Smit Machchhar: 'ಫ್ಲೈದುಬೈ'ನ FZ1073 ವಿಮಾನ ಘಟನೆಯಲ್ಲಿ ಕೋ-ಪೈಲಟ್ನ ಪಿತೂರಿಯ ಭೀಕರ ದಾಳಿಗೆ ಎದೆಗುಂದದೆ, 174 ಮಂದಿಯ ಜೀವ ಉಳಿಸುವ ಮೂಲಕ ಸಾಹಸ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿರುವ ಸಮಯದಲ್ಲಿ ಇಸ್ರೇಲ್ ರಾಷ್ಟ್ರವು ತನ್ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದೆ.
ಟೆಲ್ ಅವಿವ್‌ಗೆ ತೆರಳುತ್ತಿದ್ದ 'ಫ್ಲೈ ದುಬೈ' ವಿಮಾನವನ್ನು ಛಿದ್ರಗೊಳಿಸುವ ಕೋ-ಪೈಲಟ್ ಹಮಾಮ್ ಪ್ರಯತ್ನವನ್ನು ತುಳಿದುಹಾಕಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚಾರ್ ಅವರಿಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಸಾಹಸ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸ್ಮಿತ್ ಅವರಿಗೆ ದೇಶದ 'ನಾಗರಿಕ ಸಾಹಸಕ್ಕಾಗಿ ಅಧ್ಯಕ್ಷೀಯ ಪ್ರಶಸ್ತಿ'ಯನ್ನು (Presidential Award for Civilian Heroism) ನೀಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ತಿಳಿಸಿದ್ದಾರೆ.
ವಿಮಾನವು ಪತನವಾಗಲು ಬಿಡದಂತೆ ಸಹಾಯ ಮಾಡಿದ ಆರು ಇಸ್ರೇಲಿ ಪ್ರಯಾಣಿಕರಿಗೂ ಇದೇ ಸಮಾರಂಭದಲ್ಲಿ 'ನಾಗರಿಕ ಸಾಹಸಕ್ಕಾಗಿ ಅಧ್ಯಕ್ಷೀಯ ಪದಕ'ವನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ. "ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚಾರ್ ಅವರು ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ನಾನು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಕ್ಯಾಪ್ಟನ್ ಮಚಾರ್ ಅವರ ಅಸಾಧಾರಣ ಧೈರ್ಯ ಮತ್ತು ವೃತ್ತಿಪರತೆಯು ಅತಿದೊಡ್ಡ ದುರಂತವನ್ನು ತಪ್ಪಿಸಿದೆ. ಅವರು ಶೀಘ್ರವೇ ಗುಣಮುಖರಾದ ನಂತರ, ಇಸ್ರೇಲ್ ಜನರ ಪರವಾಗಿ ಅವರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡುವುದು ನನಗೆ ದೊಡ್ಡ ಗೌರವದ ವಿಷಯ" ಎಂದು ಹರ್ಜೋಗ್ ಹೇಳಿದ್ದಾರೆ.
ಕ್ಯಾಪ್ಟನ್ ಮಚ್ಚಾರ್ ಅವರೊಟ್ಟಿಗೆ ವಿಮಾನವನ್ನು ಅಪಹರಿಸುವ ಹಮಾಮ್ ಪ್ರಯತ್ನವನ್ನು ವಿಫಲಗೊಳಿಸಿದ ಇಸ್ರೇಲಿ ಪ್ರಯಾಣಿಕರಾದ ತಾಲಿ ಮಾನೆಸ್, ಜ್ವಿಕಾ ಮಾನೆಸ್, ಯನಿವ್ ಹಯೋನ್, ಡಾ. ಶೋಟಾ ಮುಸಾಯೆವ್, ಅಸಾಫ್ ರಾಜ್ವಾನ್ ಮತ್ತು ಓರ್ ಪಾರ್ಡಿಲೋವ್ ಅವರಿಗೆ 'ನಾಗರಿಕ ಸಾಹಸ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ವಿಮಾನದ ಸಹ-ಪೈಲಟ್ (ಕೋ-ಪೈಲಟ್) ಕ್ಯಾಪ್ಟನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದನು. ವಿಮಾನವು ಇಸ್ರೇಲ್ ಸಮೀಪಿಸುತ್ತಿದ್ದಂತೆ ಕಾಕ್‌ಪಿಟ್ ಒಳಗೆ ಈ ಘಟನೆ ನಡೆದಿದ್ದು, ಇದರಿಂದ ವಿಮಾನವು ಕೆಲವೇ ಕ್ಷಣಗಳಲ್ಲಿ ಸಾವಿರಾರು ಅಡಿಗಳಷ್ಟು ಕೆಳಗೆ ಧುಮುಕಿತು.
ಕೂಡಲೇ ಎಚ್ಚೆತ್ತ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಧೈರ್ಯಪ್ರದರ್ಶಿಸಿ ಕಾಕ್‌ಪಿಟ್ ಪ್ರವೇಶಿಸಿ ಹಲ್ಲೆಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತದನಂತರ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಗಾಯಗೊಂಡ ಮುಖ್ಯ ಪೈಲಟ್ ಸ್ಮಿತ್ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾದರು,(ಏಜೆನ್ಸೀಸ್).