ಇನ್ನು ಈ ಕಣ್ಣಿನಲ್ಲಿ ಏನೇನು ನೋಡಬೇಕೋ! ಪೆಟ್ರೋಲ್​ ಸಿಗಲ್ಲ ಅಂತ ಹೀಗೆಲ್ಲ ಮಾಡ್ತಾರಾ ಜನ?

ಪೆಟ್ರೋಲ್ ಬಂಕ್​
ಪೆಟ್ರೋಲ್ ಬಂಕ್​
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ
  • ಕೆಲವೆಡೆ ಪೆಟ್ರೋಲ್​ ಬಂಕ್​ಗಳಲ್ಲಿ ನೋ ಸ್ಟಾಕ್​ ಬೋರ್ಡ್​ ಹಾಕಲಾಗಿದೆ
  • ಇಂಧನ ಕೊರತೆ ಹಿನ್ನೆಲೆ ವಾಹನ ಸವಾರರು ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದಿದ್ದಾರೆ
Petrol: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದಲ್ಲಿ ಇಂಧನ ಹಾಗೂ ತೈಲ ಬಿಕ್ಕಟ್ಟು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಅತ್ತ ಗ್ಯಾಸ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಮತ್ತೊಂದೆಡೆ, ಶೀಘ್ರವೇ ಪೆಟ್ರೋಲ್​-ಡಿಸೇಲ್​ ಲಭ್ಯವಿರುವುದಿಲ್ಲ. ಇಂಧನವಿಲ್ಲದೆ, ಲಾಕ್​ಡೌನ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಊಹಾಪೋಹಗಳು ಹರಿದಾಡಿದ್ದೇ ತಡ, ದೇಶದ ಹಲವು ರಾಜ್ಯಗಳಲ್ಲಿ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್​ ತುಂಬಿಸಲು ಸಾಲುಗಟ್ಟಿ ನಿಂತಿದ್ದು ದುರಂತ.
ಶೀಘ್ರದಲ್ಲೇ ಪೆಟ್ರೋಲ್​-ಡೀಸೆಲ್​ ಕೊರತೆಯಾಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಅನೇಕ ವಾಹನ ಸವಾರರು ಪೆಟ್ರೋಲ್​ ಬಂಕ್​ಗಳಿಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ. ಈ ಪೈಕಿ ಕೆಲವರು ವಿಚಿತ್ರ ರೀತಿಯಲ್ಲಿ ಪೆಟ್ರೋಲ್​ ತುಂಬಿಸಿಕೊಂಡಿರುವುದು ನೆಟ್ಟಿಗರನ್ನು ಅಕ್ಷರಶಃ ಬೆರಗಾಗಿಸಿದೆ.
ಈ ಮೊದಲು ಕೆಲವರು ನೀರಿನ​ ಬಾಟಲಿ​ ಹಾಗೂ ಕ್ಯಾನ್​ಗಳಲ್ಲಿ ಪೆಟ್ರೋಲ್​ ಅಥವಾ ಡೀಸೆಲ್​ ಕೊಡುವುದನ್ನು ಅನೇಕ ಪೆಟ್ರೋಲ್​ ಬಂಕ್​ಗಳು ನಿಲ್ಲಿಸಿವೆ. ಇದಕ್ಕೆ ಸಂಬಂಧಿಸಿದಂತೆ, ಸೂಚನಾ ಫಲಕಗಳನ್ನೇ ಅಳವಡಿಸಿರುತ್ತಾರೆ. ಆದರೂ, ಕೆಲವು ಬಂಕ್​ಗಳಲ್ಲಿ ಬಾಟಲಿಗೆ ಪೆಟ್ರೋಲ್​ ಕೊಡುತ್ತಾರೆ. ಸದ್ಯ ಇಂಧನ ಕೊರತೆಯಾಗಲಿದೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಅನೇಕರು ಸಿಕ್ಕ ಸಿಕ್ಕ ವಸ್ತುಗಳಲ್ಲಿ ಪೆಟ್ರೋಲ್​-ಡೀಸೆಲ್​ ತುಂಬಿಸಿಕೊಂಡಿದ್ದಾರೆ.
ಮೊನ್ನೆಯಷ್ಟೇ ಒಬ್ಬ ಯುವಕ ತನ್ನ ಬೈಕ್​ನಿಂದ ತೆಗೆದ ಇಂಧನ ಟ್ಯಾಂಕ್​ನಿಂದ ಪೆಟ್ರೋಲ್ ತುಂಬಿಸಲು ಬಂಕ್​ಗೆ ಬಂದಾಗ ಅದನ್ನು ಗಮನಿಸಿದ ಪಂಪ್ ಅಟೆಂಡೆಂಟ್ ಒಂದು ಕ್ಷಣ ದಂಗಾದರು. ಏನು ಹೇಳಬೇಕೆಂದು ತೋಚದೆ ಯುವಕನ ಕೈಯಲ್ಲಿದ್ದ ಟ್ಯಾಂಕ್​ಗೆ ಪೆಟ್ರೋಲ್ ತುಂಬಿ ಕಳುಹಿಸಿದರು. ಇದರಿಂದ, ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇಲ್ಲೊಬ್ಬ ವ್ಯಕ್ತಿ ಕೂಡ ಅದೇ ರೀತಿ ಮಾಡಿದ್ದು, ಕೊಂಚ ಭಿನ್ನವಾಗಿದೆ.
ಬೈಕ್​ನ ಇಂಧನ ಟ್ಯಾಂಕ್​ ಅನ್ನು ತನ್ನ ಸೈಕಲ್​ಗೆ ಫಿಕ್ಸ್ ಮಾಡಿಕೊಂಡು ಬಂದ ವ್ಯಕ್ತಿ, ಎಲ್ಲರಂತೆ ಕ್ಯೂನಲ್ಲಿ ನಿಂತು, ಪೆಟ್ರೋಲ್​ ತುಂಬಿಸಿಕೊಂಡು ಹೋಗಿರುವ ದೃಶ್ಯಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಆತನನ್ನು ಬಂಕ್​ನಲ್ಲಿ ನೋಡಿದ ಜನರು, ಒಂದು ನಿಮಿಷ ನಾವ್ಯಾಕೆ ಗಾಡಿ ನಿಲ್ಲಿಸಿಕೊಂಡು ಇಷ್ಟೆಲ್ಲ ಕಷ್ಟಪಡಬೇಕು ಎಂದು ಯೋಚಿಸಿದ್ದರೂ ಆಶ್ಚರ್ಯವಿಲ್ಲ ಬಿಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net