ನನ್ನ ವಜಾ ಮಾಡಲಿ, ಆದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ; ಮಮತಾ ಬ್ಯಾನರ್ಜಿ ಸವಾಲ್ | Mamata Banerjee

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲಿನ ಬಳಿಕ, ಇದು ನಮ್ಮ ಸೋಲ್ಲಲ್ಲ, ನಮ್ಮ ಸೀಟುಗಳನ್ನು ಕದಿಯಲಾಗಿದೆ ಎಂದು ಆರೋಪಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂಬ ನಿಲುವಿಗೆ ಬದ್ಧರಾಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee), ಇಂದು ಮತ್ತೆ ತಮ್ಮ ಮಾತನ್ನು ಪುನರುಚ್ಚರಿಸಿದ್ದು, ಬೇಕಾದ್ರೆ ನನ್ನನ್ನು ವಜಾ ಮಾಡಲಿ, ನಾನು ಮಾತ್ರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಸವಾಲು ಹಾಕಿದ್ದಾರೆ.
ಕೋಲ್ಕತ್ತಾದ ಕಾಲಿಘಾಟ್‌ನಲ್ಲಿ ಅಭಿಷೇಕ್ ಬ್ಯಾನರ್ಜಿಯೊಂದಿಗೆ ಹೊಸದಾಗಿ ಆಯ್ಕೆಯಾದ ಪಕ್ಷದ ಶಾಸಕರು ಮತ್ತು ಹಿರಿಯ ನಾಯಕರ ಸಭೆ ನಡೆಸಿ ಮಾತನಾಡಿರುವ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಬದಲಾಗಿ ರಾಜ್ಯಪಾಲರ ವಜಾಗೊಳಿಸುವವರೆಗೆ ಕಾಯುತ್ತೇನೆ ಎಂದಿದ್ದಾರೆ.
ಇನ್ನೂ ಚುನಾವಣೆಯಲ್ಲಿ ನಡೆದ ಅಕ್ರಮಗಳು ಮತ್ತು ನಂತರದ ಹಿಂಸಾಚಾರದ ಬಗ್ಗೆ ಪಕ್ಷದ ಸತ್ಯಶೋಧನಾ ತಂಡ ಶೀಘ್ರದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕಾನೂನು ಹೋರಾಟಕ್ಕೆ ಮುಂದಾಗಲಿದೆ. ಸುಪ್ರೀಂಕೋರ್ಟ್​ಗೆ ಮೆಟ್ಟಿಲೇರುತ್ತೇವೆ. ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವ ಯಾವುದೇ ನಾಯಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಸಿಎಂ ಪ್ರಮಾಣವಚನ ಸ್ವೀಕರಿಸುವ ದಿನವೇ ಕರಾಳ ದಿನ ಆಚರಣೆ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವ ಮಮತಾ ಬ್ಯಾನರ್ಜಿ, ಅಂದು ಎಲ್ಲಾ ಪಕ್ಷದ ಕಚೇರಿಗಳ ಬಳಿಕ ಪ್ರತಿಭಟನೆ ನಡೆಯಲಿ. ಕಪ್ಪು ಬಟ್ಟೆ ಪ್ರದರ್ಶನಕ್ಕೆ ಕರೆ ನೀಡಿದ್ದಾರೆ.

ಟಿಎಂಸಿ ಮೇಲೆ ಹಿಂಸಚಾರದ ಆರೋಪ

ಇನ್ನೂ ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಬಂಗಾಳದಲ್ಲಿ ಯಾವುದೇ ಚುನಾವಣೋತ್ತರ ಹಿಂಸಾಚಾರ ನಡೆಯುತ್ತಿಲ್ಲ. ಅಲ್ಲಲ್ಲಿ ಸಣ್ಣ ಗಲಾಟೆ ನಡೆದಿವೆ. 2021ರಲ್ಲಿ ನಡೆದ ಚುನಾವಣೆಯ ನಂತರದ ಹಿಂಸಾಚಾರಕ್ಕಿಂತ ಬಹಳ ಕಡಿಮೆಯಾಗಿದೆ. ಟಿಎಂಸಿ ಕಾರ್ಯಕರ್ತರೇ ಬಿಜೆಪಿ ಬಾವುಟ ಹಿಡಿದು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net