ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ಪ್ರಜಾಪ್ರಭುತ್ವವೇ ಸತ್ತುಹೋಗಲಿದೆ: ಸ್ಟಾಲಿನ್​ ಜೊತೆಗಿನ ಸಭೆಯ ಬಳಿಕ ರಾಹುಲ್ ಗಾಂಧಿ ಗಂಭೀರ ಆರೋಪ! | Rahul Gandhi

ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ಪ್ರಜಾಪ್ರಭುತ್ವವೇ ಸತ್ತುಹೋಗಲಿದೆ: ಸ್ಟಾಲಿನ್​ ಜೊತೆಗಿನ ಸಭೆಯ ಬಳಿಕ ರಾಹುಲ್ ಗಾಂಧಿ ಗಂಭೀರ ಆರೋಪ! | Rahul Gandhi
Published on: 

ಚೆನ್ನೈ: ಕ್ಷೇತ್ರ ಪುನರ್ವಿಂಗಡಣೆ ಮೂಲಕ ಲೋಕಸಭೆ ಮತ್ತು ವಿಧಾನಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ದೇಶದ ಪ್ರಜಾಪ್ರಭುತ್ವ ನಾಶವಾಗಲಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಆರೋಪಿಸಿದ್ದಾರೆ. ಪ್ರಸ್ತಾವಿತ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾದರೆ ಇಡೀ ದೇಶವು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿರುವ ಅವರು, ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರು ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆಲ ನಿಮಿಷಗಳ ಹಿಂದೆ ಸ್ಟಾಲಿನ್ ನಿವಾಸದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ತಿರು ಸ್ಟಾಲಿನ್ ಜಿ ಅವರೊಂದಿಗೆ ನಾವು ಅತ್ಯಂತ ಸೌಹಾರ್ದಯುತ ಮತ್ತು ಉತ್ತಮ ಸಭೆ ನಡೆಸಿದ್ದೇವೆ. ನಮ್ಮ ಅಭಿಪ್ರಾಯವನ್ನು ಅವರಿಗೆ ಸ್ಪಷ್ಟವಾಗಿ ವಿವರಿಸಿದ್ದೇವೆ. ಕ್ಷೇತ್ರ ಪುನರ್ವಿಂಗಡಣೆಯ ಮೂಲಕ 850 ಸ್ಥಾನಗಳ ಸಂಸತ್ತನ್ನು ನಿರ್ಮಿಸುವುದು ಮತ್ತು ಆ ಎಲ್ಲಾ 850 ಕ್ಷೇತ್ರಗಳ ಸ್ವರೂಪವನ್ನು ಬದಲಿಸಿ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಬಿಜೆಪಿಗೆ ಅವಕಾಶ ನೀಡುವುದು ಕೇವಲ ಭಾರತ ದೇಶಕ್ಕೆ ಮಾತ್ರವಲ್ಲದೆ, ದಕ್ಷಿಣ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ತಮಿಳುನಾಡಿಗೆ ಮಾರಕವಾಗಿದೆ ಎಂದು ಆರೋಪಿಸಿದ್ದಾರೆ.

ಡಿಎಂಕೆ ಮುಖ್ಯಸ್ಥರನ್ನು ಬ್ರದರ್​ ಸ್ಟಾಲಿನ್ ಹಾಗೂ ತಮಿಳುನಾಡಿನ ರಕ್ಷಕ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ತಮಿಳುನಾಡಿನ ನಿಷ್ಠಾವಂತ ರಕ್ಷಕರಾಗಿರುವ ಸಹೋದರ ಸ್ಟಾಲಿನ್ ಅವರು ರಾಜ್ಯವನ್ನು ರಕ್ಷಿಸಬೇಕು ಮತ್ತು ಬಿಜೆಪಿಯ ಈ ಕೊಳಕು ಹುನ್ನಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಾವು ವಿನಂತಿಸಿದ್ದೇವೆ. ಒಮ್ಮೆ ಬಿಜೆಪಿಯು 850 ಸ್ಥಾನಗಳ ಲೋಕಸಭೆಯನ್ನು ಮರುರೂಪಿಸಿದರೆ, ದೇಶದ ಪ್ರಜಾಪ್ರಭುತ್ವ ಮುಗಿದುಹೋಗುತ್ತದೆ. ಇದರ ಬೆನ್ನಲ್ಲೇ ತಮಿಳು ಭಾಷೆ ಮತ್ತು ಸಂಸ್ಕೃತಿಯ ಮೇಲೂ ದೊಡ್ಡ ಮಟ್ಟದ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Also Read
ಮನವೊಲಿಕೆಗೆ ಬಂದಿದ್ದ ಕೈ ನಾಯಕರಿಗೆ ಮುಖಭಂಗ: ನಮ್ಮ ಬೇಡಿಕೆಗಳಿಗೆ ಒಪ್ಪಿದ ಕೇಂದ್ರ ಸರ್ಕಾರಕ್ಕೆ ಬೆಂಬಲ ಎಂದ ಸ್ಟಾಲಿನ್! | MK Stalin
ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ಪ್ರಜಾಪ್ರಭುತ್ವವೇ ಸತ್ತುಹೋಗಲಿದೆ: ಸ್ಟಾಲಿನ್​ ಜೊತೆಗಿನ ಸಭೆಯ ಬಳಿಕ ರಾಹುಲ್ ಗಾಂಧಿ ಗಂಭೀರ ಆರೋಪ! | Rahul Gandhi

ಇದಕ್ಕೂ ಮುನ್ನ, ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಕುರಿತು ಚರ್ಚಿಸಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗವು ಚೆನ್ನೈನಲ್ಲಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿಯಾಯಿತು. ಸುಮಾರು 75 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ, ಮಸೂದೆಯ ಕುರಿತು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರು ತೀವ್ರ ಪ್ರಯತ್ನ ನಡೆಸಿದರು. ಆದರೆ, ಈ ಮಸೂದೆಯು ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಪ್ರತಿಪಾದಿಸಿದ ಸ್ಟಾಲಿನ್ ತಮ್ಮ ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡರು. ಈ ಹಿಂದೆ ಒಪ್ಪಿಕೊಂಡಂತೆ ಮಸೂದೆಯ ನಿಬಂಧನೆಗಳಿಗೆ ಡಿಎಂಕೆ ಮುಖ್ಯಸ್ಥರ ಬೆಂಬಲ ಮುಂದುವರಿಯಲಿದೆ.

ಸಭೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕುರಿತಾದ ತಮ್ಮ ಆತಂಕಗಳನ್ನು ಒತ್ತಿಹೇಳಲು ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಕ್ಷೇತ್ರಗಳ ಭೌಗೋಳಿಕ ಹಂಚಿಕೆಯಲ್ಲಿ ಆಗಬಹುದಾದ ಬದಲಾವಣೆಗಳು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ರಾಜಕೀಯ ಅನಾನುಕೂಲಗಳ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ, ಪ್ರಸ್ತಾವಿತ ಪ್ರಕ್ರಿಯೆಯ ದೀರ್ಘಕಾಲೀನ ರಾಜಕೀಯ ಪರಿಣಾಮಗಳ ಕುರಿತು ಸ್ಟಾಲಿನ್ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ನಿಲುವಿಗೆ ಅಂಟಿಕೊಂಡ ಸ್ಟಾಲಿನ್!

ಡಿಎಂಕೆ ಮೂಲಗಳ ಪ್ರಕಾರ, ಸಭೆಯಲ್ಲಿ ಮಾತನಾಡಿದ ಸ್ಟಾಲಿನ್ ಅವರು ಸೋನಿಯಾ ಗಾಂಧಿ ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ತಿಳಿಸಿದರು. ತಮ್ಮ ತಂದೆ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಸೋನಿಯಾ ಗಾಂಧಿ ಅವರು ತಮ್ಮ ಸ್ವಂತ ತಂದೆಯಂತೆ ಕಂಡಿದ್ದರು ಎಂಬುದನ್ನು ಅವರು ಈ ವೇಳೆ ಸ್ಮರಿಸಿಕೊಂಡರು.

ಕಾಂಗ್ರೆಸ್ ನಾಯಕರ ಈ ಎಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ ಸ್ಟಾಲಿನ್ ತಮ್ಮ ಹಿಂದಿನ ನಿಲುವಿಗೆ ಬದ್ಧರಾಗಿದ್ದು, ಈ ಮಸೂದೆಯು ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಸ್ಪಷ್ಟಪಡಿಸಿದರು. 75 ನಿಮಿಷಗಳ ಸುದೀರ್ಘ ಸಭೆಯ ನಂತರವೂ ಸ್ಟಾಲಿನ್ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಹೀಗಾಗಿ ನಾಳೆ ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ಎನ್​ಡಿಎ ತರಲಿರುವ ಮಸೂದೆ ಪರ ಡಿಎಂಕೆ ಸಂಸದರು ಮತ ಹಾಕಲಿದ್ದಾರೆ(ಏಜೆನ್ಸೀಸ್​).