ಎನ್​ಡಿಎಗೆ ಶಶಿ ತರೂರ್​ ಶಭಾಷ್​​ಗಿರಿ...ನಿತೀಶ್​ ಸರ್ಕಾರದ ಬಗ್ಗೆ ಕಾಂಗ್ರೆಸ್​ನ ರೆಬೆಲ್​ ಸ್ಟಾರ್​ ಹೇಳಿದ್ದೇನು..? | Shashi Tharoor

Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
Published on
ಪಟನಾ: ಬಿಹಾರ ಸರ್ಕಾರದ ಮೂಲಭೂತಸೌಕರ್ಯಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೊದಲಿನದಿದ್ದಕ್ಕಿಂತ ಈಗ ರಾಜ್ಯ ತುಂಬಾ ಉತ್ತಮವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ನಳಂದ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಬಿಹಾರಕ್ಕೆ ಬಂದಿದ್ದ ವೇಳೆ ಎನ್​ಡಿಟಿವಿಯೊಂದಿಗೆ ಮಾತನಾಡಿದ ತರೂರ್​, ಮೊದಲಿನ ರಸ್ತೆಗಳಿಗೆ ಹೋಲಿಸಿದರೆ ಈಗ ತುಂಬಾ ಉತ್ತಮವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ರಾಜ್ಯ ಕಂಡಿದೆ, ಜನರು ತಡರಾತ್ರಿಯಲ್ಲೂ ಬೀದಿಗಳಲ್ಲಿ ತಿರುಗಾಡುವಂತಹ ವಾತಾವರಣ ನಿರ್ಮಾಣವಾಗಿದ್ದು, ಹಿಂದೆ ಈ ರೀತಿ ಇರಲಿಲ್ಲ ಎಂದರು.
ನಿತೀಶ್ ಕುಮಾರ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ತರೂರ್​, ನನ್ನನ್ನು ಇಲ್ಲಿ ರಾಜಕೀಯಕ್ಕೆ ಸೇರಿಸಬೇಡಿ. ಈ ಪ್ರಗತಿಯನ್ನು ನೋಡಿ ನನಗೆ ಖಂಡಿತವಾಗಿಯೂ ತುಂಬಾ ಸಂತೋಷವಾಗಿದೆ. ಬಿಹಾರದ ಜನರು ಮತ್ತು ಅವರ ಪ್ರತಿನಿಧಿಗಳು ಇದಕ್ಕೆ ಅರ್ಹರು ಎಂದು ಹೇಳಿದರು. ನಾಲ್ಕು ಬಾರಿ ಸಂಸದರಾಗಿರುವ ತರೂರ್, ಪ್ರಧಾನಿ ಮತ್ತು ಕೇಂದ್ರ ಸರ್ಕಾರವನ್ನು ಅನೇಕ ಬಾರಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ಕಾಂಗ್ರೆಸ್​ನ ಕೆಲ ನಾಯಕರಿಗೆ ಬಿಸಿ ತುಪ್ಪವಾಗಿದೆ. ಭಾರತಕ್ಕೆ ಉತ್ತಮ ಸೇವೆ ಸಲ್ಲಿಸುವ ಬಯಕೆಯನ್ನು ಮಾತ್ರ ತಮ್ಮ ಹೇಳಿಕೆಗಳು ಪ್ರತಿಬಿಂಬಿಸುತ್ತವೆ ಎಂದು ತರೂರ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.

ಹಿಜಾಬ್ ವಿವಾದದ​ ಬಗ್ಗೆ ಹೇಳಿದ್ದೇನು..?

ಹಿಜಾಬ್ ಸಂಬಂಧಿತ ವಿವಾದದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವರ್ತನೆಯನ್ನು ವಿರೋಧಿಸಿದ ಶಶಿ ತರೂರ್, ಇದು ಸರಿಯಾದ ನಡೆಯಲ್ಲ, ಯಾರೇ ಆಗಲಿ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.

ನಳಂದ ವಿಶ್ವವಿದ್ಯಾಲಯದ ನವೀಕರಣ

ಬಿಹಾರದ ನಳಂದ ವಿಶ್ವವಿದ್ಯಾಲಯದ ನವೀಕರಣ ಮತ್ತು ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಶ್ಲಾಘಿಸಿದ ಸಂಸದ ತರೂರ್​, ಇದು ನಮ್ಮ ರಾಷ್ಟ್ರಕ್ಕೆ ವಿದೇಶಾಂಗ ಸಚಿವಾಲಯದ ಅನೇಕ ಅಪ್ರಕಟಿತ ಕೊಡುಗೆಗಳಲ್ಲಿ ಹೆಚ್ಚಿನ ರೇಟಿಂಗ್‌ಗೆ ಅರ್ಹವಾದ ಅದ್ಭುತ ಸಾಧನೆ ಎಂದು ಕರೆದಿದ್ದು, ಸಾಹಿತ್ಯ ಮತ್ತು ವಿಚಾರಗಳನ್ನು ಚರ್ಚಿಸುವ ಸಂಪ್ರದಾಯವನ್ನು ಉತ್ತೇಜಿಸಲು ಒಂದು ಉತ್ತಮ ಅವಕಾಶ ಎಂದು ಕರೆದರು.
ವಿಶ್ವವಿದ್ಯಾಲಯದ ಆವರಣದ ಫೋಟೋಗಳನ್ನು ಹಂಚಿಕೊಂಡು ಅದರ ವಾಸ್ತುಶಿಲ್ಪ, ಪ್ರಶಾಂತತೆ ಮತ್ತು ಜ್ಞಾನವನ್ನು ಶ್ಲಾಘಿಸಿದ ನೀತಿ ಆಯೋಗದ ಮಾಜಿ ಅಧ್ಯಕ್ಷ ಅಮಿತಾಭ್ ಕಾಂತ್ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ತರೂರ್, ನಾನು ತುಂಬಾ ಪ್ರಭಾವಿತನಾಗಿದ್ದೆ, ಈ ಅದ್ಭುತ ಸಾಧನೆಗಾಗಿ ಡಾ. ಎಸ್. ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಶಶಿ ತರೂರ್, ಜ್ಞಾನವು ತರಗತಿ ಕೋಣೆಗಳಿಗೆ ಮಾತ್ರ ಸೀಮಿತವಾಗಿರಬಾರದು, ವಿಶ್ವವಿದ್ಯಾಲಯದ ಹೊರಗೆಯೂ ಇರಬೇಕು. ಸಾಹಿತ್ಯ ಉತ್ಸವವು ಸಾಹಿತ್ಯ ಮತ್ತು ವಿಚಾರಗಳನ್ನು ಚರ್ಚಿಸುವ ಮೂಲಕ ಈ ಸಂಪ್ರದಾಯವನ್ನು ಮುಂದುವರಿಸಲು ಒಂದು ಅವಕಾಶವಾಗಿದೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net