ಕೋಲ್ಕತ್ತಾ ಮರೆತುಬಿಡಿ.. ಮೊದಲು ನಿಮ್ಮ ವಿಮಾನಕ್ಕೆ ಎಣ್ಣೆ ಹಾಕಿ; ಖವಾಜಾ ಆಸಿಫ್ ಎಚ್ಚರಿಕೆಗೆ ಒಮರ್ ಅಬ್ದುಲ್ಲಾ ಟಾಂಗ್! | Omar Abdullah

Omar Abdullah |  ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Omar Abdullah | ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Published on
ಶ್ರೀನಗರ: ಭಾರತದ ವಿರುದ್ಧ ಯುದ್ಧದ ಸನ್ನಿವೇಶ ಎದುರಾದರೆ ಅದು ಕೇವಲ ಗಡಿಭಾಗಕ್ಕೆ ಸೀಮಿತವಾಗುವುದಿಲ್ಲ, ಬದಲಾಗಿ ಕೋಲ್ಕತ್ತಾವನ್ನು ಕೂಡ ಗುರಿಯಾಗಿಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್​ಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅಬ್ದುಲ್ಲಾ, ಆಸಿಫ್ ಹೇಳಿಕೆಯನ್ನು ಖಂಡಿಸಿದ್ದು, ಕೋಲ್ಕತ್ತಾವನ್ನು ಗುರಿಯಾಗಿಸುವ ಮಾತುಗಳನ್ನು ಆಡುವ ಮುನ್ನ ಪಾಕಿಸ್ತಾನ ತನ್ನ ಆಂತರಿಕ ಪರಿಸ್ಥಿತಿಯನ್ನು ಅವಲೋಕಿಸಿಕೊಳ್ಳಲಿ ಎಂದು ಲೇವಡಿ ಮಾಡಿದ್ದಾರೆ. ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನಕ್ಕೆ ದೆಹಲಿಯನ್ನೇ ತಲುಪಲು ಸಾಧ್ಯವಾಗಲಿಲ್ಲ, ಇನ್ನು ಕೋಲ್ಕತ್ತಾ ತಲುಪುವುದು ದೂರದ ಮಾತು ಎಂದಿದ್ದಾರೆ.
ಪಾಕಿಸ್ತಾನದ ಸದ್ಯದ ಆರ್ಥಿಕ ದುಸ್ಥಿತಿಯನ್ನು ಉಲ್ಲೇಖಿಸಿರುವ ಒಮರ್ ಅಬ್ದುಲ್ಲಾ, ಭಾರತದಲ್ಲಿ ವಿಮಾನಗಳು ಸುಗಮವಾಗಿ ಹಾರುತ್ತಿವೆ, ಆದರೆ ಇಂಧನ ಕೊರತೆಯಿಂದ ಪಾಕಿಸ್ತಾನದ ಪರಿಸ್ಥಿತಿ ಹೇಗಿದೆ ಎಂದು ಎಲ್ಲರೂ ನೋಡುತ್ತಿದ್ದಾರೆ ಎಂದು ಕುಟುಕಿದರು. ಆಪರೇಷನ್ ಸಿಂಧೂರ ಮುಗಿದು ಇನ್ನೂ ಒಂದು ವರ್ಷ ಕೂಡ ಕಳೆದಿಲ್ಲ. ಅಂದು ಅಲ್ಲಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಮಗೆ ನೆನಪಿಸುವಂತೆ ಏಕೆ ಒತ್ತಾಯಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದರು.
ಪಾಕಿಸ್ತಾನದವರು ಹೇಗೋ ಜಮ್ಮುವನ್ನು ತಲುಪಿದರು, ಆದರೆ ಹೆಚ್ಚಿನದನ್ನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ದೆಹಲಿಯನ್ನೇ ತಲುಪಲಾಗದ ಅವರು ಕೋಲ್ಕತ್ತಾಗೆ ಹೋಗುವುದನ್ನು ಮೊದಲು ಮರೆತುಬಿಡುವುದು ಉತ್ತಮ. ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸುವುದು ಶತೃರಾಷ್ಟ್ರಕ್ಕೆ ಲಾಭದಾಯಕವಾಗಲಿದ್ದು, ಹದಗೆಟ್ಟ ಸಂಬಂಧಗಳು ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಮೇಲೆಯೇ ಕೆಟ್ಟ ಪರಿಣಾಮ ಬೀರಲಿವೆ ಎಂದು ಅಬ್ದುಲ್ಲಾ ಕಿವಿಮಾತು ಹೇಳಿದ್ದಾರೆ.
ಭಾರತವು ತನ್ನದೇ ದೇಶದವರನ್ನು ಅಥವಾ ತನ್ನ ಬಂಧನದಲ್ಲಿರುವ ಪಾಕಿಸ್ತಾನಿಗಳನ್ನು ಬಳಸಿ ಸಂಚು ರೂಪಿಸಿ, ಶವಗಳನ್ನು ಮುಂದಿಟ್ಟು ಭಯೋತ್ಪಾದನೆಯ ಆರೋಪ ಹೊರಿಸಬಹುದು ಎಂಬ ಆಸಿಫ್​ರ ಆರೋಪಗಳನ್ನು ಅಲ್ಲಗಳೆದ ಸಿಎಂ ಅಬ್ದುಲ್ಲಾ, ಪಾಕಿಸ್ತಾನವು ಇಂತಹ ಸುಳ್ಳು ಹೇಳಿಕೆಗಳ ಬದಲು ಸಂಬಂಧ ವೃದ್ಧಿಯತ್ತ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ.
ಒಮರ್ ಅಬ್ದುಲ್ಲಾ ಭಾರತದ ಶಕ್ತಿಯನ್ನು ಪುನರುಚ್ಚರಿಸುತ್ತಾ, ಕಳೆದ ವರ್ಷಕ್ಕಿಂತ ಹೆಚ್ಚಿನ ಅವಮಾನವನ್ನು ಎದುರಿಸಲು ಪಾಕಿಸ್ತಾನ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಬಾರಿಯ ಸಂಘರ್ಷವು ಕೇವಲ 200 ರಿಂದ 250 ಕಿಲೋಮೀಟರ್‌ಗಳಿಗೆ ಸೀಮಿತವಾಗುವುದಿಲ್ಲ, ಭಾರತವು ಪಾಕಿಸ್ತಾನವನ್ನು ಪ್ರವೇಶಿಸಿ ಅವರ ಸ್ವಂತ ಮನೆಗಳೊಳಗೆ ದಾಳಿ ಮಾಡಲಿದೆ ಎಂದು ಆಸಿಫ್​ಗೆ ನೇರ ಎಚ್ಚರಿಕೆ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net