ಕಾರ್ತಿಕ ದೀಪಂ ವಿವಾದ; ರಾಜಕೀಯ ಲಾಭಕ್ಕಾಗಿ ಧಾರ್ಮಿಕ ವಿಭಜನೆ ಸೃಷ್ಟಿ; ಬಿಜೆಪಿ ವಿರುದ್ಧ ಸಿಎಂ ಎಂ ಕೆ ಸ್ಟಾಲಿನ್ ಕಿಡಿ | CM M K Stalin

ಸಿಎಂ ಎಂ.ಕೆ.ಸ್ಟಾಲಿನ್
ಸಿಎಂ ಎಂ.ಕೆ.ಸ್ಟಾಲಿನ್
Published on
ಮಧುರೈ: ಇತ್ತೀಚೆಗೆ ತಮಿಳುನಾಡಿನ ಮಧುರೈ ಪಕ್ಕದ ತಿರುಪನಕುಂದ್ರಂನಲ್ಲಿ ಮುರುಗನ್ ದೇವಸ್ಥಾನದಲ್ಲಿ ನಡೆದ ಕಾರ್ತಿಕ ದೀಪಂ ಹಬ್ಬದಲ್ಲಿ ಬೆಟ್ಟದ ಮೇಲೆ ದೀಪ ಹಚ್ಚುವ ವಿವಾದ ಕುರಿತಂತೆ ಸಿಎಂ ಎಂ.ಕೆ.ಸ್ಟಾಲಿನ್(CM M K Stalin) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಧಾರ್ಮಿಕ ವಿಭಜನೆ ಸೃಷ್ಟಿಸಲಾಗ್ತಿದೆ ಎಂದು ಕಿಡಿಕಾರಿದ್ದಾರೆ.
ಭಾನುವಾರ(ಡಿ. 07) ಮಧುರೈನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ವಿರೋಧ ಪಕ್ಷಗಳು ದುರುದ್ದೇಶಪೂರಿತ ಪಿತೂರಿಗಳೊಂದಿಗೆ ರಾಜಕೀಯ ಮಾಡಲು ಪ್ರಯತ್ನಿಸುತ್ತಿವೆ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಅವರು ಬೇರೇನೋ ಮಾತನಾಡುತ್ತಾರೆ. ಎಷ್ಟೇ ಪಿತೂರಿಗಳನ್ನು ಮಾಡಿದರೂ ನಾವು ಅವರನ್ನು ಸೋಲಿಸುತ್ತೇವೆ ಎಂದು ನಾನು ದೃಢವಾಗಿ ಹೇಳುತ್ತಿದ್ದೇನೆ. ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಮುಂದೆ ಇಂತಹ ತಂತ್ರಗಳು ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮುರುಗರ್ ದೇವಸ್ಥಾನದಲ್ಲಿ ಕಾರ್ತಿಗೈ ದೀಪಂ ಆಚರಣೆಯನ್ನು ದೀರ್ಘಕಾಲದ ಸಂಪ್ರದಾಯದ ಪ್ರಕಾರ ನಡೆಸಲಾಗಿದೆ. ರಾಜ್ಯ ಸರ್ಕಾರವು ಎಂದಿಗೂ ಆಧ್ಯಾತ್ಮಿಕ ಆಚರಣೆಗಳ ವಿರುದ್ಧವಾಗಿಲ್ಲ. ತನ್ನ ಪತಿ ಕೋವಲನ್‌ನ ಅನ್ಯಾಯದ ಮರಣದಂಡನೆಯ ವಿರುದ್ಧ ಹೋರಾಡಿದ ಸಿಲಪತಿಗರಂನ ದಂತಕಥೆಯ ನಾಯಕಿ ಕಣ್ಣಗಿಯ ಪರಂಪರೆಯನ್ನು ಸ್ಮರಿಸಿದ ಸ್ಟಾಲಿನ್​, ಸರಿಯಾದ ತನಿಖೆಯಿಲ್ಲದೆ ಆತುರದ ತೀರ್ಪಿನ ವಿರುದ್ಧ ಕಣ್ಣಗಿ ಒಮ್ಮೆ ನ್ಯಾಯಕ್ಕಾಗಿ ಘರ್ಜಿಸಿದ ಮಣ್ಣು ಮಧುರೈ ಎಂದು ದೀಪಂ ಹಚ್ಚಿದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಗುರಿ ತಮಿಳುನಾಡನ್ನು ಅಭಿವೃದ್ಧಿಪಡಿಸುವುದು. ಆದರೆ ಕೆಲವು ಪಕ್ಷಗಳು ದಂಗೆಯ ಮನಸ್ಥಿತಿಯನ್ನು ಹೊಂದಿವೆ. ಅವರು ಅನಗತ್ಯ ವಿಷಯಗಳನ್ನು ಎತ್ತುವ ಮೂಲಕ ನಮ್ಮ ಬೆಳವಣಿಗೆಯನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಾಂಪ್ರದಾಯಿಕ ಸ್ಥಳದಲ್ಲಿ ಕಾರ್ತಿಕ ದೀಪವನ್ನು ಎಲ್ಲಾ ನಿಯಮಗಳನ್ನು ಅನುಸರಿಸಿ ಬೆಳಗಿಸಲಾಯಿತು. ಅವರು ಎಲ್ಲವನ್ನೂ ಸರಿಯಾಗಿ ನಿರ್ವಹಿಸಿದರು. ಸ್ಥಳೀಯ ನಿವಾಸಿಗಳಿಗೆ ಇದು ಚೆನ್ನಾಗಿ ತಿಳಿದಿದೆ. ಅವರೆಲ್ಲರೂ ಪೂಜೆ ಸಲ್ಲಿಸಿ ಮನೆಗೆ ಹೋದರು. ಆದರೆ ಹಠಾತ್ ಇದನ್ನು ರಾಜಕೀಯ ಸಮಸ್ಯೆಯಾಗಿ ಯಾಕೆ ಮಾರ್ಪಟ್ಟಿತು. ಯಾರು ಇದನ್ನು ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿ ಮತ್ತು ಏಕತೆ ಬಗ್ಗೆ ಆಧ್ಯಾತ್ಮಿಕತೆ ಇರಬೇಕು. ರಾಜಕೀಯ ಲಾಭಕ್ಕಾಗಿ ವಿಭಜನೆ ಸೃಷ್ಟಿಸುವುದು ಆಧ್ಯಾತ್ಮಿಕವಲ್ಲ. ಅದು ಅಗ್ಗದ ರಾಜಕೀಯ. ಲಾಭಕ್ಕಾಗಿ ವಿಭಜನೆಗಳನ್ನು ಸೃಷ್ಟಿಸುವುದು ಆಧ್ಯಾತ್ಮವಲ್ಲ. ಅದು ಅಗ್ಗದ ರಾಜಕೀಯ. ನಾವು ಸರ್ಕಾರ ರಚಿಸಿದಾಗಿನಿಂದ, 3,000 ಕ್ಕೂ ಹೆಚ್ಚು ದೇವಾಲಯಗಳಿಗೆ ಕುಂಭಾಭಿಷೇಕ ನಡೆಸಿದ್ದೇವೆ. ಅಂತಹ ಸರ್ಕಾರವನ್ನು ಆಧ್ಯಾತ್ಮ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದರೆ, ಅದರ ಹಿಂದಿನ ಉದ್ದೇಶ ಜನರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏನಿದು ತಿರುಪನಕುಂದ್ರ ಕಾರ್ತಿಕ ದೀಪಂ ವಿವಾದ

ತಿರುಪನಕುಂದ್ರಂನಲ್ಲಿರುವ ಪ್ರಸಿದ್ದ ಗುಹಾಂತರ ಮುರುಗನ್ ದೇವಾಲಯದಲ್ಲಿ ಪ್ರತಿವರ್ಷದಂತೆ ಕಾರ್ತಿಕ ದೀಪಂ ಹಬ್ಬವನ್ನು ಆಚರಿಸಲಾಗ್ತಿದೆ. ಬೆಟ್ಟದ ಮೇಲೆ ಒಂದು ದೀಪಥೂನ್ ಇದೆ. ಅಲ್ಲಿಂದ 50 ಮೀಟರ್ ದೂರದಲ್ಲಿ ಮತ್ತೊಂದು ಇಸ್ಲಾಂ ದರ್ಗಾವಿದೆ. ಬೆಟ್ಟದ ಮೇಲಿನ ಮಾಲಿಕತ್ವದ ಬಗ್ಗೆ ಹಿಂದೂ-ಮುಸ್ಲಿಮರ ನಡುವೆ 1920ರಿಂದಲೂ ವಿವಾದವಿದೆ ಎನ್ನಲಾಗಿದೆ.
ಇತ್ತೀಚೆಗೆ ಕಾರ್ತಿಕ ದೀಪಂ ಹಬ್ಬದಲ್ಲಿ ಬೆಟ್ಟದ 'ದೀಪಥೂನ್' ಸ್ತಂಭದಲ್ಲಿ ಭಕ್ತರಿಗೆ 'ದೀಪ' ಬೆಳಗಲು ಅವಕಾಶ ನೀಡುವಂತೆ ಕೋರಿ ಹಿಂದೂ ತಮಿಳರ್ ಕಚ್ಚಿ ಸಂಸ್ಥಾಪಕ ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಡಿ. 01ರಂದು ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ ಸ್ವಾಮಿನಾಥನ್ ಬೆಟ್ಟದ ಮೇಲೆ ದೀಪ ಬೆಳಗಲು ಅವಕಾಶ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಡಿ. 03ರಂದು ನಡೆದ ಕಾರ್ತಿಕ ದೀಪಂ ಹಬ್ಬದ ವೇಳೆ ಬೆಟ್ಟದ ಮೇಲೆ ದೀಪ ಹಚ್ಚದೇ ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ವಿರುದ್ಧ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಬೆಟ್ಟದ ಸುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಇನ್ನೂ ಹೈಕೋರ್ಟ್​ ಏಕಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಜೊತೆಗೆ ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ರವಿಕುಮಾರ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ವಿಚಾರಣೆಯಲ್ಲಿದೆ.​ ಇನ್ನು ತನ್ನ ಅಧಿಕಾರಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ರದ್ದುಗೊಳಿಸಲು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ವಾರ ಎಲ್ಲಾ ಅರ್ಜಿಗಳ ವಿಚಾರಣೆ ನಡೆಯುವ ಸಾಧ್ಯತೆ ಇದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net