ತಿರುಮಲಕ್ಕೆ ಹೋಗುತ್ತಿದ್ದ 'ತುಪ್ಪದ ಟ್ಯಾಂಕರ್' ಪಲ್ಟಿ! ಚಾಲಕ ಪಾರಾದ ಬೆನ್ನಲ್ಲೇ ತುಪ್ಪದ ಹಿಂದೆ ಬಿದ್ದ ಜನ.. Ghee Tanker flip

Ghee Tanker flip (ಚಿತ್ರ X)
Ghee Tanker flip (ಚಿತ್ರ X)
Published on
ಕಡಪ: ತಿರುಮಲ ದೇವಸ್ಥಾನಕ್ಕೆ ತುಪ್ಪ ಸಾಗಿಸುತ್ತಿದ್ದ ಟ್ಯಾಂಕರ್​ (Ghee Tanker flip) ಭಾನುವಾರ ರಾತ್ರಿ (ಮಾ.08) ವೈಎಸ್‌ಆರ್ ಕಡಪ ಜಿಲ್ಲೆಯ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆ ಬಳಿ ಅಪಘಾತಕ್ಕೀಡಾಗಿದ್ದು, ಸಾವಿರಾರು ಲೀಟರ್​ ತುಪ್ಪ ರಸ್ತೆ ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಪುಣೆಯಿಂದ ತಿರುಮಲಕ್ಕೆ ಪ್ರಯಾಣಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್​ ಪಲ್ಟಿಯಾಗಿದೆ. ಟ್ಯಾಂಕರ್ ಉರುಳಿಬಿದ್ದ ರಭಸಕ್ಕೆ ಅದರ ಮೇಲ್ಭಾಗ ಜಖಂಗೊಂಡಿದ್ದು, ರಸ್ತೆ ತುಂಬಾ ತುಪ್ಪ ಹರಿಯಲಾರಂಭಿಸಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಸ್ಥಳೀಯರು ಬಕೆಟ್​ ಮತ್ತು ಪಾತ್ರೆಗಳೊಂದಿಗೆ ಆಗಮಿಸಿದ್ದು, ವಾಹನದಿಂದ ಸೋರುತ್ತಿರುವ ತುಪ್ಪವನ್ನು ಸಂಗ್ರಹಿಸಿ  ಮನೆಗೆ ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋವೊಂದು ತೋರಿಸಿದೆ.
ಪರಿಸ್ಥಿತಿ ಉಲ್ಬಣವಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಜನಸಂದಣಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. 
ಅದೃಷ್ಟವಶಾತ್​ ಚಾಲಕ ಮತ್ತು ಕ್ಲೀನರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net