

ನವದೆಹಲಿ: ರೈಲ್ವೆ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ 11,40,770 ರೈಲ್ವೆ ನೌಕರರಿಗೆ (Railway Employees) ಒಟ್ಟು 2,009.61 ಕೋಟಿ ರೂ. ವೆಚ್ಚದಲ್ಲಿ 78 ದಿನಗಳ ಉತ್ಪಾದನೆ ಆಧಾರಿತ ಬೋನಸ್ ಪಾವತಿಸಲು ಅನುಮೋದನೆ ನೀಡಿದೆ.
ಅರ್ಹ ರೈಲ್ವೆ ನೌಕರರಿಗೆ ಪ್ರತಿವರ್ಷ ದುರ್ಗಾ ಪೂಜೆ, ದಸರಾ ರಜಾದಿನಗಳಿಗೂ ಮುನ್ನ ಬೋನಸ್ ಪಾವತಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಸಹ ಸುಮಾರು 11.40 ಲಕ್ಷದಷ್ಟು ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಮೊತ್ತವನ್ನು ಪಾವತಿಸಲಾಗುತ್ತಿದೆ.
ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೆಲಸ ಮಾಡಲು ರೈಲ್ವೆ ನೌಕರರನ್ನು ಪ್ರೇರೇಪಿಸುವ ಸಲುವಾಗಿ ಬೋನಸ್ ನೀಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, 78 ದಿನಗಳಿಗೆ ಪ್ರತಿ ಅರ್ಹ ರೈಲ್ವೆ ನೌಕರನಿಗೆ ಸಿಗುವ ಗರಿಷ್ಠ ಮೊತ್ತ 17,951 ರೂ. ಆಗಿದೆ. ಈ ಮೊತ್ತವನ್ನು ಟ್ರ್ಯಾಕ್ ನಿರ್ವಹಣೆ ಮಾಡುವವರು (Track maintainers), ಲೋಕೋ ಪೈಲಟ್ಗಳು, ರೈಲು ವ್ಯವಸ್ಥಾಪಕರು (Guards), ಸ್ಟೇಷನ್ ಮಾಸ್ಟರ್ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞರ ಸಹಾಯಕರು, ಪಾಯಿಂಟ್ಸ್ಮನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ ಸಿ ಸಿಬ್ಬಂದಿಯಂತಹ ವಿವಿಧ ವರ್ಗಗಳ ರೈಲ್ವೆ ಸಿಬ್ಬಂದಿಗೆ ಪಾವತಿಸಲಾಗುತ್ತದೆ.
2025-26ನೇ ಸಾಲಿನಲ್ಲಿ ರೈಲ್ವೆಯ ಕಾರ್ಯಕ್ಷಮತೆಯು ಬಹಳ ಉತ್ತಮವಾಗಿತ್ತು ಎಂದು ಕೇಂದ್ರ ಸಂಪುಟ ತಿಳಿಸಿದ್ದು, ಈ ಅವಧಿಯಲ್ಲಿ ರೈಲ್ವೆಯು ದಾಖಲೆಯ 1670 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದೆ ಮತ್ತು ಸುಮಾರು 7.41 ಬಿಲಿಯನ್ ಪ್ರಯಾಣಿಕರನ್ನು ಕರೆದೊಯ್ದಿದೆ.
ಪ್ರಸ್ತುತ ರೈಲ್ವೆ ನೌಕರರ ಉತ್ಪಾದಕತೆ ಆಧಾರಿತ ಬೋನಸ್ (PLB) ಲೆಕ್ಕಾಚಾರಕ್ಕಾಗಿ 7,000 ರೂಪಾಯಿಗಳ ವೇತನ ಮಿತಿಯನ್ನು ಹಾಗೂ 78 ದಿನಗಳ ಅವಧಿಯನ್ನು ಬಳಸಲಾಗುತ್ತಿದೆ. ಇದರಿಂದ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ 17,951 ರೂಪಾಯಿಗಳ ಬೋನಸ್ ಸಿಗುತ್ತದೆ. ಆದರೆ, ಇಂಡಿಯನ್ ರೈಲ್ವೆ ಟೆಕ್ನಿಕಲ್ ಸೂಪರ್ವೈಸರ್ಸ್ ಅಸೋಸಿಯೇಷನ್ (IRTSA) ಸಂಸ್ಥೆಯು, ಲೆವೆಲ್-2 ಮತ್ತು ಅದಕ್ಕಿಂತ ಹೆಚ್ಚಿನ ನೌಕರರಿಗೆ ಅವರ ಉನ್ನತ ವೇತನ ಮಟ್ಟಕ್ಕೆ ತಕ್ಕಂತೆ ಈ ವೇತನ ಮಿತಿಯನ್ನು 18,000 ರೂಪಾಯಿಗಳಿಗೆ ಏರಿಸಬೇಕು ಹಾಗೂ ಅದರೊಂದಿಗೆ ತುಟ್ಟಿಭತ್ಯೆ (DA) ಕೂಡ ಸೇರಿಸಿ ಹೆಚ್ಚಿಸಬೇಕು ಎಂದು ಮನವಿ ಮಾಡಿದೆ.
ಇದರ ಜೊತೆಗೆ, ನುರಿತವಲ್ಲದ ಕಾರ್ಮಿಕರಿಗೆ ಕನಿಷ್ಠ ವೇತನವೇ 21,000 ರೂಪಾಯಿ ಇದೆ ಎಂಬುದನ್ನು ಸಂಘವು ಉಲ್ಲೇಖಿಸಿದ್ದು, ಆದ್ದರಿಂದ ಈಗಿರುವ ಬೋನಸ್ ಮಿತಿಯನ್ನು ಕೂಡಲೇ ಬದಲಾಯಿಸಬೇಕು ಎಂದು ಅದು ವಾದಿಸಿದೆ. ಒಂದು ವೇಳೆ 18,000 ರೂಪಾಯಿಗಳ ಮಿತಿಯನ್ನು ಆಧಾರವಾಗಿಟ್ಟುಕೊಂಡರೆ, ವಾರ್ಷಿಕ ಬೋನಸ್ ಮೊತ್ತವನ್ನು ಕನಿಷ್ಠ 46,184 ರೂಪಾಯಿಗಳಿಗೆ ಏರಿಸಬೇಕು ಎಂದು ಸಂಘವು ಶಿಫಾರಸು ಮಾಡಿದೆ.
2025-26ನೇ ಹಣಕಾಸು ವರ್ಷಕ್ಕೆ 78 ದಿನಗಳ ಪಿಎಲ್ಬಿ ಮಂಜೂರಾಗಿದೆ ಎಂದು ಹೇಳಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ನಕಲಿ ಪತ್ರದ ಬಗ್ಗೆ ರೈಲ್ವೆ ಮಂಡಳಿಯು ಎಚ್ಚರಿಕೆ ನೀಡಿದ ನಂತರ ಕೇಂದ್ರ ಸಂಪುಟದ ಈ ಇತ್ತೀಚಿನ ನಿರ್ಧಾರ ಹೊರಬಂದಿದೆ. ಅಕ್ಟೋಬರ್ 6 ರಂದು ಬಂದಿದ್ದ ಆ ನಕಲಿ ಪತ್ರದಲ್ಲಿ, ಕೇಂದ್ರ ಸರ್ಕಾರವು 41,149 ರೂ. ಪಾವತಿಸಲು ಅನುಮೋದನೆ ನೀಡಿದೆ ಎಂದು ಹೇಳಲಾಗಿತ್ತು. ಅಕ್ಟೋಬರ್ 7 ರಂದು ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ನೀಡಿದ ಸಂದೇಶದಲ್ಲಿ, ಅದು ನಕಲಿ ಸಹಿಯನ್ನು ಹೊಂದಿದ್ದು ಅದನ್ನು ಮಂಡಳಿಯು ಹೊರಡಿಸಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತು.
ಅಲ್ಲದೆ, ಆ ದಾಖಲೆಯ ಆಧಾರದ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಅಥವಾ ಪಾವತಿಗಳನ್ನು ಮಾಡಬೇಡಿ ಎಂದು ರೈಲ್ವೆ ಕಚೇರಿಗಳಿಗೆ ಮಂಡಳಿಯು ನಿರ್ದೇಶನ ನೀಡಿತು. ಜೊತೆಗೆ, ಅಧಿಕೃತ ರೈಲ್ವೆ ಮಂಡಳಿ ಅಥವಾ ರೈಲ್ವೆ ಸಚಿವಾಲಯದ ವೆಬ್ಸೈಟ್ಗಳ ಮೂಲಕ ಬೋನಸ್ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳು ಮತ್ತು ನೌಕರರಲ್ಲಿ ಮನವಿ ಮಾಡಿತು(ಏಜೆನ್ಸೀಸ್).