ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಭರ್ಜರಿ ಬದಲಾವಣೆ: ಚಿಕನ್​ ಬಿರಿಯಾನಿ ನೀಡಲು ಮುಂದಾದ ತಮಿಳುನಾಡು ಸರ್ಕಾರ! Chicken Biryani in School

ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಬಿರಿಯಾನಿ ಬಡಿಸಲು ತಮಿಳುನಾಡು ಸರ್ಕಾರ ಯೋಜಿಸಿದೆ.
ಸರ್ಕಾರಿ ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಬಿರಿಯಾನಿ ಬಡಿಸಲು ತಮಿಳುನಾಡು ಸರ್ಕಾರ ಯೋಜಿಸಿದೆ.
Published on
ಚೆನ್ನೈ: ತಮಿಳುನಾಡಿನ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದ ಮೆನುವಿನಲ್ಲಿ ಭರ್ಜರಿ ಬದಲಾವಣೆಯನ್ನು ತರಲು ಸಿಎಂ ಜೋಸೆಫ್​ ವಿಜಯ್​ ನೇತೃತ್ವದ ಸರ್ಕಾರ ಮುಂದಾಗಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ಬಿರಿಯಾನಿ (Chicken Biryani in School) ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದ ತಮಿಳುನಾಡು ಸರ್ಕಾರ ಈ ಐತಿಹಾಸಿಕ ಪ್ರಸ್ತಾವನೆಗೆ ಉತ್ಸುಕವಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಸ್ಪಷ್ಟಪಡಿಸಿದ್ದಾರೆ. ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗುತ್ತಿದ್ದು, ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜೈಲಿನಲ್ಲಿರೋ ಕೈದಿಗಳಿಗೂ ಸಿಗುತ್ತೆ, ಮಕ್ಕಳಿಗೇಕೆ ಸಿಗಬಾರದು?

ಈ ಪ್ರಸ್ತಾವನೆ ಕುರಿತು ಮಾತನಾಡಿದ ಶಿಕ್ಷಣ ಸಚಿವ ರಾಜ್ ಮೋಹನ್, ಸರ್ಕಾರದ ಮಹತ್ವದ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗೂ ಚಿಕನ್ ಬಿರಿಯಾನಿ ಸಿಗುತ್ತದೆ. ಹಾಗಾದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುವ ಮುಗ್ಧ ವಿದ್ಯಾರ್ಥಿಗಳಿಗೆ ಆ ಭಾಗ್ಯ ಸಿಗಬಾರದೇ? ಎಂದು ಸಚಿವರು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ನಾವು ತರಲು ಮುಂದಾಗುತ್ತಿರುವ ಈ ಯೋಜನೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಬೆಳೆಯುವ ಮಕ್ಕಳಿಗೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಮತ್ತು ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ. ತಮಿಳುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯ ಜೊತೆಗೆ ಪೌಷ್ಟಿಕಾಂಶದ ಕ್ರಾಂತಿಯೂ ಕೈಜೋಡಿಸಿ ಸಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದಿದ್ದಾರೆ.

ಸಸ್ಯಾಹಾರಿ ವಿದ್ಯಾರ್ಥಿಗಳ ಗತಿ ಏನು?

ಮಾಂಸಾಹಾರಿ ಊಟವನ್ನು ಪರಿಚಯಿಸುವಾಗ ಸಸ್ಯಾಹಾರಿ ಮಕ್ಕಳ ಹಿತಾಸಕ್ತಿಗೂ ಸರ್ಕಾರ ಧಕ್ಕೆ ತಂದಿಲ್ಲ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೂ ಸಹ, ಸಸ್ಯಾಹಾರವನ್ನು ಇಷ್ಟಪಡುವ ಮಕ್ಕಳಿಗೆ ಎಂದಿನಂತೆ ಸಸ್ಯಾಹಾರಿ ಊಟವೇ ಸಿಗಲಿದೆ. ಮಾಂಸಾಹಾರ ಸೇವಿಸುವ ವಿದ್ಯಾರ್ಥಿಗಳು ಮಾತ್ರ ಚಿಕನ್ ಬಿರಿಯಾನಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಯಾಕೆ ತಕ್ಷಣವೇ ಜಾರಿಗೆ ಬರುತ್ತಿಲ್ಲ?

ಬಿರಿಯಾನಿ ಅಂದಾಕ್ಷಣ ಎಲ್ಲರಿಗೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಇದನ್ನು ತಯಾರಿಸಿ ಬಡಿಸುವುದು ಅಷ್ಟು ಸುಲಭವಲ್ಲ. ಆಹಾರದ ನೈರ್ಮಲ್ಯ, ಶುಚಿತ್ವ ಮತ್ತು ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವರು, ಇದನ್ನು ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ ಮಾಡಬೇಕಾಗಿರುವುದರಿಂದ ತಕ್ಷಣವೇ ಜಾರಿಗೆ ತರಲು ಸಾಧ್ಯವಿಲ್ಲ. ದೊಡ್ಡ ಮಟ್ಟದಲ್ಲಿ ಜಾರಿಗೆ ತರುವ ಮೊದಲು ಪ್ರಾಯೋಗಿಕ ಮತ್ತು ಪರೀಕ್ಷಾ ಹಂತದ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಎಲ್ಲವೂ ಸರಿಯಾದ ಬಳಿಕ ಶಾಲೆಗಳಲ್ಲಿ ಚಿಕನ್ ಬಿರಿಯಾನಿ ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಜುಲೈನಿಂದಲೂ ಚಾಲ್ತಿಯಲ್ಲಿದೆ!
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಈ ಐಡಿಯಾ ಮೊದಲ ಬಾರಿಗೆ ಕಳೆದ ಜುಲೈ ತಿಂಗಳಲ್ಲಿ ಮುನ್ನೆಲೆಗೆ ಬಂದಿತ್ತು. ಸಚಿವ ರಾಜ್ ಮೋಹನ್ ಅವರು ಈ ಕಲ್ಪನೆಯನ್ನು ನೇರವಾಗಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಮುಂದಿಟ್ಟಿದ್ದರು. ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳೇ ಹೊಂದಿದ್ದಾರೆ.
ಈಗಾಗಲೇ ತಮಿಳುನಾಡು ಸರ್ಕಾರವು ಶಾಲಾ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಅತ್ಯುತ್ತಮ ಉಪಹಾರ ಯೋಜನೆಯನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈಗ ಮೆನುಗೆ ಚಿಕನ್ ಬಿರಿಯಾನಿ ಕೂಡ ಸೇರ್ಪಡೆಯಾದರೆ, ಇದು ಖಂಡಿತವಾಗಿಯೂ ಸರ್ಕಾರಿ ಶಾಲೆಗಳತ್ತ ಮಕ್ಕಳ ಹಾಜರಾತಿಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಸಚಿವರ ಅಭಿಪ್ರಾಯವಾಗಿದೆ, (ಏಜೆನ್ಸೀಸ್​).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net