190 ಕ್ಯಾರೆಟ್ ವಜ್ರ, ವೆಲ್ವೆಟ್ ಗೌನ್; ದೋಹಾ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಇಶಾ ಅಂಬಾನಿ ಡ್ರೆಸ್​​ ವಿಶೇಷತೆ ಕೇಳಿದ್ರೆ ಹುಬ್ಬೇರುತ್ತೆ

Isha Ambani
190 ಕ್ಯಾರೆಟ್ ವಜ್ರ, ವೆಲ್ವೆಟ್ ಗೌನ್; ದೋಹಾ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಇಶಾ ಅಂಬಾನಿ ಡ್ರೆಸ್​​ ವಿಶೇಷತೆ ಕೇಳಿದ್ರೆ ಹುಬ್ಬೇರುತ್ತೆ
Published on: 

ದೋಹಾ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಸುಪುತ್ರಿ ಇಶಾ ಅಂಬಾನಿ (Isha Ambani) ತಮ್ಮ ವಿಶಿಷ್ಟ ಫ್ಯಾಷನ್ ಶೈಲಿಯಿಂದ ಇದೀಗ ಅನೇಕ ಕಣ್ಣುಗಳನ್ನು ಸೆಳೆದಿದ್ದಾರೆ.

ಇತ್ತೀಚೆಗಷ್ಟೇ ಕತಾರ್‌ನ ದೋಹಾದಲ್ಲಿ ನಡೆದ 8ನೇ ಸೀಸನ್​ 'ಫ್ಯಾಷನ್ ಟ್ರಸ್ಟ್ ಅರೇಬಿಯಾ ಪ್ರೈಜ್' ಕಾರ್ಯಕ್ರಮದಲ್ಲಿ ಇಶಾ ಧರಿಸಿದ್ದ ಐಷಾರಾಮಿ ಉಡುಗೆ ಇದೀಗ ಫ್ಯಾಷನ್ ಲೋಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರ್ಯಕ್ರಮಕ್ಕಾಗಿ ಇಶಾ ಲಂಡನ್ ಮೂಲದ ಹಾಟ್ ಕೌಚರ್ ಫ್ಯಾಷನ್ ಬ್ರ್ಯಾಂಡ್ 'ಸ್ಟ್ಯಾಂಡಿಂಗ್ ಗ್ರೌಂಡ್' ಡಿಸೈನಿಂಗ್​ ಇರುವ ವಿಶೇಷ ಚಾಕೊಲೇಟ್ ಬ್ರೌನ್ ಬಣ್ಣದ ವೆಲ್ವೆಟ್ ಗೌನ್ ಧರಿಸಿದ್ದರು.

ನೀತಾ ಅಂಬಾನಿ ಕಲೆಕ್ಷನ್​

ಆ್ಯಂಡ್ರ್ಯೂ ಮುಕಾಮಲ್ ಈ ಉಡುಪನ್ನು ಸ್ಟೈಲಿಂಗ್ ಮಾಡಿದ್ದು, ಗೌನ್‌ನ ಮಧ್ಯಭಾಗದಲ್ಲಿ ಅಳವಡಿಸಲಾಗಿದ್ದ ಬರೋಬ್ಬರಿ 190 ಕ್ಯಾರೆಟ್ ವಜ್ರಗಳು ಎಲ್ಲರ ಗಮನ ಸೆಳೆಯಿತು. ವಿಶೇಷ ಎಂದರೆ, ಈ ವಜ್ರಗಳು ಇಶಾ ಅವರ ತಾಯಿ ನೀತಾ ಅಂಬಾನಿ ಅವರ ವೈಯಕ್ತಿಕ ಸಂಗ್ರಹಕ್ಕೆ ಸೇರಿರುವ ಆಭರಣಗಳು ಎನ್ನಲಾಗಿದೆ. ಹೀಗಾಗಿಯೇ, ಈ ಉಡುಗೆಗೆ ಕೌಟುಂಬಿಕ ಪರಂಪರೆಯ ವಿಶೇಷ ಮೆರಗು ಕೂಡ ಇದೆ ಎಂದು ವರದಿಗಳು ತಿಳಿಸಿವೆ.

ಜ್ಯಾಕ್ ಸಾವೊಯ್ ಅವರ ಪ್ರಕಾರ, ಗೌನ್‌ನ ಮಧ್ಯಭಾಗದಲ್ಲಿರುವ ಪ್ರಮುಖ ವಜ್ರವೊಂದೇ 52 ಕ್ಯಾರೆಟ್‌ಗಿಂತಲೂ ಹೆಚ್ಚಿನ ತೂಕವಿದೆ. ಪಿಯರ್, ರೌಂಡ್, ಹಾರ್ಟ್ ಮತ್ತು ಎಮರಾಲ್ಡ್ ಸೇರಿದಂತೆ ವಿವಿಧ ವಿನ್ಯಾಸಗಳ ವಜ್ರಗಳನ್ನು ಗೌನ್‌ನ ಮೇಲೆ ಅಲಂಕರಿಸಲಾಗಿತ್ತು. ವಜ್ರಗಳ ಹೊಳಪು ಮತ್ತು ವೆಲ್ವೆಟ್ ಬಟ್ಟೆಯ ವಿನ್ಯಾಸ ಉಡುಪಿಗೆ ಮತ್ತಷ್ಟು ಆಕರ್ಷಣೆ ನೀಡಿತು ಎಂದು ವಿವರಿಸಲಾಗಿದೆ.

ಟಾಪ್​ ಕ್ಲಾಸ್​ ಡಿಸೈನ್​

ಸ್ಟ್ರಾಪ್‌ಲೆಸ್ ಡಿಸೈನ್​, ವಿಶೇಷ ಕಂಠದ ಡಿಸೈನ್​, ಕಾರ್ಸೆಟ್ ಮಾದರಿಯ ಮೇಲ್ಭಾಗ ಮತ್ತು ಮಧ್ಯದಲ್ಲಿ ಸುಂದರವಾಗಿ ಮಡಚಿದ ವೆಲ್ವೆಟ್ ಸ್ಕರ್ಟ್ ಈ ಗೌನ್‌ನ ಪ್ರಮುಖ ಆಕರ್ಷಣೆಗಳಾಗಿವೆ. ಹಿಂಭಾಗದಲ್ಲಿದ್ದ ಚಿಕ್ಕ ಟ್ರೇನ್, ವೆಲ್ವೆಟ್ ಗ್ಲೌಸ್​ಗಳು ಹಾಗೂ ಕುತ್ತಿಗೆಯ ಸುತ್ತ ಧರಿಸಿದ್ದ ಅದೇ ಬಣ್ಣದ ಸ್ಕಾರ್ಫ್ ಇಶಾ ಅವರ ಲುಕ್‌ಗೆ ಸಂಪೂರ್ಣ ಮೆರುಗು ನೀಡಿವೆ. ಜತೆಗೆ ದೊಡ್ಡ ವಜ್ರದ ಕಿವಿಯೋಲೆಗಳು, ಹಿಂಬದಿಗೆ ಬಾಚಿ ಕಟ್ಟಿದ ಪೋನಿಟೇಲ್ ಹೇರ್‌ಸ್ಟೈಲ್ ಮತ್ತು ಆಕರ್ಷಕ ಮೇಕಪ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು ಎಂಬುದರಲ್ಲಿ ಅನುಮಾನವೇ ಇಲ್ಲ.

ಕಾರ್ಯಕ್ರಮದಲ್ಲಿ ವಿಶೇಷ ಪ್ರಶಸ್ತಿ ಪ್ರದಾನ

ಈ ಫ್ಯಾಷನ್ ಕಾರ್ಯಕ್ರಮದಲ್ಲಿ ಇಶಾ ಅಂಬಾನಿ ಮತ್ತೊಂದು ವಿಶೇಷ ಜವಾಬ್ದಾರಿಯನ್ನೂ ನಿರ್ವಹಿಸಿದರು. 'ನೀತಾ-ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಕ್ರಾಫ್ಟ್ಸ್‌ಮನ್‌ಶಿಪ್ ರೆಸಿಡೆನ್ಸಿ ಅವಾರ್ಡ್'ನ ಮೊದಲ ಆವೃತ್ತಿಯ ಪ್ರಶಸ್ತಿಯನ್ನು ಅವರೇ ಪ್ರದಾನ ಮಾಡಿದರು. ಸ್ವದೇಶ್ ಸಂಸ್ಥೆಯ ಸಹಯೋಗದಲ್ಲಿ ರೂಪಿಸಿರುವ ಈ ಪ್ರಶಸ್ತಿಯ ಉದ್ದೇಶ, ಫ್ಯಾಷನ್ ಟ್ರಸ್ಟ್ ಅರೇಬಿಯಾದ ಒಬ್ಬ ವಿನ್ಯಾಸಕನಿಗೆ ಭಾರತದ ನುರಿತ ಕುಶಲಕರ್ಮಿಗಳಿಂದ ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಕಲಿಯುವ ಅವಕಾಶ ಕಲ್ಪಿಸುವುದಾಗಿದೆ.

Also Read
ಪತ್ನಿಯ ಅದೊಂದು ತಪ್ಪಿಗೆ... ಕನಸಿನ ಮನೆ ಕಟ್ಟಲು ಕೂಡಿಟ್ಟಿದ್ದ ವರ್ಷಗಳ ಹಣವನ್ನೆಲ್ಲ ಸುರಿದು ಬೆಂಕಿಯಿಟ್ಟ ಪತಿ! Viral Video
Isha Ambani

ಭಾರತದ ಶ್ರೀಮಂತ ಕರಕುಶಲ ಪರಂಪರೆಯನ್ನು ಜಾಗತಿಕ ಫ್ಯಾಷನ್ ಲೋಕಕ್ಕೆ ಪರಿಚಯಿಸುವುದು ಮತ್ತು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2025ರಲ್ಲಿ ಫ್ಯಾಷನ್ ಟ್ರಸ್ಟ್ ಅರೇಬಿಯಾದ ಅತಿಥಿ ರಾಷ್ಟ್ರವಾಗಿ ಭಾರತ ಭಾಗವಹಿಸಿದ್ದರ ಮುಂದುವರಿದ ಭಾಗವಾಗಿ ಈ ಹೊಸ ಪ್ರಶಸ್ತಿಯನ್ನು ಪರಿಚಯಿಸಲಾಗಿದೆ.

ಇನ್ನು, ಕಾರ್ಯಕ್ರಮದಲ್ಲಿ ಇಶಾ ಅಂಬಾನಿ ಮಾತ್ರವಲ್ಲದೇ ಶೇಖಾ ಅಲ್ ಮಯಾಸ್ಸಾ ಬಿಂತ್ ಹಮದ್ ಅಲ್ ಥಾನಿ, ಖ್ಯಾತ ಫುಟ್ಬಾಲ್ ತಾರೆ ಡೇವಿಡ್ ಬೆಕ್‌ಹ್ಯಾಮ್ ಮತ್ತು ನಟಿ ಸಲ್ಮಾ ಹಯೆಕ್ ಪಿನಾಲ್ಟ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ,(ಏಜೆನ್ಸೀಸ್).