1650 ಫ್ಲೈಟ್ಸ್​​, 610 ಕೋಟಿ ರೂ. ಮರುಪಾವತಿ; ಸಹಜ ಸ್ಥಿತಿಯತ್ತ ಇಂಡಿಗೋ ಏರ್​ಲೈನ್ಸ್​

IndiGo Airlines
IndiGo Airlines
Published on

ಪ್ರಮುಖ ಮುಖ್ಯಾಂಶಗಳು

  • ತೀವ್ರ ಬಿಕ್ಕಟ್ಟಿನಲ್ಲಿ ಇಂಡಿಗೋ ಏರ್‌ಲೈನ್ಸ್
  • ವಿಮಾನಗಳ ದಿಢೀರ್​ ರದ್ದು, ಪ್ರಯಾಣಿಕರ ಕೋಪಕ್ಕೆ ಸಂಸ್ಥೆ ತುತ್ತು
  • 610 ಕೋಟಿ ರೂ. ರೀಫಂಡ್​, 3000 ಲಗ್ಗೇಜ್​ ವಾಪಾಸ್​
ನವದೆಹಲಿ: ಕಳೆದ ಒಂದು ವಾರದಿಂದ ಇಂಡಿಗೋ ಏರ್‌ಲೈನ್ಸ್ ತೀವ್ರ ಬಿಕ್ಕಟ್ಟಿನಲ್ಲಿರುವುದು ದೇಶದ ಜನತೆಗೆ ಗೊತ್ತೇ ಇದೆ. ಇದು ವಿಮಾನ ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಪೈಲೆಟ್​ ಕೊರೆತೆ, ಆಂತರಿಕ ಸಮಸ್ಯೆಗಳಿಂದ ಹೆಚ್ಚಿನ ಸಂಖ್ಯೆಯ ಇಂಡಿಗೋ ವಿಮಾನಗಳನ್ನು ದಿಢೀರ್​ ರದ್ದುಗೊಳಿಸಿದ ಸಂಸ್ಥೆಯ ನಿರ್ಧಾರದಿಂದ ಕಂಗೆಟ್ಟಿರುವ ಅಪಾರ ಸಂಖ್ಯೆಯ ಪ್ರಯಾಣಿಕರು, ಆಯಾ ಏರ್​ಪೋರ್ಟ್​ಗಳಲ್ಲೇ ಬೀಡುಬಿಡುವಂತಾಗಿರುವುದು ನಿಜಕ್ಕೂ ಬೇಸರದ ವಿಷಯ.  
ಇಂಡಿಗೋ ಏರ್‌ಲೈನ್ಸ್ ಬಿಕ್ಕಟ್ಟಿನಿಂದ ಭಾರೀ ತೊಂದರೆಗೆ ಸಿಲುಕಿರುವ ಪ್ರಯಾಣಿಕರು, ತಮಗೆ ಇಂಥಾ ಪರಿಸ್ಥಿತಿ ತಂದಿಟ್ಟರಲ್ಲ ಎಂದು ಸಂಸ್ಥೆಗೆ ಛೀಮಾರಿ ಹಾಕುತ್ತಿದ್ದಾರೆ. ಈ ಮಧ್ಯೆ, ವಿಮಾನಯಾನ ಸಂಸ್ಥೆ ಈಗಾಗಲೇ ಭರವಸೆ ನೀಡಿದ್ದು, ಶೀಘ್ರವೇ ಪರಿಸ್ಥಿತಿ ಯಥಾಸ್ಥಿತಿಗೆ ಮರಳಲಿದೆ ಎಂದು ತಿಳಿಸಿದೆ. ಆದರೆ, ಡಿ.15ರವರೆಗೂ ಈ ಸಮಸ್ಯೆಯ ಬಿಸಿ ಕೊಂಚ ಕಾಡಲಿದೆ ಎಂಬುದನ್ನೂ ಒತ್ತಿ ಹೇಳಿದೆ. ಇತ್ತೀಚಿನ ವರದಿ ಪ್ರಕಾರ, ಡಿ.07ರ ಹೊತ್ತಿಗೆ, ದೇಶಾದ್ಯಂತ 2,000ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 
ಇದೀಗ ಇಂಡಿಗೋ ತನ್ನ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದು, ಇಂದು ಒಂದೇ ದಿನ 1650 ವಿಮಾನಗಳನ್ನು ನಿರ್ವಹಿಸುವ ಗುರಿಯನ್ನು ಬಹಿರಂಗಪಡಿಸಿದೆ. ನಿನ್ನೆ 1500ಕ್ಕೂ ಹೆಚ್ಚು ಫ್ಲೈಟ್ಸ್​ಗಳನ್ನು ನಿರ್ವಹಿಸಿದ್ದು, ಡಿ.10 ರೊಳಗೆ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸುವ ಗಟ್ಟಿಯಾದ ಭರವಸೆಯನ್ನು ಸಂಸ್ಥೆ ಪ್ರಯಾಣಿಕರಿಗೆ ನೀಡಿದೆ.  
ಇಂಡಿಗೋ ಸಂಸ್ಥೆಯಿಂದ ಉಂಟಾದ ಪ್ರಯಾಣ ಅಡಚಣೆಗಳನ್ನು ಪರಿಹರಿಸಲು ನಾಗರಿಕ ವಿಮಾನಯಾನ ಸಚಿವಾಲಯ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ (ಡಿ.05) ಕೇವಲ 706 ವಿಮಾನಗಳನ್ನು ಮಾತ್ರ ಹಾರಿಸಲಾಗಿದೆ. ಶನಿವಾರ, ಅದು 1565ಕ್ಕೆ ಏರಿದೆ. ಇನ್ನು ಭಾನುವಾರ ಸುಮಾರು 1650 ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

610 ಕೋಟಿ ರೂ., 3000 ಲಗ್ಗೇಜ್​

ವಿಮಾನ ಸೇವೆಗಳು ಸ್ಥಗಿತಗೊಂಡ ಬೆನ್ನಲ್ಲೇ ಇಂಡಿಗೋ ತನ್ನ ಪ್ರಯಾಣಿಕರಿಗೆ 610 ಕೋಟಿ ರೂ. ಹಣವನ್ನು ರೀ-ಫಂಡ್​ ಮಾಡಿದ್ದಾಗಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರ ಅಂತಿಮ ನಿರ್ದೇಶನ ಕೊಟ್ಟ ನಂತರ ಇಂಡಿಗೋ ಮರುಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಇಲ್ಲಿಯವರೆಗೆ ಒಟ್ಟು 610 ಕೋಟಿ ರೂ. ಮೊತ್ತವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗಿದೆ ಮತ್ತು ಸುಮಾರು 3,000 ಲಗೇಜ್‌ಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂತಿರುಗಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net