ಪಂಚೂರ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತಾಯಿ ಸಾವಿತ್ರಿ ದೇವಿ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಭಾರವಾದ ಹೃದಯದಿಂದ ಅಂತಿಮ ವಿದಾಯ ಹೇಳಿದರು. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಗ್ರಾಮದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿತು. ಮಾತೃವಿಯೋಗದ ದುಃಖದಲ್ಲಿ ಯೋಗಿ ಆದಿತ್ಯನಾಥ್ ಭಾವುಕರಾದ ದೃಶ್ಯ ಮನಕಲಕುವಂತಿತ್ತು.
91 ವರ್ಷದ ಸಾವಿತ್ರಿ ದೇವಿ ಅವರು ಶುಕ್ರವಾರ ಬೆಳಗ್ಗೆ ನಿಧನರಾಗಿದ್ದರು. ತಾಯಿಯ ನಿಧನದ ಸುದ್ದಿ ತಿಳಿದ ಬಳಿಕ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೇವಲ ಮೂರು ಪದಗಳ ಮೂಲಕ ತಮ್ಮ ದುಃಖ ವ್ಯಕ್ತಪಡಿಸಿದ್ದರು. 'ಮಾ... ಓಂ ಶಾಂತಿ' ಎಂದು ಬರೆದುಕೊಂಡಿದ್ದರು.
ತಾಯಿಯ ಅಂತಿಮ ದರ್ಶನ ಪಡೆದ ಯೋಗಿ ಆದಿತ್ಯನಾಥ್, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಪಾರ್ಥಿವ ಶರೀರಕ್ಕೆ ಹೆಗಲು ನೀಡಿ ಅಂತಿಮ ಸಂಸ್ಕಾರದ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಭಾವುಕ ಕ್ಷಣಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಾವಿತ್ರಿ ದೇವಿ ಅವರ ನಿಧನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. ವೈಯಕ್ತಿಕ ದುಃಖದ ನಡುವೆಯೂ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕ ಸೇವೆಯ ಕರ್ತವ್ಯಗಳನ್ನು ಮುಂದುವರಿಸುತ್ತಿರುವುದನ್ನು ಧಾಮಿ ಶ್ಲಾಘಿಸಿದ್ದಾರೆ. ದೇವರು ಅವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಕೂಡ ಯೋಗಿ ಆದಿತ್ಯನಾಥ್ ಅವರಿಗೆ ಸಂತಾಪ ಸೂಚಿಸಿದ್ದು, ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಾವಿತ್ರಿ ದೇವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದು, ತಾಯಿಯ ಪ್ರೀತಿ ಮತ್ತು ಆಶೀರ್ವಾದಗಳು ಮಕ್ಕಳಿಗೆ ನೀಡಿದ ಮೌಲ್ಯಗಳ ಮೂಲಕ ಸದಾ ಜೀವಂತವಾಗಿರುತ್ತವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಮಹಿಳಾ ಮೋರ್ಚಾದ ಪ್ರದೇಶ ಪ್ರವಾಸ ಸಭೆಯಲ್ಲಿ ಸಾವಿತ್ರಿ ದೇವಿ ಅವರಿಗೆ ಗೌರವ ಸಲ್ಲಿಸಲು ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್, ಕೇಶವ ಪ್ರಸಾದ್ ಮೌರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ಸಭೆಯಲ್ಲಿ ಉಪಸ್ಥಿತರಿದ್ದರು. ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ ಯೋಗಿ ಆದಿತ್ಯನಾಥ್ ಅವರು ತಾಯಿಗೆ ಹೆಗಲು ನೀಡಿ ಅಂತಿಮ ವಿದಾಯ ಸಲ್ಲಿಸಿದ ದೃಶ್ಯಗಳು ಹಲವರ ಮನ ಮಿಡಿದಿವೆ.