ಸೆನ್ಸಾರ್ ಮಂಡಳಿಗೆ ಹೊಸ ತಂಡ ರಚನೆ: ಪ್ರೀತಿ ಝಿಂಟಾ, ಸುನೀಲ್ ಶೆಟ್ಟಿ ಸೇರಿ 18 ದಿಗ್ಗಜರ ನೇಮಕ! Censor Board
ಸೆನ್ಸಾರ್ ಮಂಡಳಿಯ ಹೊಸ ಸಮಿತಿಗೆ ಸೆಲೆಬ್ರಿಟಿಗಳ ನೇಮಕ
Published on:
Copied
Follow Us
ನವದೆಹಲಿ: ಭಾರತೀಯ ಚಲನಚಿತ್ರ ಸೆನ್ಸಾರ್ ಮಂಡಳಿಯಲ್ಲಿ (CBFC) ಭಾರಿ ಬದಲಾವಣೆ ಆಗಿದೆ. ಕೇಂದ್ರ ಸರ್ಕಾರವು ಚಲನಚಿತ್ರ ಪ್ರಮಾಣೀಕರಣ ಮಂಡಳಿ (Censor Board) ಗೆ 18 ಸದಸ್ಯರ ಹೊಸ ಸಮಿತಿಯನ್ನು ಅಧಿಕೃತವಾಗಿ ರಚಿಸಿದೆ.
ಮನರಂಜನಾ ಕ್ಷೇತ್ರಕ್ಕೆ ಹೊಸ ಕಳೆ ತರುವ ಉದ್ದೇಶದಿಂದ ನೇಮಕ ಮಾಡಲಾಗಿರುವ ಈ ಹೊಸ ಸಮಿತಿಯಲ್ಲಿ ಬಾಲಿವುಡ್‌ನ ದಿಗ್ಗಜ ನಟರು, ನಿರ್ದೇಶಕರು, ಸಂಗೀತಗಾರರು ಹಾಗೂ ಸಾಹಿತಿಗಳು ಸ್ಥಾನ ಪಡೆದಿದ್ದಾರೆ.
ಮೂರು ವರ್ಷಗಳ ಅವಧಿಗೆ ಅಸ್ತಿತ್ವಕ್ಕೆ ಬಂದಿರುವ ಈ ನೂತನ ಸಮಿತಿಯಲ್ಲಿ ಜನಪ್ರಿಯ ತಾರೆಯರಾದ ಪ್ರೀತಿ ಝಿಂಟಾ, ಸುನೀಲ್ ಶೆಟ್ಟಿ, ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಪಲ್ಲವಿ ಜೋಶಿ, ರೂಪಾಲಿ ಗಂಗೂಲಿ ಹಾಗೂ ಬಂಗಾಳಿ ಚಿತ್ರರಂಗದ ಸ್ಟಾರ್ ಪ್ರೊಸೆನ್‌ಜಿತ್ ಚಟರ್ಜಿ ಸೇರಿದಂತೆ ಅನೇಕ ದಿಗ್ಗಜರು ಸೇರಿದ್ದಾರೆ.
ಈ ಸಮಿತಿಯು ದೇಶದಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳನ್ನು ಪರಿಶೀಲಿಸಿ, ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಡಿ ಅವುಗಳಿಗೆ ಸೂಕ್ತ ಪ್ರಮಾಣೀಕರಣ (Certification) ನೀಡುವ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಲಿದೆ. ಕೇವಲ ಸಿನಿಮಾಗಳಷ್ಟೇ ಅಲ್ಲದೆ, ಭಾರತೀಯ ಮನರಂಜನಾ ಕ್ಷೇತ್ರದ ವೈವಿಧ್ಯಮಯ ಅನುಭವಗಳನ್ನು ಈ ಸಮಿತಿಯ ತೀರ್ಮಾನಗಳಲ್ಲಿ ತರಲು ಈ ಹೊಸ ತಂಡವು ಕಾರ್ಯನಿರ್ವಹಿಸಲಿದೆ.
ಸಮಿತಿಯಲ್ಲಿರುವ ಪ್ರಮುಖ ಸೆಲೆಬ್ರಿಟಿಗಳು ಇವರೇ ನೋಡಿ!
ಬಾಲಿವುಡ್ ಸ್ಟಾರ್ಸ್ ಜಲಕ್: 2000ರ ದಶಕದ ಪ್ರಮುಖ ನಟಿ ಪ್ರೀತಿ ಝಿಂಟಾ, ಆಕ್ಷನ್ ಹಾಗೂ ರೊಮ್ಯಾಂಟಿಕ್ ಹೀರೋ ಸುನೀಲ್ ಶೆಟ್ಟಿ ಮತ್ತು ತಮ್ಮ ಸಹಜ ಅಭಿನಯದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಪಂಕಜ್ ತ್ರಿಪಾಠಿ ಈ ಸಮಿತಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಕಿರುತೆರೆ ನಟಿಯರು: 'ಅನುಪಮಾ' ಖ್ಯಾತಿಯ ಜನಪ್ರಿಯ ನಟಿ ರೂಪಾಲಿ ಗಂಗೂಲಿ ಹಾಗೂ ಹಿರಿಯ ನಟಿ ಪಲ್ಲವಿ ಜೋಶಿ ಕೂಡ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ದಿಗ್ಗಜ ನಿರ್ದೇಶಕರು ಮತ್ತು ಸಂಗೀತಗಾರರು: ಜನಪ್ರಿಯ ಹಾಸ್ಯ ಚಿತ್ರಗಳ ಮಾಂತ್ರಿಕ ಪ್ರಿಯದರ್ಶನ್, ಮೂರು ಬಾರಿ ಗ್ರಾಮ್ಮಿ ಪ್ರಶಸ್ತಿ ವಿಜೇತ ಕನ್ನಡಿಗ ಸಂಗೀತ ನಿರ್ದೇಶಕ ರಿಕಿ ಕೇಜ್, ಪಂಜಾಬಿ ಜಾನಪದ ಗಾಯಕ ಹನ್ಸ್‌ರಾಜ್ ಹನ್ಸ್ ಈ ಸಮಿತಿಗೆ ಕಳೆ ತಂದಿದ್ದಾರೆ.
ವಿಮರ್ಶಕರು ಮತ್ತು ಸಾಹಿತಿಗಳು: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ವಿಮರ್ಶಕ ವಿನೋದ್ ಅನುಪಮ್, ಹಿರಿಯ ರಂಗಕರ್ಮಿ ವಾಮನ್ ಕೇಂದ್ರೆ ಹಾಗೂ ಲೇಖಕ ರಮೇಶ್ ಪಟಂಗೆ ಕೂಡ ಸಿನಿಮಾಗಳ ಮೌಲ್ಯಮಾಪನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಭಾರತೀಯ ಸಿನಿಮಾರಂಗಕ್ಕೆ ಹೊಸ ದಿಕ್ಕು?
ಮನರಂಜನಾ ಕ್ಷೇತ್ರದ ಬೇರೆ ಬೇರೆ ಆಯಾಮಗಳಿಂದ ದಿಗ್ಗಜರನ್ನು ಆರಿಸಿಕೊಳ್ಳಲಾಗಿದ್ದು, ಇದು ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಾಣಿಜ್ಯ ಸಿನಿಮಾಗಳಿಂದ ಹಿಡಿದು ಕಲಾತ್ಮಕ ಹಾಗೂ ಸಮಾಜಮುಖಿ ಚಿತ್ರಗಳವರೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಲು ಈ ಸಮಿತಿಯಲ್ಲಿ ನುರಿತ ಅನುಭವಿಗಳಿರುವುದು ವಿಶೇಷ.
ಒಟ್ಟಿನಲ್ಲಿ, ಸಿನಿಪ್ರೇಮಿಗಳ ಅಚ್ಚುಮೆಚ್ಚಿನ ನಟ-ನಟಿಯರೇ ಈಗ ಸೆನ್ಸಾರ್ ಮಂಡಳಿಯ ಹೊಸ ನಿರ್ಧಾರಗಳಲ್ಲಿ ಭಾಗಿಯಾಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ, (ಏಜೆನ್ಸೀಸ್).