ಕಾನೂನು, ನಿರುದ್ಯೋಗ ಸಮಸ್ಯೆ, ಜೆನ್​ ಜೀ....ಯುಪಿ ಚುನಾವಣಾ ಫಲಿತಾಂಶ ನಿರ್ಧರಿಸ್ತಾವಾ ಈ 5 ಅಂಶಗಳು...? | News18 UP Mega Survey

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾವ ನಿರ್ದಿಷ್ಟ ವಿಷಯಗಳ ಆಧಾರದ ಮೇಲೆ ತಮ್ಮ ಹಕ್ಕು ಚಲಾಯಿಸಲು ಮುಂದಾಗಲಿದ್ದಾರೆ ಎಂಬುದರ ಕುರಿತು ಮಹತ್ವದ ಸಮೀಕ್ಷೆಯೊಂದು ಹೊರಬಿದ್ದಿದೆ. ನ್ಯೂಸ್18 ಯುಪಿ ಮೆಗಾ ಸರ್ವೆ (News18 UP Mega Survey) ವತಿಯಿಂದ, ಪಿ ವ್ಯಾಲ್ಯೂ ಅನಾಲಿಟಿಕ್ಸ್ ಸಹಯೋಗದೊಂದಿಗೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.
ಕಾನೂನು, ನಿರುದ್ಯೋಗ ಸಮಸ್ಯೆ, ಜೆನ್​ ಜೀ....ಯುಪಿ ಚುನಾವಣಾ ಫಲಿತಾಂಶ ನಿರ್ಧರಿಸ್ತಾವಾ ಈ 5 ಅಂಶಗಳು...? | News18 UP Mega Survey
�
Published on: 

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾವ ನಿರ್ದಿಷ್ಟ ವಿಷಯಗಳ ಆಧಾರದ ಮೇಲೆ ತಮ್ಮ ಹಕ್ಕು ಚಲಾಯಿಸಲು ಮುಂದಾಗಲಿದ್ದಾರೆ ಎಂಬುದರ ಕುರಿತು ಮಹತ್ವದ ಸಮೀಕ್ಷೆಯೊಂದು ಹೊರಬಿದ್ದಿದೆ. ನ್ಯೂಸ್18 ಯುಪಿ ಮೆಗಾ ಸರ್ವೆ (News18 UP Mega Survey) ವತಿಯಿಂದ, ಪಿ ವ್ಯಾಲ್ಯೂ ಅನಾಲಿಟಿಕ್ಸ್ ಸಹಯೋಗದೊಂದಿಗೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಚುನಾವಣೆಗೂ ಮುಂಚಿತವಾಗಿ ಮತದಾರರ ನಾಡಿಮಿಡಿತ ಹಾಗೂ ಮತದಾರರ ಆದ್ಯತೆಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದೆ. ಈ ವರದಿಯ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ, ಉದ್ಯೋಗಾವಕಾಶಗಳು, ಹಣದುಬ್ಬರ, ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ರೈತರ ಆರ್ಥಿಕ ಸ್ಥಿತಿಗತಿಗಳು ಚುನಾವಣೆಯ ದಿಕ್ಕನ್ನು ನಿರ್ಧರಿಸುವ ಪ್ರಮುಖ ಅಜೆಂಡಾಗಳಾಗಿ ಹೊರಹೊಮ್ಮಿವೆ ಎಂದು ತಿಳಿದುಬಂದಿದೆ.

ಕಾನೂನು ಮತ್ತು ಸುವ್ಯವಸ್ಥೆಗೆ ಮೊದಲ ಆದ್ಯತೆ!

ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟಾರೆ ಪ್ರತಿಕ್ರಿಯೆದಾರರ ಪೈಕಿ ಶೇಕಡಾ 33.4 ರಷ್ಟು ಮಂದಿ ಕಾನೂನು ಮತ್ತು ಸುವ್ಯವಸ್ಥೆಯೇ ತಮ್ಮ ಮತದಾನದ ನಿರ್ಧಾರದ ಮೇಲೆ ಪ್ರಭಾವ ಬೀರುವ ಅತ್ಯಂತ ದೊಡ್ಡ ಅಂಶ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಡಳಿತರೂಢ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಬೆಂಬಲಿಗರಲ್ಲಿ ಈ ವಿಚಾರಕ್ಕೆ ಶೇಕಡಾ 44.2 ರಷ್ಟು ಭಾರಿ ಬೆಂಬಲ ವ್ಯಕ್ತವಾಗಿರುವುದು ವಿಶೇಷ. ಆದರೆ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಕ್ಕೂಟದ ಬೆಂಬಲಿಗರಲ್ಲಿ ಇದು ಶೇಕಡಾ 11.3 ರಷ್ಟಿದ್ದರೆ, ಬಿಎಸ್‌ಪಿ ಬೆಂಬಲಿಗರಲ್ಲಿ ಶೇಕಡಾ 12.7 ರಷ್ಟು ಮಾತ್ರ ದಾಖಲಾಗಿದೆ. ಇದರರ್ಥ ಆಡಳಿತ ಪಕ್ಷದ ವಲಯದಲ್ಲಿ ಭದ್ರತೆ ಮತ್ತು ಕಾನೂನು ಕಟ್ಟುನಿಟ್ಟಿನ ಕ್ರಮಗಳು ಅತ್ಯಂತ ಪ್ರಮುಖ ಮತಬ್ಯಾಂಕ್ ವಿಷಯವಾಗಿ ಉಳಿದುಕೊಂಡಿವೆ.

ಉದ್ಯೋಗ ಮತ್ತು ನಿರುದ್ಯೋಗಕ್ಕೆ ಎರಡನೇ ಸ್ಥಾನ!

ಮತದಾರರ ಒಲವಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ನಿರುದ್ಯೋಗ ಸಮಸ್ಯೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟಾರೆ ಶೇಕಡಾ 21.4 ರಷ್ಟು ಜನರು ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಬೆಂಬಲಿಗರ ಪೈಕಿ ಶೇಕಡಾ 27.8 ರಷ್ಟು ಮಂದಿ ಉದ್ಯೋಗವೇ ತಮ್ಮ ಮೊದಲ ಆದ್ಯತೆ ಎಂದಿದ್ದಾರೆ. ಹಾಗೆಯೇ ಬಿಎಸ್‌ಪಿ ಬೆಂಬಲಿಗರಲ್ಲಿ ಈ ಪ್ರಮಾಣ ಶೇಕಡಾ 28.5 ರಷ್ಟಿದೆ. ವಿಶೇಷವಾಗಿ 18 ರಿಂದ 25 ವರ್ಷ ವಯಸ್ಸಿನ ಯುವ ಮತದಾರರ ನಡುವೆ ಉದ್ಯೋಗದ ವಿಷಯವು ಶೇಕಡಾ 26.3 ರಷ್ಟು ಪ್ರಮುಖ ಪಾತ್ರ ವಹಿಸಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಹಣದುಬ್ಬರ ಮತ್ತು ಬೆಲೆ ಏರಿಕೆಯ ಬಿಸಿ!

ಜನಸಾಮಾನ್ಯರನ್ನು ಕಾಡುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯು ಶೇಕಡಾ 19.2 ರಷ್ಟು ಮತದಾರರ ದೃಷ್ಟಿಯಲ್ಲಿ ಮೂರನೇ ಪ್ರಮುಖ ಚುನಾವಣಾ ವಿಷಯವಾಗಿದೆ. ಎಸ್‌ಪಿ-ಕಾಂಗ್ರೆಸ್ ಒಕ್ಕೂಟದ ಶೇಕಡಾ 25.1 ರಷ್ಟು ಬೆಂಬಲಿಗರು ಮತ್ತು ಬಿಎಸ್‌ಪಿಯ ಶೇಕಡಾ 26.7 ರಷ್ಟು ಬೆಂಬಲಿಗರು ಬೆಲೆ ಏರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕವಾಗಿ ನೋಡುವುದಾದರೆ, ಪೂರ್ವ ಉತ್ತರ ಪ್ರದೇಶದ ಜನರಲ್ಲಿ ಹಣದುಬ್ಬರದ ಪ್ರಭಾವ ಶೇಕಡಾ 27.2 ರಷ್ಟು ತೀವ್ರವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಎಐ ನಿರ್ಮಿತ ಚಿತ್ರ
ಎಐ ನಿರ್ಮಿತ ಚಿತ್ರ�

ಪೇಪರ್ ಲೀಕ್ ಮತ್ತು ರೈತರ ಕಷ್ಟ!

ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯವನ್ನು ರೋಸಿಹೋಗುವಂತೆ ಮಾಡಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಜೆನ್-ಜೀ ಯುವಕರ ಪ್ರತಿಭಟನೆಗಳು ಒಟ್ಟಾರೆ ಶೇಕಡಾ 10.4 ರಷ್ಟು ಪ್ರಭಾವ ಬೀರಿವೆ. ಇದರೊಂದಿಗೆ ಅನ್ನದಾತರ ಸಂಕಷ್ಟ ಹಾಗೂ ರೈತರ ಪರಿಸ್ಥಿತಿಯು ಶೇಕಡಾ 5.1 ರಷ್ಟು ಮಂದಿಯ ಮುಖ್ಯ ವಿಷಯವಾಗಿದೆ. ಈ ಸಮೀಕ್ಷೆಯು ಕೇವಲ ಸಾಂಪ್ರದಾಯಿಕ ರಾಜಕೀಯ ಪ್ರಶ್ನೆಗಳಿಗೆ ಸೀಮಿತವಾಗದೆ, ಆಡಳಿತದ ಬಗ್ಗೆ ಸಾರ್ವಜನಿಕರ ಗ್ರಹಿಕೆ, ನಾಯಕತ್ವದ ಶೈಲಿ ಹಾಗೂ ವಿವಿಧ ಸಾಮಾಜಿಕ ವರ್ಗಗಳು ಮತ್ತು ಪ್ರದೇಶಗಳ ನಡುವಿನ ಮನೋಭಾವದ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದೆ. ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಮತ್ತು ಚುನಾವಣಾ ಪ್ರಚಾರದ ರಣತಂತ್ರಗಳನ್ನು ರೂಪಿಸಲು ಈ ಸಮೀಕ್ಷಾ ವರದಿಯು ದಿಕ್ಸೂಚಿಯಾದರೂ ಅಚ್ಚರಿಪಡಬೇಕಿಲ್ಲ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net