‘ತ್ರಿವರ್ಣ ಧ್ವಜ ಹಿಡಿಯೋದು ತಪ್ಪಾ, ಬೇಕಿದ್ರೆ ಗಲ್ಲಿಗೇರಿಸಿ! ರ‍್ಯಾಲಿ ನಡೆಸದಂತೆ ನೋಟಿಸ್​; ಪೊಲೀಸರ ವಿರುದ್ಧ ದಿಪ್ಕೆ ಆಕ್ರೋಶ! Abhijeet Dipke

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ‘ಲೆಹರಾ ದೋ ತಿರಂಗಾ’ ಮಾರ್ಚ್‌ಗೂ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮನೆಗೆ ಪೊಲೀಸ್ ಲಗ್ಗೆ. ರ‍್ಯಾಲಿ ತಡೆದು ನೋಟಿಸ್ ಜಾರಿ; ‘ಬೇಕಿದ್ರೆ ಗಲ್ಲಿಗೇರಿಸಿ’ ಎಂದ ದಿಪ್ಕೆ!
CJP founder Abhijit Dipke expresses outrage after receiving a notice from the Delhi Police.
ದೆಹಲಿ ಪೊಲೀಸರಿಂದ ನೋಟಿಸ್ ಸ್ವೀಕರಿಸಿ ಆಕ್ರೋಶ ಹೊರಹಾಕುತ್ತಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ
Published on: 

ನವದೆಹಲಿ: ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ‘ಲೆಹರಾ ದೋ ತಿರಂಗಾ’ ಮಾರ್ಚ್‌ಗೂ ಮುನ್ನವೇ ಭಾರಿ ಗದ್ದಲ ಸೃಷ್ಟಿಯಾಗಿದೆ. ಪ್ರತಿಭಟನೆಗೆ ಕರೆ ನೀಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸ್ಥಾಪಕ ಅಭಿಜೀತ್ ದಿಪ್ಕೆ ತಂಗಿದ್ದ ಮನೆಗೆ ಶುಕ್ರವಾರ (ಅ.16) ಮಧ್ಯಾಹ್ನವೇ ದೆಹಲಿ ಪೊಲೀಸರು ಲಗ್ಗೆ ಇಟ್ಟಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮನೆಗೆ ಬಂದ ಪೊಲೀಸ್, ದಿಪ್ಕೆ ಆಕ್ರೋಶ!

ಅಭಿಜೀತ್​ ದಿಪ್ಕೆ ತಂಗಿರುವ ಝಂಡೇವಾಲನ್‌ನಲ್ಲಿರುವ ನಿವಾಸಕ್ಕೆ ಮಹಿಳಾ ಸಿಬ್ಬಂದಿ ಸೇರಿದಂತೆ ಸುಮಾರು ಹನ್ನೆರಡು ಮಂದಿ ಪೊಲೀಸರು ಏಕಾಏಕಿ ಆಗಮಿಸಿದ್ದಾರೆ. ಮಹಾತ್ಮ ಗಾಂಧೀ ಅವರ ಚಿತ್ರವಿರುವ ಬಿಳಿ ಟಿ-ಶರ್ಟ್ ಧರಿಸಿ, ಭುಜದ ಮೇಲೆ ರಾಷ್ಟ್ರಧ್ವಜ ಹೊದ್ದು ಮೌನವಾಗಿ ಕುಳಿತಿದ್ದ ದಿಪ್ಕೆ, ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ತೋಚಿದ್ದನ್ನೆಲ್ಲ ಬರೆದುಕೊಳ್ಳುತ್ತಿದ್ದೀರಿ. ಇದೇನು ತಮಾಷೆನಾ? ಬೇಕಿದ್ರೆ ನನ್ನನ್ನು ಗಲ್ಲಿಗೇರಿಸಿಬಿಡಿ! ನಾನು ಎಲ್ಲಿಯಾದರೂ ಹಿಂಸಾಚಾರಕ್ಕೆ ಕರೆ ಕೊಟ್ಟಿದ್ದೀನಾ? ಅದಕ್ಕೆ ನಿಮ್ಮ ಬಳಿ ಒಂದಾದರೂ ವಿಡಿಯೋ ಸಾಕ್ಷಿ ಇದೆಯಾ? ಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ. ನಾವು ಧ್ವನಿವರ್ಧಕಗಳನ್ನು ಬಳಸಿ ಗಲಾಟೆ ಮಾಡುತ್ತಿಲ್ಲ, ಯಾವುದೇ ರಂಪಾಟವೂ ಇಲ್ಲ. ಬರೀ ತ್ರಿವರ್ಣ ಧ್ವಜವನ್ನು ಹಿಡಿದು ನಿಲ್ಲುತ್ತೇವೆ, ಅದಕ್ಕೂ ದೇಶದಲ್ಲಿ ಅನುಮತಿ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.

ನೋಟಿಸ್ ಜಾರಿ, ರ‍್ಯಾಲಿಗೆ ಬ್ರೇಕ್

ಪೊಲೀಸರು, ದೆಹಲಿ ಪೊಲೀಸ್ ಕಾಯಿದೆಯ ಸೆಕ್ಷನ್ 29ರ ಅಡಿಯಲ್ಲಿ ದಿಪ್ಕೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನೆಪವೊಡ್ಡಿ, ಕನ್ನಾಟ್ ಪ್ಲೇಸ್‌ನ ಸುತ್ತಮುತ್ತ ಯಾವುದೇ ರ‍್ಯಾಲಿ, ಮಾರ್ಚ್ ಅಥವಾ ಪ್ರದರ್ಶನ ನಡೆಸದಂತೆ ಖಡಕ್ ಸೂಚನೆ ನೀಡಿದ್ದಾರೆ. ಅಂತಿಮವಾಗಿ ದಿಪ್ಕೆ ಪೊಲೀಸರು ನೀಡಿದ ಶಾಂತಿ ಒಪ್ಪಂದದ ದಾಖಲೆಗಳಿಗೆ ಸಹಿ ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಏನಿದು 'ಸಿಜೆಪಿ' ಕಿರಿಕ್?

ಎಸ್‌ಐಆರ್ (SIR) ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಸಿಜೆಪಿ ಸಂಘಟನೆ ಕಳೆದ ಕೆಲ ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಇದೇ ವಾರದ ಆರಂಭದಲ್ಲಿ ಜಂತರ್ ಮಂತರ್‌ನಲ್ಲಿ ಧ್ವಜ ಹಾರಿಸಲು ಯತ್ನಿಸಿದ್ದ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಭದ್ರತಾ ಲೋಪದ ಆರೋಪದಡಿ ಬಂಧಿಸಿ, 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದರ ಬೆನ್ನಲ್ಲೇ ಆಕ್ರೋಶಗೊಂಡಿದ್ದ ಸಂಘಟನೆ, ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸಂಜೆ 5 ಗಂಟೆಗೆ ಎಲ್ಲರೂ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಬರುವಂತೆ ಜನರಿಗೆ ಕರೆ ನೀಡಿತ್ತು.

Also Read
ಮೈದಾನದಲ್ಲಿ ನಗು, ಬದುಕಲ್ಲಿ ನರಕಯಾತನೆ: ಕುಡಿತ, ಡಿವೋರ್ಸ್ ಮತ್ತು ರಿಹ್ಯಾಬ್ ವಾಸದ ಕಹಿ ಸತ್ಯ ಬಿಚ್ಚಿಟ್ಟ ಯುಜ್ವೇಂದ್ರ ಚಾಹಲ್! Yuzvendra Chahal
CJP founder Abhijit Dipke expresses outrage after receiving a notice from the Delhi Police.

ನಂಬರ್ ಪ್ಲೇಟ್ ಇಲ್ಲದ ಗಾಡಿಗಳು, ಐಬಿ ಕಣ್ಗಾವಲು!

ಗುರುವಾರ ತಡರಾತ್ರಿ ಮುಂಬೈನಿಂದ ದೆಹಲಿಗೆ ಬಂದಿಳಿದ ದಿಪ್ಕೆ, ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಾನು ದೆಹಲಿಗೆ ಬಂದಾಗಿನಿಂದಲೂ ನಂಬರ್ ಪ್ಲೇಟ್ ಇಲ್ಲದ ವಾಹನಗಳು ನನ್ನನ್ನು ಬೆನ್ನಟ್ಟುತ್ತಿವೆ. ನಾನು ಉಳಿದುಕೊಂಡಿರುವ ಜಾಗದ ಮೇಲೆ ಗುಪ್ತಚರ ಇಲಾಖೆ (IB) ಸಿಬ್ಬಂದಿ ಕಣ್ಣಿಟ್ಟಿದ್ದಾರೆ. ಪೊಲೀಸರು ನನ್ನನ್ನು ಯಾವುದೇ ಕ್ಷಣದಲ್ಲಾದರೂ ಅರೆಸ್ಟ್ ಮಾಡಬಹುದು. ಆದರೆ ಇಂತಹ ಬೆದರಿಕೆಗಳಿಗೆ ನಾವು ಜಗ್ಗಲ್ಲ ಎಂದು ಗುಡುಗಿದ್ದರು.

ಅಷ್ಟೇ ಅಲ್ಲದೆ, ಸ್ವಂತ ದೇಶದಲ್ಲೇ ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾ? ಹಾಗಿದ್ದರೆ ನನ್ನನ್ನು ಜೈಲಿಗೆ ಹಾಕಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರಧ್ವಜ ಕಂಡರೆ ಯಾಕೆ ಇಷ್ಟೊಂದು ದ್ವೇಷ? ತ್ರಿವರ್ಣ ಧ್ವಜವನ್ನೇ ದ್ವೇಷಿಸುವವರು ದೇಶದ ಪ್ರಧಾನಿಯಾಗಿ ಮುಂದುವರಿಯಲು ಲಾಯಖ್ಖಾ? ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ವಿಮಾನ ನಿಲ್ದಾಣದಲ್ಲೂ ನಡೆದಿತ್ತು ಹೈಡ್ರಾಮಾ!

ಇದೇ ಅಕ್ಟೋಬರ್ 10 ರಂದು 'ಜಂತರ್ ಮಂತರ್ 2.0' ಪ್ರತಿಭಟನೆಗೆ ಕರೆ ನೀಡಿದ್ದಾಗಲೂ ಇಂತಹುದೇ ಘಟನೆ ನಡೆದಿತ್ತು. ದಿಪ್ಕೆ ಹಾಗೂ ಅವರ ತಂಡ ದೆಹಲಿಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ವಿಮಾನದ ಒಳಗೇ ನುಗ್ಗಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಒಂದು ವರ್ಷ ಕಾಲ ಸನ್ನಡತೆ ಕಾಪಾಡುವ ಶಾಂತಿ ಬಾಂಡ್​ಗೆ ಸಹಿ ಹಾಕಿಸಿಕೊಂಡು ಬಿಡುಗಡೆ ಮಾಡಲಾಗಿತ್ತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net