"ನಮ್ಮನ್ನ ಯಾರೂ ಬೆದರಿಸೋಕೆ ಆಗಲ್ಲ!": ದೆಹಲಿ ಪ್ರತಿಭಟನೆ ವಿಚಾರಣೆ ಆರಂಭ: ಮುಖ್ಯ ನ್ಯಾಯಮೂರ್ತಿಗಳಿಂದ ಖಡಕ್​ ಎಚ್ಚರಿಕೆ! CJI Surya Kant

ದೆಹಲಿ ಪ್ರತಿಭಟನೆ ಹಾಗೂ ಪೊಲೀಸ್ ದೌರ್ಜನ್ಯ ಕೇಸ್ ಸುಪ್ರೀಂ ಅಂಗಳಕ್ಕೆ. "ನಮ್ಮನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದ ಸಿಜೆಐ ಸೂರ್ಯ ಕಾಂತ್. ಹಿರಿಯ ಪೊಲೀಸ್ ಅಧಿಕಾರಿಗೆ ಸಮನ್ಸ್.
Supreme Court Chief Justice Surya Kant – Hearing of the petition regarding the Delhi protest
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ - ದೆಹಲಿ ಪ್ರತಿಭಟನೆ ಅರ್ಜಿ ವಿಚಾರಣೆ
Published on: 

ನವದೆಹಲಿ: ದೆಹಲಿಯ ಬೀದಿಗಳಲ್ಲಿ ಶುರುವಾದ ಪ್ರತಿಭಟನೆ ಕಿಚ್ಚು ಈಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಅಕ್ಟೋಬರ್ 10 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಶಾಂತಿಯುತ ಪ್ರತಿಭಟನಾಕಾರರು, ವಕೀಲರು ಹಾಗೂ ಮಹಿಳಾ ಪತ್ರಕರ್ತೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ, ಲಾಠಿಚಾರ್ಜ್ ಮತ್ತು ಅಕ್ರಮ ಬಂಧನಗಳ ವಿರುದ್ಧ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.15) ಆರಂಭಿಸಿದೆ.

"ನಮ್ಮನ್ನ ಯಾರೂ ಬೆದರಿಸೋಕೆ ಆಗಲ್ಲ!": ಸಿಜೆಐ ಖಡಕ್ ಸಂದೇಶ

ವಿಚಾರಣೆ ವೇಳೆ ಹಿರಿಯ ವಕೀಲ ಗೌರವ್ ಭಾಟಿಯಾ, "ನ್ಯಾಯಾಲಯದ ಒಳಗೆ ನಡೆದಿರುವ ಕೆಲವು ಘಟನೆಗಳಿಂದ ವಕೀಲರ ಸಮುದಾಯಕ್ಕೆ ತೀವ್ರ ನೋವಾಗಿದೆ. ಕೆಲವರು ಕೋರ್ಟ್‌ಗೆ ಬೆದರಿಕೆ ಹಾಕುವ ತಂತ್ರ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಸುಮಾರು 200 ವಕೀಲರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ಗೆ ಪತ್ರ ಬರೆದು ದೂರು ನೀಡಿದ್ದಾರೆ," ಎಂದು ಅಸಮಾಧಾನ ಹೊರಹಾಕಿದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, "ನಮ್ಮನ್ನು ಯಾರೂ ಇಲ್ಲಿ ಬೆದರಿಸಲು ಸಾಧ್ಯವಿಲ್ಲ, ಈ ವಿಚಾರದಲ್ಲಿ ನೀವು ಸಂಪೂರ್ಣ ನಿಶ್ಚಿಂತರಾಗಿರಬಹುದು. ಜನ ಕೋರ್ಟ್‌ನಿಂದ ಹೊರಗಡೆ ನಿಂತು ಏನೆಲ್ಲಾ ಹೇಳಿಕೆಗಳನ್ನು ಕೊಡುತ್ತಾರೆ. ಆದರೆ ಅದೇ ಜನ ನ್ಯಾಯಪೀಠದ ಎದುರಿಗೆ ನಿಂತಾಗ ಅವರ ಭಾಷೆಯೇ ಬೇರೆಯಾಗುತ್ತದೆ," ಎಂದು ಹೇಳಿದ್ದಾರೆ.

ಇದೇ ವೇಳೆ, ನ್ಯಾಯಾಲಯದ ಹೊರಗೆ ರಾಜಕೀಯ ನಾಯಕರು ಅಥವಾ ಅರ್ಜಿದಾರರು ನೀಡುವ ಹೇಳಿಕೆಗಳನ್ನು ಇಟ್ಟುಕೊಂಡು ಕೋರ್ಟ್ ತೀರ್ಪು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ತಿಳಿಸಿದರು.

ಮಹಿಳಾ ಪತ್ರಕರ್ತೆಯರ ಮೇಲಿನ ಹಲ್ಲೆ ಆರೋಪ!

ಪ್ರತಿಭಟನೆಯ ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತೆಯರ ಮೇಲೆ ಕಿರುಕುಳ ಮತ್ತು ಹಲ್ಲೆ ನಡೆಸಲಾಗಿದೆ ಎಂಬ ಆರೋಪವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದೆ. ಸ್ಥಳದಲ್ಲಿದ್ದ ಪೊಲೀಸರು ಏನು ಮಾಡುತ್ತಿದ್ದರು ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಈ ಅಮಾನವೀಯ ವರ್ತನೆಯ ಬಗ್ಗೆ ಸ್ಪಷ್ಟನೆ ನೀಡಲು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೇ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದೆ.

ಅಲ್ಲದೆ, ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ಜನಸಾಮಾನ್ಯರು ಮತ್ತು ಮಕ್ಕಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಆದರೆ, ಇಂತಹ ಗಂಭೀರ ಕೃತ್ಯ ಎಸಗಿದವರನ್ನು ಬಂಧಿಸಿದ ಮರುದಿನವೇ ಜಾಮೀನು ನೀಡಿ, ಅವರ ಬೆಂಬಲಿಗರು ಅವರಿಗೆ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದರು.

Also Read
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ದೊರೆಯಲ್ಲ! ಐತಿಹಾಸಿಕ ತೀರ್ಪು ಪ್ರಕಟಿಸಿದ Supreme Court
Supreme Court Chief Justice Surya Kant – Hearing of the petition regarding the Delhi protest

ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲವೇ?

ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಮೆಟ್ರೋ ಮತ್ತು ರೈಲ್ವೆ ಸೇವೆಗಳನ್ನು ಸಂಪೂರ್ಣ ಬಂದ್ ಮಾಡದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಆದರೂ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

ಇದಕ್ಕೆ ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮ ಕೈಗೊಂಡಿದ್ದಾರೆಯೇ ಹೊರತು ಕೋರ್ಟ್ ಆದೇಶ ಉಲ್ಲಂಘಿಸಿಲ್ಲ. ನ್ಯಾಯಾಂಗ ನಿಂದನೆ ಪ್ರಕ್ರಿಯೆಯಲ್ಲಿ ಸಲ್ಲಿಸಿದ ಕ್ಷಮೆಯನ್ನು ಸರ್ಕಾರ ತನ್ನ ತಪ್ಪು ಒಪ್ಪಿಕೊಂಡಿದೆ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸರಿಯಲ್ಲ," ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೇವಲ ನೆಪಮಾತ್ರದ ಕ್ಷಮೆಯನ್ನು ಸುಮ್ಮನೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿತು. ಅಲ್ಲದೆ, ದೆಹಲಿ ಮೆಟ್ರೋ ನೀಡಿದ ವರದಿಯನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳ ವರದಿ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ರಾಹುಲ್ ಗಾಂಧಿ ಅರ್ಜಿಗೂ ನೋಟಿಸ್

ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ಜೊತೆಗೆ, 25ನೇ ಕ್ರಮಾಂಕದ ಅರ್ಜಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾಗಿದ್ದರು. ಈ ವಿಷಯದಲ್ಲೂ ಕೇಂದ್ರ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುವುದಾಗಿ ಪೀಠ ತಿಳಿಸಿದೆ. ಒಟ್ಟಾರೆ, ದೆಹಲಿ ಪ್ರತಿಭಟನೆ, ಪೊಲೀಸ್ ದೌರ್ಜನ್ಯ ಮತ್ತು ಚುನಾವಣಾ ಆಯೋಗದ ಸುತ್ತ ಸುತ್ತಿಕೊಂಡಿರುವ ಈ ಮಹತ್ವದ ಕಾನೂನು ಸಮರವು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದ ದಿಕ್ಕನ್ನು ಬದಲಿಸುವುದ ಖಚಿತವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net