ಜಾರ್ಖಂಡ್​ನಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಆಕ್ರೋಶ: 9 ದಿನಗಳ ಉಪವಾಸ ಸತ್ಯಾಗ್ರಹ, ಮಹತೋ ಸ್ಥಿತಿ ಚಿಂತಾಜನಕ! | Devendra Nath Mahto

Devendra Nath Mahto | ಮಹತೋ ಸ್ಥಿತಿ ಚಿಂತಾಜನಕ!
Devendra Nath Mahto | ಮಹತೋ ಸ್ಥಿತಿ ಚಿಂತಾಜನಕ!
Published on

Devendra Nath Mahto: ಜಾರ್ಖಂಡ್‌ನಲ್ಲಿ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಸುದೀರ್ಘ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಕಳೆದ ಒಂಬತ್ತು ದಿನಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾದ ಪ್ರಮುಖ ನಾಯಕ ದೇವೇಂದ್ರ ನಾಥ್ ಮಹತೋ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದು, ಅವರನ್ನು ತಕ್ಷಣವೇ ರಾಂಚಿ ಸಾದರ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಮಹತೋ ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರನೆ ಕುಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಅಧಿಕಾರಿ ನ್ಯಾನ್ಸಿ ಪ್ರಿಯಾ ಮಾಹಿತಿ ನೀಡಿದ್ದಾರೆ.
ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದಾಗ್ಯೂ, ಮಹತೋ ಅವರು ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಭಾವಚಿತ್ರ ಹಿಡಿದು ಆಂಬ್ಯುಲೆನ್ಸ್ ಮೂಲಕವೇ ರಾಂಚಿಯಲ್ಲಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬಿದರು. ಅಷ್ಟೇ ಅಲ್ಲದೆ, ಸ್ಟ್ರೆಚರ್ ಮೇಲೆ ನಿಂತುಕೊಂಡೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಜನರ ಕುಂದುಕೊರತೆಗಳಿಗೆ ಕಿವಿಗೊಡಬೇಕೇ ಹೊರತು ಬಲಪ್ರಯೋಗ ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು.

ಗುಂಡುಗಳಿಂದ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ

ಲಾಠಿ, ಬಂದೂಕು ಹಾಗೂ ಗುಂಡುಗಳಿಂದ ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ, ಬದಲಿಗೆ ಜನರನ್ನು ಸಂತೃಪ್ತಿಯಿಂದಿಟ್ಟಾಗ ಮಾತ್ರ ಆಡಳಿತ ಯಶಸ್ವಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಪೊಲೀಸರು ತಮ್ಮ ಮೇಲೆ ಲಾಠಿಚಾರ್ಜ್ ನಡೆಸಿ, ತಳ್ಳಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ ಮಹತೋ, ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಬಲವಾದ ಸಂದೇಶ ರವಾನಿಸಿದರು.
ಜುಲೈ 25 ರಿಂದ ಆರಂಭಗೊಂಡಿರುವ ಈ ಬೃಹತ್ ವಿದ್ಯಾರ್ಥಿ ಚಳವಳಿಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಅರ್ಹ ಯುವಕರಿಗೆ ನ್ಯಾಯಯುತ ಅವಕಾಶ ನೀಡಬೇಕು ಎಂಬುದನ್ನು ಮುಖ್ಯ ಬೇಡಿಕೆಯನ್ನಾಗಿಸಿಕೊಂಡಿದೆ. ವಿಧಾನಸಭೆಯತ್ತ ಸಾಗುತ್ತಿದ್ದ ವಿದ್ಯಾರ್ಥಿ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‌ಗಳು, ಮುಳ್ಳುತಂತಿಗಳು, ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್ ಬಳಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ತೀವ್ರ ಘರ್ಷಣೆ ಸಂಭವಿಸಿದ್ದು, ಹಲವು ವಿದ್ಯಾರ್ಥಿಗಳು ಹಾಗೂ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಈ ಪ್ರತಿಭಟನೆಯು ಯಾವುದೇ ರಾಜಕೀಯ ಲಾಭಕ್ಕಾಗಿ ನಡೆಯುತ್ತಿಲ್ಲ, ಬದಲಾಗಿ ರಾಜ್ಯದ ಲಕ್ಷಾಂತರ ಯುವಕರ ಉದ್ಯೋಗದ ಭವಿಷ್ಯಕ್ಕಾಗಿ ನಡೆಯುತ್ತಿರುವ ಧರ್ಮಯುದ್ಧವಾಗಿದೆ ಎಂದಿರುವ ಮಹತೋ, ಸರ್ಕಾರ ಕೈಗೊಳ್ಳುವ ಮುಂದಿನ ತೀರ್ಮಾನದ ಮೇಲೆ ಹೋರಾಟದ ಮುಂದಿನ ಹಾದಿ ನಿರ್ಧಾರವಾಗಲಿದೆ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net