ ಅಥವಾ ನೀವು ನಮ್ಮಿಂದ ಸಹಾಯವನ್ನು ಬಯಸಿದರೆ, ನಾವು ಖಂಡಿತವಾಗಿಯೂ ನಿಮಗೆ ಬೆಂಬಲ ನೀಡುತ್ತೇವೆ ಎಂದು ರಾಹುಲ್ ತಿಳಿಸಿದ್ದಾರೆ (ಏಜೆನ್ಸೀಸ್).