ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪಕ್ಕೆ 'ನೈಸ್ ಜೋಕ್' ಎಂದ ಪ್ರಕಾಶ್ ರಾಜ್..Prakash Raj

ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪಕ್ಕೆ 'ನೈಸ್ ಜೋಕ್' ಎಂದ ಪ್ರಕಾಶ್ ರಾಜ್..Prakash Raj
Published on: 
  • ಪ್ರತಿಭಟನಾಕಾರರಿಂದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ.

  • ಜೋರಾಗಿ ಕೆಲವು ಸೆಕೆಂಡ್​ ನಕ್ಕು...ಬಹಳ ಒಳ್ಳೆಯ ಜೋಕ್​ ಎಂದ ಪ್ರಕಾಶ್​ ರಾಜ್.

  • ಮಹಿಳಾ ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದ ಪ್ರಕಾಶ್ ರಾಜ್.

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ರಾಜೀನಾಮೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಪೊಲೀಸ್​ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಟ ಪ್ರಕಾಶ್​ ರಾಜ್​ ಅವರ ಬಳಿ ವರದಿಗಾರರು ಪ್ರಶ್ನೆ ಮಾಡಿದಾಗ ಜೋರಾಗಿ ನಕ್ಕು, ನೈಸ್​ ಜೋಕ್​ ಎಂದು ಲೇವಡಿ ಮಾಡಿದ ವಿಡಿಯೋ ವೈರಲ್​ ಆಗಿದೆ.

ಅಕ್ಟೋಬರ್ 15ರಂದು ನವದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ನಟ-ಕಾರ್ಯಕರ್ತ ಪ್ರಕಾಶ್ ರಾಜ್ ಅವರು ನೀಡಿದ ಒಂದು ಹೇಳಿಕೆ ತೀವ್ರ ವಿವಾದಕ್ಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನೈಸ್​ ಜೋಕ್ ಎಂದು ವ್ಯಂಗ್ಯ

ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಯತ್ನಿಸುತ್ತಿದ್ದ ತಮ್ಮ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಲಾಗಿದೆ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆ ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯೆ ಕೋರಿ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಪ್ರಕಾಶ್​ ರಾಜ್​ ಅವರು ಕೆಲವು ಸೆಕೆಂಡ್​ ನಗುತ್ತಲೇ ಇದ್ದರು. ಆನಂತರ ಉತ್ತರಿಸಿದ ಅವರು, 'ಒಳ್ಳೆಯ ಜೋಕ್, ಬಹಳ ಒಳ್ಳೆಯ ಜೋಕ್'ಎಂದು ಲೇವಡಿ ಮಾಡಿದರು. ಈ ರೀತಿಯ ವಿಚಿತ್ರ ಪ್ರತಿಕ್ರಿಯೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಹಲ್ಲೆಗೊಳಗಾಗಿದ್ದು ಪ್ರತಿಭಟನಾಕಾರರು

ಇದೇ ವೇಳೆ, ಯುವ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರ ಎಸಗುತ್ತಿರುವುದು ಮತ್ತು ಮಹಿಳಾ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಪೊಲೀಸ್ ಸಿಬ್ಬಂದಿಯೇ ಹೊರತು ಪ್ರತಿಭಟನಾಕಾರರಲ್ಲ ಎಂದು ಪ್ರಕಾಶ್ ರಾಜ್ ಆರೋಪಿಸಿದರು.

ನವದೆಹಲಿಯಲ್ಲಿ ನಡೆದ ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಜೊತೆಗೆ ಐಸಾ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪಕೆ ಹಾಗೂ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಉಪಸ್ಥಿತರಿದ್ದರು.

ಬಸ್​​ನಲ್ಲಿ ಹಲ್ಲೆ ಮಾಡಿದ್ರು

ಚಂಚಲ್​ ಯಾದವ್​ ಎನ್ನುವ ಮಹಿಳಾ ಕಾನ್​ಸ್ಟೇಬಲ್​ ಬಸ್​ನಲ್ಲಿ ನನಗೆ ಹಲ್ಲೆ ಮಾಡಿದ್ರು.ಕುತ್ತಿಗೆಯನ್ನು ಹಿಡಿದು ಬಸ್ ಸೀಟಿನ ಮೇಲೆ ಕೂರಿಸಿ ಮುಖ ಪರಿಚಿದರು. ಕೆನ್ನೆಗೆ ಹೊಡೆದರು. ಈ ಹಲ್ಲೆಯಿಂದಾಗಿ ನನ್ನ ಕಿವಿಯೋಲೆ ಉದುರಿ, ಮಾಂಸ ಕಿತ್ತುಬಂದಿತ್ತು ಎಂದು ಎನ್ಎಸ್ಯುಐ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದರು.

ಇಡೀ ದೇಶ ಜಂತರ್​ ಮಂತರ್ ಮಾಡುವ ಎಚ್ಚರಿಕೆ

ಜಂತರ್​ ಮಂತರ್​​​​​ಗನಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದರೂ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸೌರವ್ ದಾಸ್ ಮತ್ತು ಆಶುತೋಷ್ ರಂಕಾರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದರು. ಪ್ರತಿಭಟನೆ ನಡೆಸುವ ಸ್ಥಳವನ್ನು ಬದಲಾಯಿಸಬಹುದು, ಪ್ರತಿಭಟನೆಯನ್ನು ತಡೆಯಬಹುದು. ಆದರೆ, ದೇಶದ ಜನರ ಧ್ವನಿಯನ್ನು ಹತ್ತಿಕ್ಕಲು ನಿಮಗೆ ಸಾಧ್ಯವಿಲ್ಲ. ಇಡೀ ದೇಶವೇ ಜಂತರ್ ಮಂತರ್ ಆಗಲಿದೆ ಎಂದು ಪ್ರಕಾಶ್​ ರಾಜ್​ ತಮ್ಮ ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net