'ಜ್ಞಾನೇಶ್ ಇಟ್ಸ್​ ಡನ್​ ಬ್ರೋ ಟೈಮ್​ ಟು ರಿಸೈನ್'​; ಸಂಸತ್​ ಆವರಣದಿಂದ INDIA ಒಕ್ಕೂಟದಿಂದ ರ‍್ಯಾಲಿ, DMK-AAP ಸಂಸದರು ಗೈರು

'ಜ್ಞಾನೇಶ್ ಇಟ್ಸ್​ ಡನ್​ ಬ್ರೋ ಟೈಮ್​ ಟು ರಿಸೈನ್'​; ಸಂಸತ್​ ಆವರಣದಿಂದ INDIA ಒಕ್ಕೂಟದಿಂದ ರ‍್ಯಾಲಿ, DMK-AAP ಸಂಸದರು ಗೈರು
Published on: 
  • ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ

  • ರಾಜೀನಾಮೆ ನೀಡಿ ಎಂದು ಇಂಡಿಯಾ ಒಕ್ಕೂಟದಿಂದ ಒತ್ತಾಯ

  • ಸಂಸತ್ತಿನಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿ ನಿರ್ವಚನ ಸದನದವರೆಗೂ ರ‍್ಯಾಲಿ

'ಟೈಮ್​ ಟು ರಿಸೈನ್'​, 'ಜ್ಞಾನೇಶ್ ಇಟ್ಸ್​ ಡನ್​ ಬ್ರೋ', 'ವೋಟ್​ ಚೋರ್'​​​ ಎನ್ನುವ ಫಲಕವನ್ನು ಹಿಡಿದು ಮಂಗಳವಾರ ಅ.6ರಂದು ಇಂಡಿಯಾ ಒಕ್ಕೂಟದ ಸಂಸದರು ಸಂಸತ್ತಿನಿಂದ ರಾಜಧಾನಿಯಲ್ಲಿರುವ ಚುನಾವಣಾ ಆಯೋಗದ ಪ್ರಧಾನ ಕಚೇರಿ ನಿರ್ವಚನ ಸದನದವರೆಗೂ ತೆರಳಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದರು.

ರಾಜೀನಾಮೆಗೆ ಒತ್ತಾಯ

'ಪ್ರಜಾಪ್ರಭುತ್ವವನ್ನು ಉಳಿಸಿ', ಜ್ಞಾನೇಶ್ ಕುಮಾರ್​ ಅವರು ರಾಜೀನಾಮೆ ನೀಡಬೇಕು, ಮತಗಳ್ಳ ಜ್ಞಾನೇಶ್ ಕುಮಾರ್ ಬ್ಯಾನರ್​ ಹಿಡಿದು, ಇಂಡಿಯಾ ಒಕ್ಕೂಟದ ಸಂಸದರು ಸಂಸತ್​ ಭವನದಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯಾದ ನಿರ್ವಚನ ಸದನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಧರಣಿ ಕುಳಿತ ಸಂಸದರು

ಚುನಾವಣಾ ಆಯೋಗದ ಕಚೇರಿಗೆ ತೆರಳದಂತೆ ಆಕಾಶವಾಣಿ ಭವನ ಮತ್ತು ನೀತಿ ಆಯೋಗದ ಗೇಟ್ ಬಳಿ ಅವರನ್ನು ತಡೆದ ಹಿನ್ನೆಲೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಧರಣಿ ಕುಳಿತರು. ಅವರೊಂದಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಅಖಿಲೇಶ್ ಯಾದವ್​ ಸೇರಿ​ದಂತೆ ಹಲವರು ಇದ್ದರು.

ಡಿಎಂಕೆ, ಎಎಪಿ ಗೈರು

'ಇಂಡಿಯಾ' ಒಕ್ಕೂಟದ ಈ ಪ್ರತಿಭಟನಾ ಮೆರವಣಿಗೆಯಿಂದ ಪ್ರಮುಖ ವಿರೋಧ ಪಕ್ಷಗಳಾದ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷ ದೂರ ಉಳಿದಿವೆ ಎನ್ನಲಾಗಿದೆ.

ಬಿಗಿ ಭದ್ರತೆ

ಅರ್ಹ ಮತದಾರರನ್ನು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರನ್ನು ಕೈಬಿಡಲಾಗಿದೆ. ಅಕ್ರಮ ಮತ್ತು ಪಕ್ಷಪಾತ ನಡೆಯುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಶುಕ್ರವಾರದಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಚುನಾವಣಾ ಆಯೋಗದ ಕೇಂದ್ರ ಕಚೇರಿ ಬಳಿ ಬಿಗಿ ಭದ್ರತೆ ಆಯೋಜಿಸಲಾಗಿದೆ.

ಮೋಸದ ಆಯೋಗ ಎಂದ ಕಾಂಗ್ರೆಸ್​

ವಿಪಕ್ಷಗಳ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದವರೆಗೆ ಮತ್ತು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳವರೆಗೆ ಈ ವಿಷಯವನ್ನು ಜೀವಂತವಾಗಿಡಲು ರೋಡ್‌ಮ್ಯಾಪ್ ಸಿದ್ಧಪಡಿಸಿದೆ. ಸೋಮವಾರ ಸಭೆ ನಡೆಸಿರುವ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಮೋಸದ ಆಯೋಗ ಎಂದು ಕರೆಯಲು ಆರಂಭಿಸಿದೆ.

ಜ್ಞಾನೇಶ್ ಅಮಾನತಿಗೆ ಸುಪ್ರೀಂ ನಕಾರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮೇಲೆ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಜತೆಗೆ ಈ ವಿಚಾರ ಸಂಬಂಧ ಭಾರತೀಯ ಚುನಾವಣಾ ಆಯೋಗ ಸಿಇಸಿ ಜ್ಞಾನೇಶ್ ಕುಮಾರ್, ಇಬ್ಬರು ಚುನಾವಣಾ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿದೆ. ಚು. ಆಯೋಗದ ಸಾಂವಿಧಾನಿಕ ಅಧಿಕಾರಗಳನ್ನು ಸಿಇಸಿ ಏಕಪಕ್ಷೀಯವಾಗಿ ಚಲಾಯಿಸಬಹುದೇ ಎಂಬುದನ್ನು ನಿರ್ಧರಿಸುವ ಮೊದಲು ಆಯೋಗದ ಪ್ರತಿಕ್ರಿಯೆ ಅಗತ್ಯವಿದೆ. ಪತ್ರಿಕಾ ವರದಿ ಆಧರಿಸಿ ಆದೇಶ ಹೊರಡಿಸಲಾಗದೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net