ಅಯ್ಯೋ ಅಕ್ಕಿಯೂ ದುಬಾರಿ! : 10 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆಯಾದ ಭತ್ತ ಇಳುವರಿ

ಭಾರತದಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ 1 ಕೋಟಿ ಟನ್ ಕಡಿಮೆ ಅಕ್ಕಿ ಉತ್ಪಾದನೆಯಾಗುವ ಅಂದಾಜಿದೆ. ಇಳುವರಿಯಲ್ಲಿ ಕಂಡುಬಂದಿರುವ ಈ ಕುಸಿತವು ಕಳೆದ 17 ವರ್ಷಗಳಲ್ಲೇ ಅತ್ಯಂತ ದೊಡ್ಡ ಇಳಿಕೆಯಾಗಿದೆ. ಇದಕ್ಕೂ ಮೊದಲು 2009ರಲ್ಲಿ ಅಕ್ಕಿ ಉತ್ಪಾದನೆಯು 10.1%ರಷ್ಟು ಇಳಿಕೆಯಾಗಿತ್ತು, ಆಗ ಅಕ್ಕಿಯ ಬೆಲೆ 20%ವರೆಗೆ ಏರಿಕೆಯಾಗಿತ್ತು.
ಅಯ್ಯೋ ಅಕ್ಕಿಯೂ ದುಬಾರಿ! : 10 ವರ್ಷಗಳಲ್ಲಿ ಮೊದಲ ಬಾರಿಗೆ ಇಳಿಕೆಯಾದ ಭತ್ತ ಇಳುವರಿ
WEB
Published on: 

ಭಾರತದಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ 1 ಕೋಟಿ ಟನ್ ಕಡಿಮೆ ಅಕ್ಕಿ ಉತ್ಪಾದನೆಯಾಗುವ ಅಂದಾಜಿದೆ. ಇಳುವರಿಯಲ್ಲಿ ಕಂಡುಬಂದಿರುವ ಈ ಕುಸಿತವು ಕಳೆದ 17 ವರ್ಷಗಳಲ್ಲೇ ಅತ್ಯಂತ ದೊಡ್ಡ ಇಳಿಕೆಯಾಗಿದೆ. ಇದಕ್ಕೂ ಮೊದಲು 2009ರಲ್ಲಿ ಅಕ್ಕಿ ಉತ್ಪಾದನೆಯು 10.1%ರಷ್ಟು ಇಳಿಕೆಯಾಗಿತ್ತು, ಆಗ ಅಕ್ಕಿಯ ಬೆಲೆ 20%ವರೆಗೆ ಏರಿಕೆಯಾಗಿತ್ತು. 2026ರಲ್ಲಿ 14.4 ಕೋಟಿ ಟನ್ ಅಕ್ಕಿ ಉತ್ಪಾದನೆಯಾಗುವ ಅಂದಾಜಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 6.5%ರಷ್ಟು ಕಡಿಮೆಯಾಗಿದೆ. 2025ರಲ್ಲಿ 15.4 ಕೋಟಿ ಟನ್ ಅಕ್ಕಿ ಉತ್ಪಾದನೆಯಾಗಿತ್ತು. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಅಕ್ಕಿಯ ಉತ್ಪಾದನೆಯಲ್ಲಿ ಇಳಿಕೆಯಾಗಲಿದೆ. ಅಷ್ಟಕ್ಕೂ ಅಕ್ಕಿಯ ಇಳುವರಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕುಸಿತಕ್ಕೆ ಕಾರಣವೇನು? ದೇಶದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವೇ ಮತ್ತು ಬೆಲೆಗಳ ಮೇಲೆ ಇದು ಎಷ್ಟು ಪರಿಣಾಮ ಬೀರಲಿದೆ? ಎಂಬುದರ ವಿವರ ಇಲ್ಲಿದೆ.

ಭತ್ತದ ಇಳುವರಿ ಏಕೆ ಕುಸಿಯಲಿದೆ?

ಇದಕ್ಕೆ ಪ್ರಮುಖವಾಗಿ 4 ಕಾರಣಗಳಿವೆ.

1. ಶೇಕಡ 45ರಷ್ಟು ಅಕ್ಕಿ ಬೆಳೆಯುವ 7 ರಾಜ್ಯಗಳಲ್ಲಿ ಶೇ.40ರವರೆಗೆ ಮಳೆ ಕೊರತೆ: ಭತ್ತದ ಬೆಳೆಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಜುಲೈ ಹೊತ್ತಿಗೆ ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್-ನಿನೋ’ ಪರಿಸ್ಥಿತಿ ನಿರ್ವಣವಾಗಿತ್ತು. ಇದರ ಪರಿಣಾಮವಾಗಿ ಜೂನ್ 1ರಿಂದ ಆರಂಭವಾದ 4 ತಿಂಗಳ ಮುಂಗಾರು, ಮಳೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಹವಾಮಾನ ಇಲಾಖೆಯ ಪ್ರಕಾರ, ಜೂನ್​ನಿಂದ ಸೆಪ್ಟೆಂಬರ್ ನಡುವೆ ಭಾರತದಲ್ಲಿ ವಾಡಿಕೆಗಿಂತ ಶೇಕಡ 12ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಪಂಜಾಬ್, ಬಿಹಾರ, ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ ಹಾಗೂ ತೆಲಂಗಾಣದಂತಹ ಪ್ರಮುಖ ಭತ್ತ ಬೆಳೆಯುವ ರಾಜ್ಯಗಳಲ್ಲಿ ಈ ಕೊರತೆಯು ಶೇ.40ರಷ್ಟಿದೆ. ದೇಶದ ಒಟ್ಟು ಅಕ್ಕಿಯ ಶೇ.45ರಷ್ಟು ಭಾಗವು ಈ 7 ರಾಜ್ಯಗಳಲ್ಲೇ ಉತ್ಪಾದನೆಯಾಗುತ್ತದೆ.

2. ಭತ್ತದ ಬಿತ್ತನೆ ಪ್ರದೇಶ ಇಳಿಕೆ: ದೇಶದ ಒಟ್ಟು ಅಕ್ಕಿ ಉತ್ಪಾದನೆಯ ಶೇ.80ರಷ್ಟು ಪಾಲು ಮುಂಗಾರು ಬೆಳೆಯಿಂದ ಬರುತ್ತದೆ. ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ, ಸೆಪ್ಟೆಂಬರ್ 25ರ ಹೊತ್ತಿಗೆ ಮುಂಗಾರು ಭತ್ತದ ಬಿತ್ತನೆ ಪ್ರದೇಶವು 4.31 ಕೋಟಿ ಹೆಕ್ಟೇರ್ ಆಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.3.6ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ 4.47 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಮಾಡಲಾಗಿತ್ತು.

3. ಕಾಡಿದ ಬರ: ಭತ್ತದ ಬೆಳೆ ಬಲಿಯುವ (ಕಾಳು ಕಟ್ಟುವ) ಹಂತದಲ್ಲಿದ್ದಾಗ ಮಳೆಯ ಪ್ರಮಾಣವು ವಾಡಿಕೆಗಿಂತ ಕಡಿಮೆಯಾಗಿತ್ತು. ರೈಸ್ ಎಕ್ಸ್​ಪೋರ್ಟ್ ಅಸೋಸಿಯೇಷನ್ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಕಂಡುಬಂದ ದೀರ್ಘಾವಧಿಯ ಒಣ ಹವೆ/ಬರ ಪರಿಸ್ಥಿತಿಯು ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಭತ್ತದ ಇಳುವರಿಯ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಿದೆ. ಅಂದರೆ, ಸಮಸ್ಯೆ ಭತ್ತ ಬೆಳೆದ ಪ್ರದೇಶ ಕಡಿಮೆಯಾಗಿರುವುದಷ್ಟೇ ಅಲ್ಲ, ಬದಲಾಗಿ ಪ್ರತಿ ಹೆಕ್ಟೇರಿಗೆ ಬರುವ ಇಳುವರಿಯೂ ಕಡಿಮೆಯಾಗುವ ಸಾಧ್ಯತೆಯಿದೆ.

4. ಹಿಂಗಾರು ಇಳುವರಿಯೂ ಕಡಿಮೆ : ಕೃಷಿ ವ್ಯಾಪಾರ ಸಂಸ್ಥೆಯಾದ ಓಲಾಮ್ ಅಗ್ರಿ ಇಂಡಿಯಾದ ಪ್ರಕಾರ, ಚಳಿಗಾಲದ ಬಿತ್ತನೆಯಾದ ಹಿಂಗಾರು ಭತ್ತದ ಬೆಳೆಯ ಪ್ರದೇಶ ಮತ್ತು ಇಳುವರಿ ಎರಡೂ ಕುಸಿಯುವ ಆತಂಕವಿದೆ; ಏಕೆಂದರೆ ಜಲಾಶಯಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ನೀರಿದೆ. ಕೇಂದ್ರ ಜಲ ಆಯೋಗದ ವರದಿಯ ಪ್ರಕಾರ, ಸೆಪ್ಟೆಂಬರ್ 24ರಂದು ದೇಶದ 178 ಪ್ರಮುಖ ಜಲಾಶಯಗಳಲ್ಲಿ ಶೇ.70.8ರಷ್ಟು ಮಾತ್ರ ನೀರು ಸಂಗ್ರಹವಿತ್ತು, ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಶೇ.89.7ರಷ್ಟು ನೀರಿನ ಸಂಗ್ರಹವಿತ್ತು.

ಏನೆಲ್ಲ ಪರಿಣಾಮ?

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಸಾಕಷ್ಟಿದೆ, ಆದರೆ ಇಳುವರಿ ಕುಸಿಯುವ ಆತಂಕದಿಂದಾಗಿ ಅಕ್ಕಿಯ ಬೆಲೆ ಏರಿಕೆಯಾಗುತ್ತಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಕಾರ, ಅಕ್ಕಿಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7ರಷ್ಟು ಹೆಚ್ಚಾಗಿವೆ. ಸೆಪ್ಟೆಂಬರ್ 27ರಂದು ಅಕ್ಕಿಯ ಸರಾಸರಿ ಬೆಲೆ ಪ್ರತಿ ಕೆಜಿಗೆ -ಠಿ;45.77 ಆಗಿತ್ತು. ಬಾಸ್ಮತಿಯೇತರ ಪ್ರೀಮಿಯಂ ಅಕ್ಕಿಯ ಬೆಲೆಯೂ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುವ ಸೋನಾ ಮಸೂರಿ ಬೆಲೆಯು 25%ರಷ್ಟು ಏರಿಕೆಯಾಗಿ -ಠಿ;58ಕ್ಕೆ ಹಾಗೂ ಪೂರ್ವ ಭಾರತದಲ್ಲಿ ಬಳಸುವ ಸ್ವರ್ಣ ಅಕ್ಕಿಯ ಬೆಲೆಯು 10%ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ -ಠಿ;35ಕ್ಕೆ ತಲುಪಿದೆ. ಮಾರುಕಟ್ಟೆಗಳಿಗೆ (ಮಂಡಿಗಳಿಗೆ) ಬಾಸ್ಮತಿ ಭತ್ತದ ಆವಕ ಪ್ರಾರಂಭವಾಗಿದೆ. ಪ್ರಸ್ತುತ ಇದರ ದರವು ಕಳೆದ ವರ್ಷಕ್ಕಿಂತ 30% ಹೆಚ್ಚಾಗಿದ್ದು, ಪ್ರತಿ ಕ್ವಿಂಟಾಲ್​ಗೆ -ಠಿ;4000 ರಷ್ಟಿದೆ. ಜಾಗತಿಕ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು 28% ಮತ್ತು ರಫ್ತಿನಲ್ಲಿ 45% ಆಗಿದೆ, ಅಂದರೆ ಅಕ್ಕಿ ರಫ್ತಿನ ವಿಷಯದಲ್ಲಿ ಭಾರತವು ವಿಶ್ವದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಭಾರತದ ನಂತರ ಅತಿ ಹೆಚ್ಚು ಅಕ್ಕಿ ರಫ್ತು ಮಾಡುವ ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಈಗಾಗಲೇ ಅಕ್ಕಿಯ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತದಲ್ಲಿ ಅಕ್ಕಿ ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಯಾದರೆ, ಜಾಗತಿಕ ಮಟ್ಟದಲ್ಲೂ ಅಕ್ಕಿಯ ಬೆಲೆ ಏರಿಕೆಯಾಗಬಹುದು ಮತ್ತು ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಬಹುದು. ಇರಾನ್ ಸಂಘರ್ಷದ ಕಾರಣದಿಂದಾಗಿ ಈಗಾಗಲೇ ಜಾಗತಿಕ ಪೂರೈಕೆ ಸರಪಳಿ ಹದಗೆಟ್ಟಿದೆ.

1. ಸಂಪೂರ್ಣ ದಾಸ್ತಾನು ತಿನ್ನಲು ಯೋಗ್ಯವಾದ ಅಕ್ಕಿಯಲ್ಲ: ಆರು ಕೋಟಿ ಟನ್​ನ ಸರ್ಕಾರಿ ದಾಸ್ತಾನಿನಲ್ಲಿ ಭತ್ತದ ಪಾಲೂ ಸೇರಿದೆ. 2026ರ ಆಗಸ್ಟ್ ವೇಳೆಗೆ ಭಾರತದ ಸರ್ಕಾರಿ ದಾಸ್ತಾನಿನಲ್ಲಿ 3.5 ಕೋಟಿ ಟನ್ ಭತ್ತವಿತ್ತು. ಇದನ್ನು ತಿನ್ನಲು ಯೋಗ್ಯವಾದ ಅಕ್ಕಿಯನ್ನಾಗಿ ಮಾಡಲು ಗಿರಣಿಗಳಲ್ಲಿ (ಮಿಲ್​ಗಳಲ್ಲಿ) ಸಂಸ್ಕರಿಸಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಸಮಯ ತಗಲುತ್ತದೆ. ಸರ್ಕಾರಿ ಗೋದಾಮುಗಳಲ್ಲಿ ಬಾಸ್ಮತಿ, ಸಾಮಾನ್ಯ ಬಿಳಿ ಅಕ್ಕಿಯ ಹೊರತಾಗಿ ದಪ್ಪ ಅಕ್ಕಿ ಮತ್ತು ನುಚ್ಚಕ್ಕಿ ಕೂಡ ಇರುತ್ತವೆ. ಸಾಮಾನ್ಯವಾಗಿ ಜನರು ಹೆಚ್ಚು ಸೇವಿಸುವ ಅಕ್ಕಿಯ ಪ್ರಮಾಣ ಇದರಲ್ಲಿ ಕಡಿಮೆಯಿರುತ್ತದೆ. ದೈನಂದಿನ ಊಟಕ್ಕಾಗಿ ಜನರು ಬಿಳಿ ಅಕ್ಕಿಯ ನಿರ್ದಿಷ್ಟ ತಳಿಗಳನ್ನು ಮಾತ್ರ ಇಷ್ಟಪಡುತ್ತಾರೆ.

2. ಎಥೆನಾಲ್ ತಯಾರಿಕೆಗೂ ಅಕ್ಕಿಯ ಬಳಕೆ: ದಾಸ್ತಾನಿನಲ್ಲಿರುವ ಅಕ್ಕಿಯ ದೊಡ್ಡ ಭಾಗವನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ, ಇದನ್ನು ಪೆಟ್ರೋಲ್​ನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಎಥೆನಾಲ್ ಉತ್ಪಾದನೆಯಲ್ಲಿ ಎಫ್​ಸಿಐ ದಾಸ್ತಾನಿನ ಅಕ್ಕಿಯ ಪಾಲು 24.64% ಆಗಿದೆ. 2024-25ರಲ್ಲಿ ಎಫ್​ಸಿಐ ಎಥೆನಾಲ್ ತಯಾರಿಕೆಗಾಗಿ 50 ಲಕ್ಷ ಟನ್ ಅಕ್ಕಿಯನ್ನು ಹಂಚಿಕೆ ಮಾಡಿತ್ತು. ಆದರೆ 2025-26ರಲ್ಲಿ ಸರ್ಕಾರವು ಎಫ್​ಸಿಐ ದಾಸ್ತಾನಿನಿಂದ 72 ಲಕ್ಷ ಟನ್ ಅಕ್ಕಿಯನ್ನು ಎಥೆನಾಲ್ ತಯಾರಿಕೆಗಾಗಿ ಮೀಸಲಿಟ್ಟಿತ್ತು. 2025ರ ಜೂನ್​ನಿಂದ 2026ರ ಜೂನ್ ನಡುವೆ ಎಫ್​ಸಿಐ ಎಥೆನಾಲ್ ತಯಾರಿಸುವ ಡಿಸ್ಟಿಲರಿ ಕಂಪನಿಗಳಿಗೆ 63.5 ಲಕ್ಷ ಟನ್ ಅಕ್ಕಿಯನ್ನು ಪೂರೈಸಿದೆ.

3. ಒಂದು ಭಾಗ ಯೋಜನೆಗಳಿಗಾಗಿ ಮೀಸಲು: ಸರ್ಕಾರಿ ದಾಸ್ತಾನಿನಲ್ಲಿರುವ ಸಂಪೂರ್ಣ ಧಾನ್ಯವನ್ನು ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ನೇರವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಒಂದು ಭಾಗವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮತ್ತು ಉಚಿತ ಧಾನ್ಯ ವಿತರಣಾ ಯೋಜನೆಗಳಿಗಾಗಿ ಕಾಯ್ದಿರಿಸಲಾಗುತ್ತದೆ. ಅಂದರೆ ಸಾಮಾನ್ಯ ವ್ಯಾಪಾರಿಗಳು ದಾಸ್ತಾನಿನಲ್ಲಿರುವ ಸಂಪೂರ್ಣ ಅಕ್ಕಿಯನ್ನು ಖರೀದಿಸಲು ಸಾಧ್ಯವಿಲ್ಲ. ಪಿಡಿಎಸ್​ನಂತಹ ಯೋಜನೆಗಳು ಮತ್ತು ತುರ್ತು ಪರಿಸ್ಥಿತಿಗಳಿಗೆ ಅಗತ್ಯವಿರುವ ದಾಸ್ತಾನನ್ನು ಹೊರತುಪಡಿಸಿ, ಉಳಿದ ಧಾನ್ಯವನ್ನು ಮಾತ್ರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂಬುದು ಸರ್ಕಾರದ ನಿಯಮವಾಗಿದೆ.

ದೇಶದಲ್ಲಿ ಅಕ್ಕಿಯ ಕೊರತೆ ಉಂಟಾಗಲಿದೆಯೇ?

ಇಳುವರಿ ಕಡಿಮೆಯಾಗುತ್ತದೆ ಎಂದಾಕ್ಷಣ ದೇಶದೊಳಗೆ ಅಕ್ಕಿಯ ತೀವ್ರ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಸರ್ಕಾರದ ಗೋದಾಮುಗಳಲ್ಲಿ ಸುಮಾರು 6 ಕೋಟಿ ಟನ್ ಅಕ್ಕಿಯ ದಾಸ್ತಾನು ಲಭ್ಯವಿದೆ. ವಾಸ್ತವವಾಗಿ, ಸರ್ಕಾರವು ಪ್ರತಿ ವರ್ಷ ರೈತರಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ನೀಡಿ ಭತ್ತವನ್ನು ಖರೀದಿಸುತ್ತದೆ. 2026-27ರ ಸಾಲಿಗೆ ಭತ್ತದ ಎಂಎಸ್​ಪಿ ಪ್ರತಿ ಕ್ವಿಂಟಾಲ್​ಗೆ -ಠಿ;2,441 ಆಗಿದೆ. ಸರ್ಕಾರವು ಈ ಅಕ್ಕಿಯನ್ನು ಫುಡ್ ಕಾರ್ಪೆರೇಷನ್ ಆಫ್ ಇಂಡಿಯಾ (ಎಫ್​ಸಿಐ) ಗೋದಾಮುಗಳಲ್ಲಿ ಸಂಗ್ರಹಿಸಿಡುತ್ತದೆ. ಇಲ್ಲಿಂದ ವಿವಿಧ ತಳಿಯ ಅಕ್ಕಿಯನ್ನು ದೇಶೀಯ ಬಳಕೆ, ಎಥೆನಾಲ್ ಉತ್ಪಾದನೆ ಹಾಗೂ ರಫ್ತು ಮುಂತಾದವುಗಳಿಗಾಗಿ ಪೂರೈಸಲಾಗುತ್ತದೆ.

ಸರ್ಕಾರವು 2026ರ ಅಕ್ಟೋಬರ್ 1ರ ವೇಳೆಗೆ 1.03 ಕೋಟಿ ಟನ್ ದಾಸ್ತಾನು ಹೊಂದುವ ಗುರಿ ಹೊಂದಿತ್ತು. ಆದರೆ 2026ರ ಸೆಪ್ಟೆಂಬರ್ 1ರ ಹೊತ್ತಿಗಾಗಲೇ 6 ಕೋಟಿ ಟನ್ ಭತ್ತದ ದಾಸ್ತಾನು ಸಂಗ್ರಹವಾಗಿದೆ. ಅಂದರೆ ಅಗತ್ಯಕ್ಕಿಂತ 6 ಪಟ್ಟು ಹೆಚ್ಚು. ಇಷ್ಟೊಂದು ದೊಡ್ಡ ಪ್ರಮಾಣದ ದಾಸ್ತಾನಿಗೆ ಕಾರಣವೇನೆಂದರೆ, 2023ರ ಜುಲೈನಿಂದ 2024ರ ಅಕ್ಟೋಬರ್​ವರೆಗೆ ಸರ್ಕಾರವು ಬಾಸ್ಮತಿ ಹೊರತುಪಡಿಸಿ ಉಳಿದೆಲ್ಲ ಬಗೆಯ ಅಕ್ಕಿಯ ರಫ್ತನ್ನು ನಿಷೇಧಿಸಿತ್ತು. ಏಕೆಂದರೆ ಅದರ ಹಿಂದಿನ ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ 11% ಹೆಚ್ಚಾಗಿತ್ತು ಮತ್ತು ಅಕ್ಕಿ ಇನ್ನಷ್ಟು ದುಬಾರಿಯಾಗಬಹುದು ಎಂದು ಸರ್ಕಾರ ಭಾವಿಸಿತ್ತು. ಇದರಿಂದಾಗಿ ಅಕ್ಕಿಯ ದಾಸ್ತಾನು ಹೆಚ್ಚುತ್ತ ಹೋಯಿತು. ಆದಾಗ್ಯೂ, ಇಷ್ಟೊಂದು ಬೃಹತ್ ದಾಸ್ತಾನು ಇದ್ದರೂ, ಅಕ್ಕಿಯ ಪೂರೈಕೆಯ ಕುರಿತಾದ ಆತಂಕಗಳು ಇನ್ನೂ ಮುಂದುವರಿದಿವೆ.

ಪರಿಸ್ಥಿತಿ ಯಾವಾಗ ಸುಧಾರಿಸಲಿದೆ?

ಮಳೆಯ ಕೊರತೆಯಿಂದಾಗಿ ಉಂಟಾಗಿರುವ ಸಮಸ್ಯೆ ಮುಂಗಾರು ಋತುವಿಗೆ ಮಾತ್ರ ಸೀಮಿತವಾಗಿಲ್ಲ. ಚಳಿಗಾಲದ, ಅಂದರೆ ಹಿಂಗಾರು ಬೆಳೆಗಳ ಬಿತ್ತನೆಯ ಮೇಲೂ ಇದು ಪರಿಣಾಮ ಬೀರಬಹುದು. ಆದ್ದರಿಂದ ಈ ವರ್ಷದ ಕೊರತೆಯನ್ನು ನೀಗಿಸುವುದಷ್ಟೇ ಅಲ್ಲದೆ, ಮುಂದಿನ ವರ್ಷಕ್ಕೂ ದಾಸ್ತಾನು ಕಡಿಮೆಯಾಗುವ ಆತಂಕವಿದೆ. ಇಳುವರಿ ಕುಸಿಯುವುದರಿಂದ ಅಕ್ಕಿಯ ಮೇಲೆ ಅವಲಂಬಿತವಾಗಿರುವ ಇತರ ಉದ್ಯಮಗಳ ಮೇಲೂ ಪರಿಣಾಮ ಬೀರಲಿದೆ. ಉದಾಹರಣೆಗೆ, ಪ್ರಾಣಿಗಳ ಮೇವು ಮತ್ತು ಅಕ್ಕಿಯನ್ನು ಬಳಸಿ ಪಶು ಆಹಾರ ತಯಾರಿಸುವ ಉದ್ಯಮ. ಭಾರತದಲ್ಲಿ ಕೋಳಿ ಸಾಕಾಣಿಕೆಯಲ್ಲಿ 70%ರಷ್ಟು ವೆಚ್ಚವು ಕೋಳಿಗಳ ಆಹಾರದ ಮೇಲೆಯೇ ಆಗುತ್ತದೆ. ಈ ಮೇವನ್ನು ಮುಖ್ಯವಾಗಿ ನುಚ್ಚಕ್ಕಿಯಿಂದ (ಬ್ರೋಕನ್ ರೈಸ್) ತಯಾರಿಸಲಾಗುತ್ತದೆ. ಅಕ್ಟೋಬರ್ ಮೊದಲ ವಾರದ ವೇಳೆಗೆ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದ ಮಾರುಕಟ್ಟೆಗಳಲ್ಲಿ ಅಕ್ಕಿಯ ಆವಕ ಹೆಚ್ಚಾಗಲಿದೆ. ಇದರಿಂದ ಬಾಸ್ಮತಿ ಅಕ್ಕಿಯ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಅದರ ನಂತರವೇ ಸ್ಪಷ್ಟ ಚಿತ್ರಣ ಹೊರಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net