

ನವದೆಹಲಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ( Jantar Mantar Protest ) ಬಳಿ ಹಮ್ಮಿಕೊಳ್ಳಲಾಗಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯ ಪ್ರತಿಭಟನೆಯಲ್ಲಿ ಭಾಗವಹಿಸಲು ಯತ್ನಿಸಿದ ವಿಪಕ್ಷಗಳ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಶನಿವಾರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ದೆಹಲಿಯ ಸೌತ್ ಅವೆನ್ಯೂ ಬಳಿಯ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಕುಳಿತುಕೊಂಡಿದ್ದರು. ಈ ವೇಳೆ ತಮ್ಮ ಪಕ್ಷದ ಸಂಸದರೊಂದಿಗೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಬಾಯಿಗೆ ಬ್ಯಾಂಡೇಜ್ (ಕಪ್ಪುಪಟ್ಟಿ) ಧರಿಸಿ ವಿನೂತನವಾಗಿ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಪೊಲೀಸ್ ಬಸ್ ಒಳಗಿನಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರ ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂಡಿಯಾ ಒಕ್ಕೂಟವು ಜನರ ಧ್ವನಿಯನ್ನು ಗಟ್ಟಿಗೊಳಿಸಲು ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗಿನಿಂದಲೇ ದೆಹಲಿ ಪೊಲೀಸರ ಬಿಗಿ ವಲಯದಲ್ಲಿದ್ದ ಆಪ್ (AAP) ವರಿಷ್ಠ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಮ್ಮ ಮನೆಯಿಂದ ಹೊರಡಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಬಂಧನದ ಬಳಿಕ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಕೇಜ್ರಿವಾಲ್, ದೇಶದ ಯುವಕರು ಈ ದಬ್ಬಾಳಿಕೆಗೆ ಎಂದಿಗೂ ಹೆದರುವುದಿಲ್ಲ, ನಾವು ಮತ ಕಳ್ಳತನದ ವಿರುದ್ಧ ಹೋರಾಡುತ್ತೇವೆ, ಪ್ರತಿಯೊಬ್ಬರೂ ಹೊರಬಂದು ಪ್ರತಿಭಟಿಸಬೇಕು ಎಂದು ಕರೆ ನೀಡಿದರು. ಇನ್ನು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಸೇರಿದಂತೆ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮತ್ತು ಮಾಣಿಕ್ ಸರ್ಕಾರ್ ಅವರನ್ನು ಬಂಧಿಸಿ ಛತ್ರಸಾಲ್ ಕ್ರೀಡಾಂಗಣದಲ್ಲಿರುವ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಇಂಡಿಯಾ ಒಕ್ಕೂಟದ ನಿಯೋಗವು ಶುಕ್ರವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು ಮತ್ತು 'ವೋಟ್ ಚೋರಿ' (ಮತ ಕಳವು) ನಡೆದಿರುವ ಕುರಿತು ವಿಪಕ್ಷದ ನಾಯಕರು ರಾಷ್ಟ್ರಪತಿಗಳ ಬಳಿ ಪ್ರಸ್ತಾಪಿಸಿದರು. ಸಭೆಯ ಬಳಿಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಚುನಾವಣಾ ಅಕ್ರಮಗಳ ಆರೋಪವನ್ನು ಕೇಳಿ ರಾಷ್ಟ್ರಪತಿಗಳು ಕೂಡ ಆಘಾತ ವ್ಯಕ್ತಪಡಿಸಿದರು ಎಂದು ಹೇಳಿಕೆ ನೀಡಿದರು. ಆದರೆ, ರಾಹುಲ್ ಗಾಂಧಿ ಅವರ ಈ ಹೇಳಿಕೆ ತಪ್ಪು ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಲಭ್ಯವಿರುವ ಎಲ್ಲಾ ಕಾನೂನಾತ್ಮಕ ಅವಕಾಶಗಳನ್ನು ಬಳಸಿಕೊಳ್ಳಲು ನಿರ್ಧರಿಸಿರುವ ವಿಪಕ್ಷದ ನಾಯಕರು, ಸೋಮವಾರದಂದು ಸುಪ್ರೀಂ ಕೋರ್ಟ್‌ಗೆ ಭೇಟಿ ನೀಡಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಚುನಾವಣಾ ಆಯೋಗದ ಈ ಎಲ್ಲಾ ವಿವಾದಗಳು ಮತ್ತು ಅಕ್ರಮಗಳ ವಿರುದ್ಧ ಸೋಮವಾರದಂದು ದೇಶಾದ್ಯಂತ ಅಥವಾ ದೆಹಲಿಯಲ್ಲಿ ಮತ್ತೊಂದು ಹಂತದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಇಂಡಿಯಾ ಒಕ್ಕೂಟ ಘೋಷಿಸಿದೆ.
ದೆಹಲಿಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿ ಜಂತರ್ ಮಂತರ್ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದಾರೆ. ಸಿಪಿಎಲ್ (CJP) ಕಾನೂನು ಮುಖ್ಯಸ್ಥೆ ರತ್ನ ಸಿಂಗ್ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರನ್ನು ಪೊಲೀಸರು ದೆಹಲಿಯ ವಿವಿಧೆಡೆ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ವಿಪಕ್ಷದ ಪ್ರಮುಖ ನಾಯಕರೇ ನೇರವಾಗಿ ಬಂಧನಕ್ಕೀಡಾಗಿರುವುದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸರ್ಕಾರದ ವಿರುದ್ಧ ತೀವ್ರ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ, (ಏಜೆನ್ಸೀಸ್).