ಲ್ಯಾಂಡ್ ಫಾರ್ ಜಾಬ್ ಹಗರಣ: ಲಾಲು ಯಾದವ್ ಕುಟುಂಬಕ್ಕೆ ಬಿಗ್ ಶಾಕ್; ಕೋರ್ಟ್‌ನಿಂದ ಆರೋಪ ಪಟ್ಟಿ ನಿಗದಿ! Lalu Prasad Yadav

ಲಾಲು ಪ್ರಸಾದ್‌ ಯಾದವ್‌, ರಾಬ್ರಿ ದೇವಿ, ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಮಿಸಾ ಭಾರತಿ
ಲಾಲು ಪ್ರಸಾದ್‌ ಯಾದವ್‌, ರಾಬ್ರಿ ದೇವಿ, ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಮಿಸಾ ಭಾರತಿ
Published on

ಪ್ರಮುಖ ಮುಖ್ಯಾಂಶಗಳು

  • ಲಾಲು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ನಡೆದಿದ್ದ ಹಗರಣ
  • ಸುಮಾರು 600 ಕೋಟಿ ರೂಪಾಯಿ ಹಗರಣ
  • ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸಲು ಅಭ್ಯರ್ಥಿಗಳ ಜಮೀನನ್ನು ಪಡೆದಿದ್ದ ಆರೋಪ
ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡುವುದಕ್ಕಾಗಿ ಅಭ್ಯರ್ಥಿಗಳ ಜಮೀನನ್ನು ಲಂಚವಾಗಿ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ (Lalu Prasad Yadav), ಪತ್ನಿ ರಾಬ್ರಿ ದೇವಿ ಮಕ್ಕಳಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಮಿಸಾ ಭಾರತಿ ಸೇರಿ ಹಲವರ ವಿರುದ್ಧ ದೆಹಲಿ ನ್ಯಾಯಾಲಯ ಭ್ರಷ್ಟಾಚಾರ ಮತ್ತು ಕ್ರಿಮಿನಲ್‌ ಪಿತೂರಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ನಿಗದಿ ಪಡಿಸಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಆದೇಶ ಹೊರಡಿಸಿದ್ದಾರೆ.
ಲಾಲು ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಆರೋಪ ನಿಗದಿಪಡಿಸಲಾಗಿದ್ದರೆ ಅವರ ಕುಟುಂಬ ಸದಸ್ಯರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪ ನಿಗದಿಯಾಗಿದೆ.
ಇದನ್ನೂ ಓದಿ:
ಲಾಲುಪ್ರಸಾದ್ ಅವರು 2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ಡಿ ಗ್ರೂಪ್‌ ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗಿನ ರೈಲ್ವೆ ನೇಮಕಾತಿ ಭಾರತೀಯ ರೈಲ್ವೆಯ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಸಿಬಿಐ ದೂರಿತ್ತು. ಆದರೆ, ಯಾದವ್‌ ಕುಟುಂಬ ಈ ಆರೋಪ ನಿರಾಕರಿಸಿತ್ತು ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.
ಈ ಮಧ್ಯೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ನೆಲೆಯಿಂದ ತನಿಖೆ ನಡೆಸುತ್ತಿದ್ದು ಅಪರಾಧದ ಗಳಿಕೆಯಾಗಿದ್ದ 600 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ಇಂದು ಪ್ರಕಟಿಸಿದ ಆದೇಶದಲ್ಲಿ ನ್ಯಾಯಾಧೀಶ ಗೋಗ್ನೆ, ಲಾಲು ಪ್ರಸಾದ್ ಯಾದವ್ ಹಾಗೂ ಅವರ ಕುಟುಂಬ ಸದಸ್ಯರು ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದು, ಜಮೀನು ಪಡೆಯುವುದಕ್ಕಾಗಿ ಸರ್ಕಾರಿ ಉದ್ಯೋಗಗಳನ್ನು ದಾಳವಾಗಿ ಬಳಸಿದ್ದರು ಎಂದು ನ್ಯಾಯಾಲಯ ಹೇಳಿದೆ.
ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಲಾಲು ಅವರ ಆಪ್ತರು ನೇಮಕಾತಿಗಾಗಿ ಜಮೀನು ಪಡೆಯುವ ಪ್ರಕ್ರಿಯೆ ಸುಗಮಗೊಳಿಸಿದ್ದರು. ಲಾಲು ಮತ್ತು ಅವರ ಕುಟುಂಬ ಸದಸ್ಯರು ತಮ್ಮನ್ನು ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿರುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬದುಕುಳಿದಿರುವ 98 ಆರೋಪಿಗಳಲ್ಲಿ, ಲಾಲು ಯಾದವ್ ಮತ್ತು ಅವರ ಕುಟುಂಬ ಸೇರಿದಂತೆ 46 ಜನರ ವಿರುದ್ಧ ಆರೋಪ ನಿಗದಿಪಡಿಸಲಾಗಿದೆ. ಸಿಬಿಐ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಡಿ.ಪಿ. ಸಿಂಗ್ ಹಾಗೂ ಲಾಲು ಯಾದವ್ ಪರವಾಗಿ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ಹಾಗೂ ವಾದ ಮಂಡಿಸಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net