ಮಸೂದೆಗೆ ಬೆಂಬಲಕ್ಕೆ ಪ್ರತಿಯಾಗಿ ಮೋದಿ ಸಂಪುಟದಲ್ಲಿ ಸುಪ್ರಿಯಾ ಸುಳೆಗೆ ಮಂತ್ರಿ ಸ್ಥಾನ? ಪವಾರ್ ಬಣದಿಂದ ಭಾರಿ ಚೌಕಾಶಿ! | NCP Delimitation Support

ಮೋದಿ ಸಂಪುಟದಲ್ಲಿ ಸುಪ್ರಿಯಾ ಸುಳೆಗೆ ಮಂತ್ರಿ ಸ್ಥಾನ?
ಮೋದಿ ಸಂಪುಟದಲ್ಲಿ ಸುಪ್ರಿಯಾ ಸುಳೆಗೆ ಮಂತ್ರಿ ಸ್ಥಾನ?
Published on: 

ಮುಂಬೈ: ಮುಂಬರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ನಿರ್ಧರಿಸಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP Delimitation Support) ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದಲ್ಲಿ ಅಧಿಕಾರ ಹಂಚಿಕೆಗಾಗಿ ದೊಡ್ಡ ಮಟ್ಟದಲ್ಲಿ ಚೌಕಾಶಿ ನಡೆಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಮತದಾನಕ್ಕೂ ಮುನ್ನವೇ ಒಪ್ಪಂದವನ್ನು ಅಂತಿಮಗೊಳಿಸಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಶರದ್ ಪವಾರ್ ಅವರ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುವಂತೆ ಎನ್‌ಸಿಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚುನಾವಣಾ ಅಕ್ರಮಗಳ ವಿರುದ್ಧ ಇಂಡಿಯಾ ಒಕ್ಕೂಟದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದ ಸುಪ್ರಿಯಾ ಸುಳೆ, ಕಳೆದ ಕೆಲವು ದಿನಗಳಿಂದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರದಲ್ಲೂ ಸಚಿವ ಸ್ಥಾನಗಳಿಗೆ ಪಟ್ಟು

ಮತ್ತೊಂದೆಡೆ, ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲೂ ಎರಡು ಸಂಪುಟ ಸ್ಥಾನಗಳಿಗಾಗಿ ಪವಾರ್ ಬಣ ಮಾತುಕತೆ ನಡೆಸುತ್ತಿದೆ. ಈಗಾಗಲೇ ಎನ್‌ಸಿಪಿಯ ಇನ್ನೊಂದು ಬಣವೂ ಈ ಸರ್ಕಾರದ ಭಾಗವಾಗಿದೆ. ಹೊಸ ಒಪ್ಪಂದದ ಪ್ರಕಾರ, ಹಿರಿಯ ನಾಯಕ ಜಯಂತ್ ಪಾಟೀಲ್ ಅವರಿಗೆ ಮಹತ್ವದ ಹಣಕಾಸು ಖಾತೆ ಸಿಗುವ ಸಾಧ್ಯತೆಯಿದ್ದು, ಮತ್ತೊಂದು ಸ್ಥಾನ ಜಿತೇಂದ್ರ ಅವ್ಹಾದ್ ಅವರಿಗೆ ದೊರೆಯುವ ನಿರೀಕ್ಷೆಯಿದೆ. ಇದರ ಜೊತೆಗೆ ಹಿರಿಯ ಸಂಸದರನ್ನು ಸಮಾಧಾನಪಡಿಸಲು ಎರಡು ರಾಜ್ಯ ಸಚಿವ (MoS) ಸ್ಥಾನಗಳಿಗೂ ಪಕ್ಷ ಬೇಡಿಕೆ ಇಟ್ಟಿದೆ.

ಆದರೆ, ಸುಪ್ರಿಯಾ ಸುಳೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಶರದ್ ಪವಾರ್ ಶಿಫಾರಸು ಮಾಡುತ್ತಿದ್ದಾರೆ ಎಂಬ ವರದಿಗಳನ್ನು ಸ್ವತಃ ಸುಳೆ ತಳ್ಳಿಹಾಕಿದ್ದು, ರಾಜ್ಯ ವಿಧಾನಸಭೆಯಲ್ಲಿ ತಮ್ಮ ಪಕ್ಷಕ್ಕೆ ಕೇವಲ 10 ಶಾಸಕರ ಬಲವಿದೆ ಎಂದು ಹೇಳಿರುವ ಅವರು, ಈ ವದಂತಿಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ.

2023ರಲ್ಲಿ ಸರ್ವಪಕ್ಷಗಳ ಬೆಂಬಲದೊಂದಿಗೆ ಷರತ್ತುಬದ್ಧವಾಗಿ ಅಂಗೀಕರಿಸಲಾದ ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಈ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ನೇರವಾಗಿ ಸಂಬಂಧಿಸಿದೆ. ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆಗೆ ಹಿನ್ನಡೆಯಾಗಿತ್ತು. ಇದೀಗ ಎನ್‌ಸಿಪಿ (ಶರದ್ ಬಣ) 8 ಲೋಕಸಭಾ ಸಂಸದರ ಬೆಂಬಲವು ಮಸೂದೆಯನ್ನು ಪಾಸ್ ಮಾಡಲು ಎನ್‌ಡಿಎಗೆ ನಿರ್ಣಾಯಕವಾಗಲಿದೆ.

Also Read
ಪ್ರಜಾಪ್ರಭುತ್ವ ನಾಶ ಮಾಡಿದವರ ಪಟ್ಟಿಯಲ್ಲಿ ಶರದ್ ಪವಾರ್ ಹೆಸರೂ ಇರುತ್ತೆ! ಮಸೂದೆಗೆ ಜೈ ಎಂದ ಎನ್​ಸಿಪಿ ವಿರುದ್ಧ 'ಕೈ' ಕೆಂಡಾಮಂಡಲ | Delimitation Bill
ಮೋದಿ ಸಂಪುಟದಲ್ಲಿ ಸುಪ್ರಿಯಾ ಸುಳೆಗೆ ಮಂತ್ರಿ ಸ್ಥಾನ?

ಕಾಂಗ್ರೆಸ್ ನಾಯಕರಿಗೆ ಶರದ್ ಪವಾರ್ ಹೇಳಿದ್ದೇನು?

ಸಂಸತ್ತಿನಲ್ಲಿ ಮಸೂದೆಗೆ ಔಪಚಾರಿಕ ಬೆಂಬಲ ನೀಡುವ ಮುನ್ನವೇ ಅಧಿಕಾರ ಹಂಚಿಕೆಯ ಸೂತ್ರ ಅಂತಿಮಗೊಳ್ಳಬೇಕು ಎಂಬುದು ಪಕ್ಷದ ಒಂದು ವರ್ಗದ ಅಭಿಪ್ರಾಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಶರದ್ ಪವಾರ್ ಅವರು ಈಗಾಗಲೇ ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಪಕ್ಷದ ಅನಿವಾರ್ಯತೆಯನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಎನ್‌ಸಿಪಿ ಪಕ್ಷದಲ್ಲಿ ಮತ್ತೊಂದು ವಿಭಜನೆಯನ್ನು ತಡೆಯಲು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದು ಅವರು ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಬೆಳವಣಿಗೆಗಳಿಗೆ ಪೂರಕವಾಗಿ ಜಿತೇಂದ್ರ ಅವ್ಹಾದ್ ಮತ್ತು ಸುಪ್ರಿಯಾ ಸುಳೆ ಈಗಾಗಲೇ ಸಾರ್ವಜನಿಕವಾಗಿ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಕ್ಷೇತ್ರಗಳ ಮರುವಿಂಗಡಣೆ ಅಗತ್ಯವಿದೆ ಎಂದು ಪವಾರ್ ಹಿಂದೆಯೇ ಹೇಳಿದ್ದರು ಎಂದು ಅವ್ಹಾದ್ ತಿಳಿಸಿದ್ದರೆ, ಎಲ್ಲಾ ರಾಜ್ಯಗಳಿಗೂ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವುದರಿಂದ ಯಾವ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ ಎಂದು ಸುಳೆ ಪ್ರತಿಪಾದಿಸಿದ್ದಾರೆ. ತಂದೆಯ ಅನಾರೋಗ್ಯದ ಕಾರಣ ನೀಡಿ ಸುಪ್ರಿಯಾ ಸುಳೆ ಶನಿವಾರದ ಇಂಡಿಯಾ ಒಕ್ಕೂಟದ ಸಭೆಗೆ ಗೈರಾಗಲಿದ್ದು, ಸೋಮವಾರ ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

ಕಾಂಗ್ರೆಸ್ ಆಕ್ರೋಶ!

ಎನ್‌ಸಿಪಿಯ ಈ ನಡೆಗೆ ಮಹಾರಾಷ್ಟ್ರ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕೇವಲ 10 ಶಾಸಕರಿದ್ದರೂ, ಕಾಂಗ್ರೆಸ್ (16 ಶಾಸಕರು) ಮತ್ತು ಶಿವಸೇನೆ-ಯುಬಿಟಿ (20 ಶಾಸಕರು) ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಶರದ್ ಪವಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದವು. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಹಿಂಜರಿಕೆಯಿಲ್ಲದೆ ಬೆಂಬಲ ನೀಡಿದ್ದರು. ಆದರೆ ಈಗ ಅದೇ ಪವಾರ್ ಬಣ ಬಿಜೆಪಿ ಮಸೂದೆಗೆ ಬೆಂಬಲ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಕಾಂಗ್ರೆಸ್ ಕಿಡಿಕಾರಿದೆ(ಏಜೆನ್ಸೀಸ್​).