25 ವರ್ಷಗಳ ನಂತರ ಸಿಕ್ಕ ತಾಯಿ: 'ಹಿಂದೂ ಆದ್ರೆ ಮಾತ್ರ ಮನೆಗೆ ಬಾ' ಎಂದ ಮಗ!

MotherAndSon
MotherAndSon
Published on
ಕೋಲ್ಕತ್ತಾ/ಜಾರ್ಖಂಡ್: ಸುಮಾರು 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಪತ್ತೆಯಾಗಿದ್ದರೂ, ಮಗ ಆಕೆಯನ್ನು ಸ್ವೀಕರಿಸಲು ವಿಧಿಸಿರುವ 'ಧರ್ಮ ಬದಲಾವಣೆ'ಯ ಷರತ್ತು ಈಗ ಮಾನವೀಯತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.
ವರದಿಗಳ ಪ್ರಕಾರ, ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಸುಶೀಲಾ ಮುರ್ಮು ಎಂಬ ಮಹಿಳೆ ಸುಮಾರು 20-25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದ ಸುಶೀಲಾ, ಮದುವೆಗೂ ಮುನ್ನವೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಪತಿಯ ನಿಧನದ ನಂತರ, ಹಳ್ಳಿಯ ಜನರು ಕ್ರಿಶ್ಚಿಯನ್ ಮಹಿಳೆಗೆ ಅಲ್ಲಿ ವಾಸಿಸಲು ಅವಕಾಶ ನೀಡದೆ ಆಕೆಯನ್ನು ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ.
ಮಾನಸಿಕವಾಗಿ ಕುಗ್ಗಿದ್ದ ಸುಶೀಲಾ 2001ರಲ್ಲಿ ಕೋಲ್ಕತ್ತಾ ತಲುಪಿದ್ದರು. ಅಲ್ಲಿ 'ಮಿಷನರೀಸ್ ಆಫ್ ಚಾರಿಟಿ' ಸಂಸ್ಥೆಯು ಆಕೆಗೆ ಆಶ್ರಯ ನೀಡಿತ್ತು. ಅಂದಿನಿಂದ ಇಂದಿನವರೆಗೆ ಕೋಲ್ಕತ್ತಾದ ಆಶ್ರಮವೇ ಆಕೆಗೆ ಮನೆಯಾಗಿತ್ತು.

ರೇಡಿಯೋ ನೆಟ್ವರ್ಕ್ ಮೂಲಕ ಕುಟುಂಬದ ಪತ್ತೆ

ಪಶ್ಚಿಮ ಬಂಗಾಳ ರೇಡಿಯೋ ಕ್ಲಬ್‌ನ ಅಂಬರೀಶ್ ನಾಗ್ ಬಿಸ್ವಾಸ್ ಅವರು ಹವ್ಯಾಸಿ ರೇಡಿಯೋ ನೆಟ್‌ವರ್ಕ್ ಮೂಲಕ ಸುಶೀಲಾ ಅವರ ಫೋಟೋ ಹಂಚಿಕೊಂಡಿದ್ದರು. ಇದರ ಫಲವಾಗಿ ಜಾರ್ಖಂಡ್‌ನ ದಹುಪಗರ್ ಗ್ರಾಮದಲ್ಲಿರುವ ಅವರ ಮಗ ಮದನ್ ಬೆಸ್ರಾ ಪತ್ತೆಯಾಗಿದ್ದಾನೆ. ದಶಕಗಳ ನಂತರ ವಿಡಿಯೋ ಕಾಲ್ ಮೂಲಕ ತಾಯಿ-ಮಗ ಮಾತನಾಡಿದಾಗ ಇಡೀ ಆಶ್ರಮದಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು.

ಸಂಬಂಧಕ್ಕೆ ಅಡ್ಡಬಂದ ಧರ್ಮದ ಗೋಡೆ

ಆದರೆ, ಈ ಸಂತೋಷದ ಕ್ಷಣ ಹೆಚ್ಚು ಹೊತ್ತು ಉಳಿಯಲಿಲ್ಲ. ಮಗ ಮದನ್ ಬೆಸ್ರಾ ತನ್ನ ತಾಯಿಗೆ ಕಠಿಣ ಷರತ್ತೊಂದನ್ನು ವಿಧಿಸಿದ್ದಾನೆ. "ನೀನು ಮನೆಗೆ ಬರಬೇಕಾದರೆ ಕ್ರಿಶ್ಚಿಯನ್ ಧರ್ಮ ಬಿಟ್ಟು ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳಬೇಕು," ಎಂದು ಆತ ಸ್ಪಷ್ಟವಾಗಿ ಹೇಳಿದ್ದಾನೆ. ಇದಕ್ಕೆ ಸುಶೀಲಾ ಅವರು ಅಷ್ಟೇ ದೃಢವಾಗಿ ಪ್ರತಿಕ್ರಿಯಿಸಿದ್ದು, "ನಾನು ನನ್ನ ಧರ್ಮವನ್ನು ಬಿಡಲಾರೆ, ಇದೇ ನನ್ನ ಅಂತಿಮ ನಿರ್ಧಾರ," ಎಂದು ಮನೆಗೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದಾರೆ.

ಪೊಲೀಸರ ಹಸ್ತಕ್ಷೇಪ

ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಅಧಿಕಾರಿ ಮಹಾವೀರ್ ಪಂಡಿತ್ ಅವರು ಮಗನ ಮನವೊಲಿಸಲು ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಸುಶೀಲಾ ಮುರ್ಮು ಅವರು ಕೋಲ್ಕತ್ತಾದ ಆಶ್ರಮದಲ್ಲೇ ಮುಂದುವರಿದಿದ್ದಾರೆ. ಮಗ ಸಿಕ್ಕಿದ್ದರೂ, ಧರ್ಮದ ಕಾರಣಕ್ಕೆ ಸ್ವಂತ ಮನೆಗೆ ಹೋಗಲು ಸಾಧ್ಯವಾಗದ ಸ್ಥಿತಿ ಆಕೆಯನ್ನು ಮತ್ತಷ್ಟು ಕುಗ್ಗಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net