ರೈಹಾನ್​ ಕ್ಲಿಕ್ಕಿಸಿದ ದೆಹಲಿ ಪ್ರೊಟೆಸ್ಟ್ ಫೋಟೋ ತೆರವಿಗೆ ಸೂಚನೆ; ಬಿಕಾನೇರ್ ಹೌಸ್‌ ಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಕಿಡಿ..Priyanka Gandhi

ರೈಹಾನ್​ ಕ್ಲಿಕ್ಕಿಸಿದ ದೆಹಲಿ ಪ್ರೊಟೆಸ್ಟ್ ಫೋಟೋ ತೆರವಿಗೆ ಸೂಚನೆ; ಬಿಕಾನೇರ್ ಹೌಸ್‌ ಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಕಿಡಿ..Priyanka Gandhi
Published on: 
  • ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ರೈಹಾನ್ ವಾದ್ರಾ ಅವರ 'ನೋ ಐಡಿಯಾ ಈಸ್ ಫೈನಲ್' ಕಲಾ ಪ್ರದರ್ಶನ.

  • 100ಕ್ಕೂ ಹೆಚ್ಚು ಫೋಟೋಗಳಲ್ಲಿ 70 ಫೋಟೋಗಳನ್ನು ತೆರವುಗೊಳಿಸಿದ ಬಿಕಾನೇರ್ ಹೌಸ್‌ ಮಂಡಳಿ.

  • ಇದು ಯುವಜನರ ದನಿ ಹತ್ತಿಕ್ಕುವ ಯತ್ನ ಎಂದ ಪ್ರಿಯಾಂಕಾ ಗಾಂಧಿ ವಾದ್ರಾ.

ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಕಲೆಗೆ ಸೆನ್ಸಾರ್ ಬಿಸಿ ಬಿದ್ದಿದೆ. ಸಂಸದೆ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಅವರ 'ನೋ ಐಡಿಯಾ ಈಸ್ ಫೈನಲ್' ಕಲಾ ಪ್ರದರ್ಶನದಲ್ಲಿ ಅಳವಡಿಸಿದ್ದ 105 ಫೋಟೋಗಳ ಪೈಕಿ 74 ಫೋಟೋಗಳನ್ನು ತೆರವು ಮಾಡುವಂತೆ ಆಡಳಿತ ಮಂಡಳಿ ಸೂಚಿಸಿದೆ ಎಂದು ರೈಹಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಸಿದ್ದಾರೆ. ದೆಹಲಿ ಯುವ ಪ್ರತಿಭಟನೆಯ ಫೋಟೋಗಳು 'ಆಕ್ಷೇಪಾರ್ಹ' ಎಂಬ ಕಾರಣ ನೀಡಲಾಗಿದೆ.

ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ರೈಹಾನ್ ವಾದ್ರಾ ಅವರ 'ನೋ ಐಡಿಯಾ ಈಸ್ ಫೈನಲ್' ಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಇದು ಗುರುವಾರದಿಂದ ಭಾನುವಾರದವರೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಬುಧವಾರ ಸಂಜೆ ಇದರ ಪ್ರಿವ್ಯೂ ಆಯೋಜಿಸಲಾಗಿತ್ತು. ಆದರೆ, ಪ್ರಿವ್ಯೂ ಶುರುವಾಗಲು ಕೆಲವೇ ಗಂಟೆಗಳಿರುವಾಗ ದೆಹಲಿಯಲ್ಲಿ ನಡೆದ ಯುವ ಪ್ರತಿಭಟನೆಯ ಫೋಟೋಗಳನ್ನು ಒತ್ತಾಯಪೂರ್ವಕವಾಗಿ ತೆಗೆದುಹಾಕುವಂತೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಸೂಚನೆ ನೀಡಿದೆ ಎಂದು ರೈಹಾನ್ ವಾದ್ರಾ ಆರೋಪಿಸಿದ್ದಾರೆ. ಅವರ ಈ ದೂರಿಗೆ ಕಾಂಗ್ರೆಸ್ ನಾಯಕರು ಮತ್ತು ಪ್ರಿಯಾಂಕಾ ಗಾಂಧಿ ದನಿಗೂಡಿಸಿದ್ದಾರೆ.

ರೈಹಾನ್​​​ ವಾದ್ರಾ ಪೋಸ್ಟ್​ನಲ್ಲಿ ಏನಿದೆ?

(ಅ.21)ಬುಧವಾರ ನೋ ಐಡಿಯಾ ಈಸ್ ಫೈನಲ್ ಪ್ರದರ್ಶನ ಆಯೋಜಿಸಲಾಗಿತ್ತು. ಮಧ್ಯಾಹ್ನ 3:30ರ ಸುಮಾರಿಗೆ ಕೆಲವು ಫೋಟೋಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಆಡಳಿತ ಮಂಡಳಿಯು ಬೆದರಿಕೆ ಹಾಕಿತು.ಈ ಫೋಟೋಗಳು ದೆಹಲಿಯಲ್ಲಿ ನಡೆದ ಯುವ ಪ್ರತಿಭಟನೆಗಳಿಗೆ ಸಂಬಂಧಿಸಿದ್ದವು. ಇವುಗಳನ್ನು ಅವರು ಆಕ್ಷೇಪಾರ್ಹ ಎಂದು ಪರಿಗಣಿಸಿದ್ದಾರೆ. ಕೊನೆಗೆ ತ್ರಿವರ್ಣ ಧ್ವಜವಿದ್ದ ಫೋಟೋಗಳನ್ನು ಸಹ ತೆಗೆದು ಹಾಕುವಂತೆ ಸೂಚನೆ ಕೊಟ್ಟು. ನಾನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ನಿರಾಕರಿಸಿದೆ. ಫೋಟೋಗಳು ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು, ಪ್ರದರ್ಶನ ನೀಡಲು ಇದು ಸರಿಯಾದ ಸಮಯವಲ್ಲ ಎಂದು ಆಡಳಿತ ಮಂಡಳಿ ತಿಳಿಸಿತ್ತು. ಸದ್ಯಕ್ಕೆ ಪ್ರದರ್ಶನವು ಭಾಗಶಃ ಮುಂದುವರಿಯುತ್ತದೆ, ಆದರೆ ನಾನು ಬೇರೆ ಸ್ಥಳವನ್ನು ಹುಡುಕಿ ಇಡೀ ಪ್ರತಿಭಟನಾ ಫೋಟೋಗಳ ಸಂಗ್ರಹವನ್ನು ಪ್ರದರ್ಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ರಾಜಕೀಯ ಸಂದೇಶ ನೀಡುವುದು ನನ್ನ ಉದ್ದೇವಲ್ಲ. ಕಳೆದ ಆರು ತಿಂಗಳಲ್ಲಿ ನಡೆದ ಪ್ರತಿಭಟನೆಗಳ ದೃಶ್ಯ ದಾಖಲಿಸುವುದು ನನ್ನ ಜವಾಬ್ದಾರಿಯಾಗಿತ್ತು. ಪ್ರದರ್ಶನದ ವಿವರವಾದ ಪ್ರಸ್ತಾವನೆಯನ್ನು ನಾನು ಅವರೊಂದಿಗೆ ಹಂಚಿಕೊಂಡಿದ್ದೆ ಎಂದರು ರೈಹಾನ್​.

ಮುಂದುವರೆದು, ಒಬ್ಬ ಭಾರತೀಯ ಕಲಾವಿದನಾಗಿ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ... ಅವರು ಕಲಾವಿದರ ಕೃತಿಗಳನ್ನು ಸೆನ್ಸಾರ್ ಮಾಡುತ್ತಿದ್ದಾರೆ, ಅವರಿಗೆ ಯಾವುದರ ಬಗ್ಗೆ ಭೀತಿಯಾಗಿದೆ ಎಂದು ನನಗೆ ತಿಳಿದಿಲ್ಲ. ಕೊನೆಗೆ ಭಾರತೀಯ ಧ್ವಜವಿದ್ದ ಚಿತ್ರವನ್ನೂ ಸಹ ಅವರು ಬಿಡಲಿಲ್ಲ. ಎಲ್ಲಾ ಕಲೆಯೂ ರಾಜಕೀಯದೊಂದಿಗೆ ನಂಟು ಹೊಂದಿದೆ, ರಾಜಕೀಯವಿಲ್ಲದ ಕಲೆ ಇರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಪ್ರಿಯಾಂಕಾ ಗಾಂಧಿ ಕಿಡಿ

ಇದು ನಿಜಕ್ಕೂ ಹಾಸ್ಯಸ್ಪದ. ನೀವೇನಂತೀರಿ? ಅವನು ಒಬ್ಭ ಯುವಕ, ಆದರೆ ದೇಶಾದ್ಯಂತ ಯುವಕರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಪ್ರತಿಭಟನೆಯ ಆ ಫೋಟೋಗಳಲ್ಲಿ ಯಾವುದೇ ಕಾಮೆಂಟ್‌ ಇರಲಿಲ್ಲ, ಯಾರ ವಿರುದ್ಧವೂ ಯಾವುದೇ ಅವಹೇಳನಕಾರಿ ಸಂಗತಿ ಇರಲಿಲ್ಲ, ಅದು ಕೇವಲ ಪ್ರತಿಭಟನೆಯ ದೃಶ್ಯ ದಾಖಲೆಯಷ್ಟೇ ಆಗಿತ್ತು. ಭಾರತವು ಇನ್ನು ಮುಂದೆ ಪ್ರಜಾಪ್ರಭುತ್ವವಾಗಿ ಉಳಿದಿಲ್ಲ. ಇಂದು ಅವನಿಗೆ ಹೀಗಾಗಿದೆ, ನಾಳೆ ಮತ್ತೊಬ್ಬ ಕಲಾವಿದನಿಗೆ ಹೀಗಾಗಬಹುದು" ಎಂದು ಅವರು ಹೇಳಿದರು.

70ಕ್ಕೂ ಹೆಚ್ಚು ಫೋಟೋಗಳು ತೆರವು

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ಪ್ರದರ್ಶನದಲ್ಲಿ ಆರಂಭದಲ್ಲಿ ವನ್ಯಜೀವಿ ಚಿತ್ರಗಳು, ಅಮೂರ್ತ ಕೃತಿಗಳು ಮತ್ತು ಇತ್ತೀಚಿನ ಯುವ ಚಳವಳಿಗಳನ್ನು ಬಿಂಬಿಸುವ ಬೀದಿ ಫೋಟೋಗ್ರಫಿ ಸೇರಿದಂತೆ 100ಕ್ಕೂ ಹೆಚ್ಚು ಫೋಟೋಗಳು ಹಾಗೂ ಕಲಾಕೃತಿಗಳಿದ್ದವು.ರೈಹಾನ್ ಅವರ ಆರೋಪದಂತೆ, ಆ ಪೈಕಿ 70ಕ್ಕೂ ಹೆಚ್ಚು ಫೋಟೋಗಳನ್ನು ತೆಗೆದುಹಾಕಲಾಗಿದ್ದು, ಪ್ರಸ್ತುತ ಸುಮಾರು 40 ಫೋಟೋಗಳು ಮಾತ್ರ ಪ್ರದರ್ಶನದಲ್ಲಿ ಉಳಿದುಕೊಂಡಿವೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net