

ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಕುರಿತು ಚರ್ಚಿಸಲು ಇಂಡಿಯಾ ಒಕ್ಕೂಟದ ನಾಯಕರು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನು ಭೇಟಿಯಾಗುವ ಮುನ್ನವೇ, ಭಾನುವಾರ ಚೆನ್ನೈನಲ್ಲಿರುವ ಸ್ಟಾಲಿನ್ ನಿವಾಸದ ಹೊರಗೆ ಗೋ ಬ್ಯಾಕ್ ಕಾಂಗ್ರೆಸ್ (Go Back Congress) ಎಂಬ ಘೋಷಣೆಗಳಿರುವ ಪೋಸ್ಟರ್ಗಳು ಕಾಣಿಸಿಕೊಂಡಿವೆ.
ಸಾಮಾಜಿಕ ಜಾಲತಾಣದಲ್ಲಿ ಸ್ಟಾಲಿನ್ ನಿವಾಸದ ಹೊರಗಿನ ದೃಶ್ಯಗಳು ಹರಿದಾಡುತ್ತಿದ್ದು, ಯುವತಿಯೊಬ್ಬಳು ಗೋ ಬ್ಯಾಕ್ ಕಾಂಗ್ರೆಸ್ ಬರಹ ಹಿಡಿದು ನಿಂತಿರುವುದು ಈ ದೃಶ್ಯಗಳಲ್ಲಿ ಕಂಡುಬಂದಿದೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ, ಪಕ್ಷದ ನಿಲುವನ್ನು ಬದಲಿಸುವಂತೆ ಮನವೊಲಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ವಿರೋಧ ಪಕ್ಷಗಳ ನಿಯೋಗವು ಶೀಘ್ರದಲ್ಲೇ ಸ್ಟಾಲಿನ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಲಿದೆ ಎನ್ನಲಾಗಿದ್ದು, ಒಕ್ಕೂಟದ ನಾಯಕರ ಈ ಮಹತ್ವದ ಸಭೆಗೂ ಮುನ್ನವೇ ಸ್ಟಾಲಿನ್ ನಿವಾಸದ ಬಳಿ ಇಂತಹ ಪೋಸ್ಟರ್ಗಳು ಪ್ರತ್ಯಕ್ಷವಾಗಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೂ ಮುನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಎಂ ಕೆ ಸ್ಟಾಲಿನ್ ಅವರನ್ನು ಬ್ರದರ್ ಸ್ಟಾಲಿನ್ ಎಂದು ಸಂಬೋಧಿಸಿದ್ದ ರಾಹುಲ್ ಗಾಂಧಿ, ಲೋಕಸಭೆಯನ್ನು 850 ಸ್ಥಾನಗಳಿಗೆ ವಿಸ್ತರಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಹಾನಿಯಾಗುತ್ತದೆ ಮತ್ತು ಬಿಜೆಪಿ-ಆರ್ಎಸ್ಎಸ್ಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣಾ ನಕ್ಷೆಯನ್ನು ಮರುರೂಪಿಸಲು ಅವಕಾಶ ಸಿಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಟಾಲಿನ್, ತಮಿಳುನಾಡಿನ ಹಿತಾಸಕ್ತಿಗಳು ಯಾವಾಗಲೂ ನಮ್ಮ ಮೊದಲ ಆದ್ಯತೆಯಾಗಿರುತ್ತವೆ, ಆದ್ದರಿಂದ ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಸೂದೆಯ ಕುರಿತು ಮಿತ್ರಪಕ್ಷಗಳ ನಡುವೆ ಉಂಟಾಗಿರುವ ಈ ಭಿನ್ನಮತವು ಸಂಸತ್ತಿನ ವಿಶೇಷ ಅಧಿವೇಶನದ ಮುನ್ನ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪರೀಕ್ಷೆಗೆ ಒಡ್ಡಿದೆ, ಮುಂದಿನ ಎರಡು ದಿನಗಳಲ್ಲಿ ಏನಾಗಲಿದೆಯೋ ಕಾದು ನೋಡಬೇಕು(ಏಜೆನ್ಸೀಸ್).