ನವದೆಹಲಿ: ಕೇಂದ್ರ ಸರ್ಕಾರ ಎರಡು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (Merchant Discount Rate) ನಿಗದಿ ಪಡಿಸಿರುವ ಹಿನ್ನಲೆ ಪೆಟ್ರೋಲ್ ಬಂಕ್‌ಗಳಲ್ಲಿ (UPI in Petrol Pump) ಮುಂದಿನ ದಿನಗಳಲ್ಲಿ ಯುಪಿಐ ಮೂಲಕ ಪಾವತಿ ಪಡೆಯುವುದನ್ನು ನಿಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಅಧ್ಯಕ್ಷರು ಹೇಳಿರುವಂತೆ, ಪೆಟ್ರೋಲ್ ಬಂಕ್‌ಗಳಲ್ಲಿ ಯುಪಿಐ ಮೂಲಕ ಒಮ್ಮೆಲೆ 2,000 ಕ್ಕಿಂತ ಅಧಿಕ ವಹಿವಾಟು ನಡೆಯುತ್ತದೆ. ಈಗ ಸರ್ಕಾರ ಇದರ ಮೇಲೆ ಎಂಡಿಆರ್ ವಿಧಿಸಿರುವ ಹಿನ್ನಲೆ, ಬಂಕ್ ಮಾಲೀಕರು ಗಳಿಸುವ ಲಾಭಾಂಶ ಕುಂಟಿತವಾಗುವ ಕಾರಣ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಯುಪಿಐ ಪೇಮೆಂಟ್ ಕಡಿಮೆ ಅಥವಾ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಾವು ಈಗಾಗಲೇ ಬಹಳ ನೊಂದಿದ್ದೇವೆ!
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಅಧ್ಯಕ್ಷ ಬ್ರಿಜೇಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ನಡೆಯುವ ವಹಿವಾಟುಗಳಿಗೆ ಬಂಕ್ ಸಿಬ್ಬಂದಿ, ಎಂಡಿಆರ್ ನೀಡುತ್ತಿದ್ದಾರೆ. ಇದರಿಂದಲೇ ಪೆಟ್ರೋಲ್ ಬಂಕ್ನವರು ಬಸವಳಿದಿದ್ದಾರೆ. ಈಗ ಯುಪಿಐ ಮೇಲೆ ಕೂಡ ಎಂಡಿಆರ್ ನಿಗಧಿಯಾದರೆ, ಖಂಡಿತವಾಗಿ ಪೆಟ್ರೋಲ್ ಬಂಕ್ ಅನ್ನು ನಡೆಸುವುದು ಕಷ್ಟವಾಗಲಿದೆ ಎಂದಿದ್ದಾರೆ.