ಠಾಕ್ರೆ ನೇತೃತ್ವದ ಶಿವಸೇನಾ ಆಂತರಿಕ ಬಿಕ್ಕಟ್ಟು: ಇಂದು ಆರು ಬಂಡಾಯ ಸಂಸದರು ಅಧಿಕೃತವಾಗಿ ಶಿಂಧೆ ಸೇನಾ ಸೇರ್ಪಡೆ | Shiv Sena

ಸಚಿವ ಪ್ರತಾಪ್ ಸರ್ನಾಯಕ್ ಮತ್ತು ಉದ್ದವ್ ಠಾಕ್ರೆ
ಸಚಿವ ಪ್ರತಾಪ್ ಸರ್ನಾಯಕ್ ಮತ್ತು ಉದ್ದವ್ ಠಾಕ್ರೆ
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಆಪರೇಷನ್ ಟೈಗರ್ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಹಲವು ದಿನಗಳ ಊಹಾಪೋಹಗಳು, ಆರೋಪಗಳ ಬಳಿಕ ಇಂದು(ಜೂ. 22) ಠಾಕ್ರೆ ನೇತೃತ್ವದ ಶಿವಸೇನೆಯ(Shiv Sena) ಆರು ಸಂಸದರು ಅಧಿಕೃತವಾಗಿ ಶಿಂಧೆ ಸೇನಾ ಸೇರ್ಪಡೆಯಾಗಲಿದ್ದಾರೆ.
ಈ ಕುರಿತು ಮುಂಬೈನಲ್ಲಿ ಮಾತನಾಡಿರುವ ಶಿವಸೇನಾ ಶಿಂಧೆ ಬಣದ ನಾಯಕ ಮತ್ತು ಸಚಿವ ಪ್ರತಾಪ್ ಸರ್ನಾಯಕ್, ಇಂದು ಮಧ್ಯಾಹ್ನ 3 ಗಂಟೆಗೆ ಆರು ಸಂಸದರು ಅಧಿಕೃತವಾಗಿ ಶಿವಸೇನೆಗೆ ಸೇರಲಿದ್ದಾರೆ. ಇದು ನಮ್ಮ ಸಂಸದರ ಸಂಖ್ಯಾ ಬಲವನ್ನು 7 ರಿಂದ 13 ಕ್ಕೆ ಹೆಚ್ಚಿಸುತ್ತದೆ. ಎಂದು ಹೇಳಿದ್ದಾರೆ.
ಈ ಕ್ರಮವನ್ನುಪಕ್ಷದ ಆಪರೇಷನ್ ಟೈಗರ್​ನ ಮುಂದುವರಿಕೆ ಎಂದು ಬಣ್ಣಿಸಿರುವ ಅವರು, ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುವ ಆರು ಸಂಸದರು ಶಿವಸೇನೆಗೆ ಸೇರುತ್ತಿದ್ದಾರೆ ಎಂದಿದ್ದಾರೆ.
ಬಂಡಾಯ ಸಂಸದರಾದ ಸಂಜಯ್ ಜಾಧವ್, ಸಂಜಯ್ ದೇಶಮುಖ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್ ಅಶ್ಟಿಕರ್ ಹಾಗೂ ಸಂಜಯ್ ದಿನಾ ಪಾಟೀಲ್ ಜೂನ್ 16ರಂದು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ವಿಮಾನದಲ್ಲಿ ತೆರಳಿ ನೋಯ್ಡಾದ ಹೋಟೆಲ್‌ನಲ್ಲಿ ತಂಗಿ, ಶಿವಸೇನಾ(ಯುಬಿಟಿ) ಸಂಸದೀಯ ಸಭೆಗೆ ಗೈರಾಗಿದ್ದರು. ಅಲ್ಲಿಂದ ಅವರು ಶಿಂಧೆ ಬಣ ಸೇರಲಿದ್ದಾರೆ ಎಂದು ಸುದ್ದಿ ಹರಡಿತ್ತು.
ಇನ್ನೂ ಬಂಡಾಯ ಬಣದ ಇಬ್ಬರು ಸಂಸದರಾದ ಓಂರಾಜೆ ನಿಂಬಾಳ್ಕರ್ ಮತ್ತು ನಾಗೇಶ್ ಅಷ್ಟಿಕರ್ ಅವರು ಯುಬಿಟಿ ಸೇನಾದಿಂದ ಬೇರ್ಪಡುವುದಾಗಿ ಔಪಚಾರಿಕವಾಗಿ ಘೋಷಿಸಿದ್ದಾರೆ. ಓಂರಾಜೆ ಸರ್ಕಾರದ ಅನುದಾನ ಸಿಗುತ್ತಿಲ್ಲ, ಕ್ಷೇತ್ರದ ಕೆಲಸ ಆಗುತ್ತಿಲ್ಲ ಹಾಗಾಗಿ ಪಕ್ಷ ಬದಲಾವಣೆ ಮಾಡ್ತಿದ್ದೇನೆ ಎಂದು ತಿಳಿಸಿದ್ರೆ, ನಾಗೇಶ್ ಅಷ್ಟಿಕರ್ ಅವರು ಸಂಜಯ್ ರಾವತ್ ಬಳಸಿದ ಭಾಷೆಯಿಂದ ನಮಗೆ ನೋವಾಗಿದೆ ಹಾಗಾಗಿ ಪಕ್ಷ ಬಿಡುತ್ತಿದ್ದೇನೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net