<---Microsoft Clarity tracking tag-->

ಈ ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಯಾಗುತ್ತಿದೆ!...ಮಿತ್ರಪಕ್ಷದ ವಿರುದ್ಧವೇ ಕೇಂದ್ರ ಸಚಿವ ಪಾಸ್ವಾನ್ ಆಕ್ರೋಶ |Chirag Paswan

ನವದೆಹಲಿ: ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥರಾದ ಚಿರಾಗ್ ಪಾಸ್ವಾನ್ (Chirag Paswan) ಅವರು ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಪಡುವಂತಾಗಿದೆ ಎಂದಿದ್ದಾರೆ.
ಮಿತ್ರಪಕ್ಷದ ವಿರುದ್ಧವೇ ಕೇಂದ್ರ ಸಚಿವ ಪಾಸ್ವಾನ್ ಆಕ್ರೋಶ
ಮಿತ್ರಪಕ್ಷದ ವಿರುದ್ಧವೇ ಕೇಂದ್ರ ಸಚಿವ ಪಾಸ್ವಾನ್ ಆಕ್ರೋಶ
Published on: 

ನವದೆಹಲಿ: ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥರಾದ ಚಿರಾಗ್ ಪಾಸ್ವಾನ್ (Chirag Paswan) ಅವರು ಬಿಹಾರದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಕುರಿತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ಸರ್ಕಾರಕ್ಕೆ ಬೆಂಬಲ ನೀಡಲು ನಾಚಿಕೆಪಡುವಂತಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪಾಸ್ವಾನ್, ಪರಿಸ್ಥಿತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, ಅಪರಾಧಗಳು ಸಂಪೂರ್ಣವಾಗಿ ಹದ್ದುಮೀರಿ ಹೋಗಿರುವ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ ಪಾಸ್ವಾನ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.

ಪೊಲೀಸ್ ವಿರುದ್ಧ ಚಿರಾಗ್ ಪಾಸ್ವಾನ್ ವಾಗ್ದಾಳಿ

ಪೊಲೀಸ್ ಮತ್ತು ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ರಾಜ್ಯದ ಜನರನ್ನು ಸುರಕ್ಷಿತವಾಗಿಡುವುದು ಈಗ ಅವರ ಸಾಮರ್ಥ್ಯಕ್ಕೆ ಮೀರಿದ ಮಾತಾಗಿದೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರವನ್ನು ಮತ್ತೊಮ್ಮೆ ಆಗ್ರಹಿಸಿದ ಅವರು, ಇಂತಹ ಘಟನೆಗಳು ನಿರಂತರವಾಗಿ ಮುಂದುವರಿದರೆ ರಾಜ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಮತ್ತು ಸರ್ಕಾರ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿದೆ ಎಂದು ಎಚ್ಚರಿಸಿದರು. ಇಲ್ಲದಿದ್ದರೆ, ಬಿಹಾರ ಮತ್ತು ಅಲ್ಲಿನ ಜನರ ಜೀವದ ಜೊತೆ ಈ ರೀತಿ ಚೆಲ್ಲಾಟವಾಡುವುದು ರಾಜ್ಯವನ್ನು ತೀರಾ ಕೆಟ್ಟ ಪರಿಣಾಮದತ್ತ ಕೊಂಡೊಯ್ಯಬಹುದು ಎಂದು ಅವರು ಹೇಳಿದರು.

ಸಾಲು ಸಾಲು ಅಪರಾಧ ಕೃತ್ಯಗಳು!

ಮಹಿಳೆಯರ ಸುರಕ್ಷತೆ ಹಾಗೂ ಬಿಹಾರದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಿತ್ರಪಕ್ಷದ ಸರ್ಕಾರದ ವಿರುದ್ಧವೇ ಪಾಸ್ವಾನ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಜಮುಯಿಯಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯನ್ನು ತಡೆದು, ಅವರ ಮೇಲೆ ಹಲ್ಲೆ ನಡೆಸಿ, ಪುಂಡರ ಗುಂಪೊಂದು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿ ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದಾನೆ.

ಸಮಸ್ತಿಪುರದಲ್ಲೂ ಬಾಲಕಿಯೊಬ್ಬಳಿಗೆ ಬಹಿರಂಗವಾಗಿ ಕಿರುಕುಳ ನೀಡಿದ ಮತ್ತೊಂದು ಆರೋಪ ವರದಿಯಾಗಿದ್ದು, ವಿಡಿಯೋ ಹೊರಬಿದ್ದ ನಂತರ ನಾಲ್ವರನ್ನು ಬಂಧಿಸಲಾಗಿದೆ. ಬಂಕಾ ಜಿಲ್ಲೆಯ ಮಂದಾರ ಪರ್ವತದಿಂದ ಬಂದ ಮತ್ತೊಂದು ವಿಡಿಯೋ ಆಧರಿಸಿ ಪೊಲೀಸರು ಅಪರಿಚಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತಂಕ ಹೆಚ್ಚಿಸಿದ ಪಟನಾದ ಶೂಟೌಟ್!

ಇತ್ತೀಚೆಗೆ ಪಟನಾದಲ್ಲಿ ನಡೆದ ಗುಂಡಿನ ದಾಳಿಗಳೂ ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಲಭ್ಯವಿರುವ ಮಾಹಿತಿಯ ಪ್ರಕಾರ, ಮಾಜಿ ಕೌನ್ಸಿಲರ್ ಅನಿಲ್ ಯಾದವ್ ಅವರ ಮೇಲೆ ಸೆಪ್ಟೆಂಬರ್ 23 ರಂದು ದಾಳಿ ನಡೆಸಲಾಗಿತ್ತು, ಮತ್ತು ಎರಡು ದಿನಗಳ ನಂತರ ಆಟೋಮೊಬೈಲ್ ವರ್ಕ್‌ಶಾಪ್ ಮಾಲೀಕರೊಬ್ಬರ ಮೇಲೆ ಗುಂಡು ಹಾರಿಸಲಾಗಿತ್ತು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಾಸ್ವಾನ್ ಆಗ್ರಹಿಸಿದ್ದು, ಬಿಹಾರದ ಜನರ ಸುರಕ್ಷತೆಯನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ತೀವ್ರ ರಾಜಕೀಯ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರ ಈ ಹೇಳಿಕೆಗಳು ಬಂದಿದ್ದ ಸಿಎಂ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುವುದೋ ಕಾದು ನೋಡಬೇಕಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net