ಕಾವೇರಿದ ಕಾರ್ತಿಕ ದೀಪಂ ಕಿಚ್ಚು: 750 BJP ನಾಯಕರನ್ನು ಗೃಹಬಂಧನದಲ್ಲಿರಿಸಿದ ವಿಜಯ್​ ಸರ್ಕಾರ, 5,600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ! Karthigai Deepam Row

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಜಯ್ ಸರ್ಕಾರ ಬರೋಬ್ಬರಿ 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ 750ಕ್ಕೂ ಹೆಚ್ಚು ಬಿಜೆಪಿ ಮತ್ತು ಹಿಂದೂ ಮುನ್ನಣಿ ಸಂಘಟನೆಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Karthigai Deepam Row
ಕಾವೇರಿದ ಕಾರ್ತಿಕ ದೀಪಂ ಕಿಚ್ಚು: 750 BJP ನಾಯಕರನ್ನು ಗೃಹಬಂಧನದಲ್ಲಿರಿಸಿದ ವಿಜಯ್​ ಸರ್ಕಾರ, 5,600ಕ್ಕೂ ಹೆಚ್ಚು ಪೊಲೀಸರ ಭದ್ರತೆ!
Published on: 

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಹಬ್ಬ 'ಕಾರ್ತಿಕ ದೀಪಂ' ( Karthigai Deepam Row ) ಈ ಬಾರಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಮಟ್ಟದ ರಾಜಕೀಯ ಹಾಗೂ ಕಾನೂನು ಸುವ್ಯವಸ್ಥೆಯ ಅಗ್ನಿಪರೀಕ್ಷೆಯಾಗಿ ಮಾರ್ಪಟ್ಟಿದೆ. ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ 'ದೀಪತೂಣ್' ಕಂಬದ ಬಳಿ ನವೆಂಬರ್ 24ರಂದು ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಜಯ್ ಸರ್ಕಾರ ಬರೋಬ್ಬರಿ 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ 750ಕ್ಕೂ ಹೆಚ್ಚು ಬಿಜೆಪಿ ಮತ್ತು ಹಿಂದೂ ಮುನ್ನಣಿ ಸಂಘಟನೆಯ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಬಳಿ ಕಾರ್ತಿಕ ದೀಪಂ ಹಚ್ಚಲು ಸುಪ್ರೀಂ ಕೋರ್ಟ್ ನವೆಂಬರ್ 24ರಂದು ಒಂದು ದಿನದ ಮಟ್ಟಿಗೆ ಅವಕಾಶ ನೀಡಿದೆ. ಇದರಿಂದ ಮಧುರೈನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಟಿವಿಕೆ (TVK) ನೇತೃತ್ವದ ತಮಿಳುನಾಡು ಸರ್ಕಾರವು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ. ದಕ್ಷಿಣ ಜಿಲ್ಲೆಗಳ 12 ಪೊಲೀಸ್ ವರಿಷ್ಠಾಧಿಕಾರಿಗಳ (SP) ನೇತೃತ್ವದಲ್ಲಿ 5,618 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿದೆ. ಅಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳಗಳು ನಿರಂತರ ತಪಾಸಣೆ ನಡೆಸುತ್ತಿವೆ. ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಮುಖ್ಯಮಂತ್ರಿ ವಿಜಯ್ ಅವರು ಸೋಮವಾರ ಚೆನ್ನೈನ ಸಚಿವಾಲಯದಲ್ಲಿ ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್, ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಮತ್ತು ಡಿಜಿಪಿ ಮಹೇಶ್ ಕುಮಾರ್ ಅಗರ್ವಾಲ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದ್ದಾರೆ.

Also Read
ಹಿಂದೂ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ 6 ಮದ್ವೆ: ಈತನ ಬಗ್ಗೆ ಮೊದಲ ಪತ್ನಿ ಹೇಳಿದ ಮಾತು ಕೇಳಿದ್ರೆ ಕೋಪ ಬರದೇ ಇರದು! Fake Hindu Identity
Karthigai Deepam Row

ಬೆಟ್ಟದ ಸುತ್ತಮುತ್ತ ಮಾತ್ರವಲ್ಲದೆ ಇಡೀ ಮಧುರೈ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಆದೇಶದ ಪ್ರಕಾರ, ಸೋಮವಾರ ರಾತ್ರಿ 9 ಗಂಟೆಯಿಂದ ನವೆಂಬರ್ 25ರ ಬೆಳಗ್ಗೆ 10 ಗಂಟೆಯವರೆಗೆ ಯಾವುದೇ ರೀತಿಯ ಸಭೆ, ಪ್ರತಿಭಟನೆ, ಮೆರವಣಿಗೆ ನಡೆಸುವುದನ್ನು ಹಾಗೂ ಸಾರ್ವಜನಿಕರು ತಿರುಪ್ಪರಂಕುಂಡ್ರಂ ಬೆಟ್ಟ ಹತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಧುರೈ ಮತ್ತು ನೆರೆಯ ಜಿಲ್ಲೆಗಳಿಂದ ಎರಡು ಸಮುದಾಯಗಳ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಸಂಘರ್ಷಕ್ಕೆ ಇಳಿಯಬಹುದು ಎಂಬ ಪೊಲೀಸ್ ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಆದಾಗ್ಯೂ, ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯಿಂದ ತಿರುಪ್ಪರಂಕುಂಡ್ರಂ ದೇವಸ್ಥಾನದ ಆಡಳಿತ ಮಂಡಳಿಯು ನಡೆಸುವ ಅಧಿಕೃತ ಧಾರ್ಮಿಕ ವಿಧಿವಿಧಾನಗಳಿಗೆ ವಿನಾಯಿತಿ ನೀಡಲಾಗಿದೆ. ವಿಶೇಷವಾಗಿ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ನಡೆಯುವ ದೀಪ ಹಚ್ಚುವ ಪ್ರಕ್ರಿಯೆಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದರ ಜತೆಗೆ, ಪೊಲೀಸರ ನಿಯಂತ್ರಣಕ್ಕೆ ಒಳಪಟ್ಟು ಬೆಟ್ಟದ ಮೇಲಿರುವ ದರ್ಗಾ ಮತ್ತು ಇತರ ಧಾರ್ಮಿಕ ಕೇಂದ್ರಗಳಿಗೆ ಕಾನೂನುಬದ್ಧವಾಗಿ ಭೇಟಿ ನೀಡಲು ಹಾಗೂ ದೈನಂದಿನ ಪೂಜಾ ಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಮಧುರೈ ನಗರ ಪೊಲೀಸ್ ಆಯುಕ್ತರು ನವೆಂಬರ್ 23 ಮತ್ತು 24ರಂದು ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಡ್ರೋನ್ ಹಾರಾಟ ನಿಷೇಧಿತ 'ರೆಡ್ ಝೋನ್' ಎಂದು ಘೋಷಿಸಿದ್ದಾರೆ.

ಮತ್ತೊಂದೆಡೆ, ವಿಜಯ್ ಸರ್ಕಾರವು ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ತಮಿಳುನಾಡು ಬಿಜೆಪಿ ಐಟಿ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಕಾರ್ಯದರ್ಶಿ ಶಕ್ತಿಕೃಷ್ಣನ್ ಅವರು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದ್ದು, ಅವರ ನಿವಾಸದ ಹೊರಗೆ 40ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣದ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 750 ಬಿಜೆಪಿ ಮತ್ತು ಹಿಂದೂ ಮುನ್ನಣಿ ಪದಾಧಿಕಾರಿಗಳನ್ನು ಅವರ ಮನೆಗಳಲ್ಲೇ ಗೃಹಬಂಧನದಲ್ಲಿರಿಸಲಾಗಿದ್ದು, ರಾಜಸಿಂಹ ಮತ್ತು ವಿನೋಜ್ ಸೇರಿದಂತೆ ಹಲವು ನಾಯಕರು ಬೆಟ್ಟಕ್ಕೆ ತೆರಳದಂತೆ ತಡೆಯಲಾಗಿದೆ ಎಂದು ಅವರು ದೂರಿದ್ದಾರೆ.

Also Read
ವಿಷವೂ ಬೇಡ, ಬೋನೂ ಬೇಡ... ಹಳೆಯ ಸ್ಟೀಲ್ ಸ್ಕ್ರಬ್ಬರ್ ಇದ್ರೆ ಸಾಕು! ಇಲ್ಲಿದೆ ಇಲಿ ಓಡಿಸುವ ಸಿಂಪಲ್​ ಟಿಪ್ಸ್​... Rats
Karthigai Deepam Row

ಈ ವಿವಾದದ ಮೂಲವನ್ನು ಗಮನಿಸುವುದಾದರೆ, ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ಸಿಕಂದರ್ ಬಾದುಷಾ ದರ್ಗಾದ ಸಮೀಪವಿರುವ ಪುರಾತನ ಕಲ್ಲಿನ ಕಂಬವಾದ 'ದೀಪತೂಣ್' ಬಳಿ ದೀಪ ಹಚ್ಚುವ ವಿಚಾರವಾಗಿ ಈ ಸಂಘರ್ಷ ಹುಟ್ಟಿಕೊಂಡಿದೆ. ಕಳೆದ ನವೆಂಬರ್ 2025ರಲ್ಲಿ ಅಂದಿನ ಡಿಎಂಕೆ ಸರ್ಕಾರವು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಬೆಟ್ಟದ ತುದಿಯಲ್ಲಿ ದೀಪ ಹಚ್ಚಲು ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಭಕ್ತ ರಾಮ ರವಿಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ದೀಪ ಹಚ್ಚಲು ಅನುಮತಿ ನೀಡುವಂತೆ ನಿರ್ದೇಶನ ನೀಡಿತ್ತು.

ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟಿವಿಕೆ ನೇತೃತ್ವದ ವಿಜಯ್ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಮಧ್ಯಂತರ ಆದೇಶ ನೀಡಿ, ಮಾಲೀಕತ್ವ ಮತ್ತು ಸಂಪ್ರದಾಯದ ಹಕ್ಕುಗಳ ಕುರಿತಾದ ಮುಖ್ಯ ಪ್ರಶ್ನೆಗಳನ್ನು ಬಾಕಿ ಉಳಿಸಿಕೊಂಡು, ಕೇವಲ ಒಂದು ದಿನ ಅಂದರೆ ನವೆಂಬರ್ 24ರಂದು ದೀಪತೂಣ್ ಬಳಿ ದೀಪ ಹಚ್ಚಲು ಅನುಮತಿ ನೀಡಿತ್ತು. ಆದರೆ, ಈ ಮಧ್ಯಂತರ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತಾದರೂ, ಸೋಮವಾರ ಆ ಅರ್ಜಿ ವಿಚಾರಣೆಗೆ ಬರಲಿಲ್ಲ.

ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ವಿಜಯ್ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕ ಮಾಣಿಕ್ಕಂ ಠಾಗೋರ್, ಆರ್‌ಎಸ್‌ಎಸ್, ಹಿಂದೂ ಮುನ್ನಣಿ ಮತ್ತು ಬಿಜೆಪಿ ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸರ್ಕಾರದ ಮರುಪರಿಶೀಲನಾ ಅರ್ಜಿಯು ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿ ಎಂದು ಕಿಡಿಕಾರಿದೆ. ಇನ್ನು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಮತ್ತು ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ವಿಜಯ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಟಿವಿಕೆ ಸರ್ಕಾರವೂ ಹಿಂದಿನ ಡಿಎಂಕೆ ಸರ್ಕಾರದ ಹಾದಿಯಲ್ಲೇ ಸಾಗುತ್ತಿದೆ ಮತ್ತು ನಾಯಕರನ್ನು ಗೃಹಬಂಧನದಲ್ಲಿಡುವ ಮೂಲಕ ಫ್ಯಾಸಿಸ್ಟ್ ಧೋರಣೆ ತೋರುತ್ತಿದೆ ಎಂದು ಟೀಕಿಸಿದ್ದಾರೆ.

Also Read
ಪಾಕಿಸ್ತಾನದಲ್ಲಿ ಪ್ರತ್ಯೇಕ 'ಸಿಂಧುದೇಶ'ದ ಕೂಗು: ಕರಾಚಿಯಲ್ಲಿ ಲಕ್ಷಾಂತರ ಜನರಿಂದ ಬೃಹತ್ ಪ್ರತಿಭಟನೆ! Sindhudesh
Karthigai Deepam Row

ಒಂದೆಡೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವ ಅನಿವಾರ್ಯತೆ, ಮತ್ತೊಂದೆಡೆ ಬಿಜೆಪಿಯ ಪ್ರತಿಭಟನೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವ ಮುಸ್ಲಿಂ ಸಮುದಾಯದ ಮನವಿಗಳ ನಡುವೆ ಮುಖ್ಯಮಂತ್ರಿ ವಿಜಯ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಭಾರೀ ಪೊಲೀಸ್ ಬಂದೋಬಸ್ತ್ ನಡುವೆಯೇ ದೇವಸ್ಥಾನದ ಆಡಳಿತ ಮಂಡಳಿಯು ದೀಪ ಹಚ್ಚಲು ಬೇಕಾದ ತಾಮ್ರದ ಕೊಪ್ಪರಿಗೆ, ಬತ್ತಿ ಮತ್ತು ತುಪ್ಪವನ್ನು ಬೆಟ್ಟದ ಮೇಲಕ್ಕೆ ಕೊಂಡೊಯ್ದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಕಾರ್ತಿಕ ದೀಪಂ ಆಚರಿಸುವುದು ಟಿವಿಕೆ ಆಡಳಿತಕ್ಕೆ ದೊಡ್ಡ ಸವಾಲಾಗಿದೆ, (ಏಜೆನ್ಸೀಸ್​).