ಮದುವೆ ಭರವಸೆ ನೀಡಿದ ವಿವಾಹಪೂರ್ವದ ಲೈಂಗಿಕತೆ ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್ | Supreme Court

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published on
ನವದೆಹಲಿ: ವಿವಾಹಪೂರ್ವ ಲೈಂಗಿಕತೆಯ ಕುರಿತು ಸೋಮವಾರ(ಜೂ. 08) ಸುಪ್ರೀಂ ಕೋರ್ಟ್ ಪ್ರಮುಖ ತೀರ್ಪು ನೀಡಿದ್ದು, ಮದುವೆ ಭರವಸೆ ನೀಡಿ ವಿವಾಹಪೂರ್ವ ಪರಸ್ಪರ ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಬಂಧ ಹೊಂದಿ, ಬಳಿಕ ಮದುವೆಯಾಗದಿದ್ದರೆ, ಅದು ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿದೆ.
ಮದುವೆ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಸಮ್ಮತಿಯ ವಿವಾಹಪೂರ್ವ ಲೈಂಗಿಕತೆಯ ಆಧಾರದ ಮೇಲೆ ವ್ಯಕ್ತಿಯ ಪಾತ್ರ ಅಥವಾ ನಡವಳಿಕೆಯನ್ನು ಪ್ರಶ್ನಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಎಲ್ಲಾ ಪ್ರೇಮ ಸಂಬಂಧಗಳು ಮದುವೆಗೆ ಕಾರಣವಾಗುವುದಿಲ್ಲ. ಪರಸ್ಪರ ಒಪ್ಪಿಗೆಯೊಂದಿಗೆ ಇಬ್ಬರ ನಡುವೆ ರೂಪುಗೊಂಡ ಪ್ರೇಮ ಸಂಬಂಧವು ನಂತರ ಮದುವೆಯಾಗಿ ಬದಲಾಗದಿದ್ದರೂ, ಅದನ್ನು ವಂಚನೆ ಅಥವಾ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಪ್ರೀತಿಯ ಅವಧಿಯಲ್ಲಿ ವಿವಾಹದ ಉದ್ದೇಶದಿಂದ ದೈಹಿಕ ಸಂಬಂಧವನ್ನು ಮಾಡಿಕೊಂಡರೂ, ನಂತರ ವಿವಿಧ ಕಾರಣಗಳಿಂದ ವಿವಾಹ ನಡೆಯದಿದ್ದರೂ, ಅದನ್ನು ಪ್ರತಿಯೊಂದು ಪ್ರಕರಣದಲ್ಲೂ ವಂಚನೆ ಎಂದು ಪರಿಗಣಿಸಬಾರದು. ಇಬ್ಬರ ನಡುವಿನ ಸಂಬಂಧದ ಸಮಯದಲ್ಲಿ ಮದುವೆಯಾಗುವ ನಿಜವಾದ ಉದ್ದೇಶ ಇತ್ತೇ ಎಂಬುದನ್ನು ಪ್ರಕರಣದಿಂದ ಪ್ರಕರಣಕ್ಕೆ ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದೆ.
ಇಬ್ಬರ ಪರಸ್ಪರ ಒಪ್ಪಿಗೆ ಮೇರೆಗೆ ರೂಪಗೊಂಡ ಸಂಬಂಧಗಳು ಮತ್ತು ವಿವಾಹದ ಮೋಸದ ಭರವಸೆಗಳಿಂದ ರೂಪುಗೊಂಡ ಸಂಬಂಧಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸುವ ಅಗತ್ಯವಿದೆ ಎಂದಿರುವ ಸುಪ್ರೀಂಕೋರ್ಟ್​, ಮದುವೆಯಾಗಲಿಲ್ಲ ಎಂದು ಇನ್ನೊಬ್ಬರ ಮೇಲೆ ಮೋಸ ಮಾಡಿದರು ಎಂದು ಆರೋಪಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net