ರೋಹಿತ್ ಡಗೌಟ್‌ನಲ್ಲಿ ಕೂರುವ ಆಟಗಾರನಲ್ಲ!; ಮುಂಬೈ ಚಾಂಪಿಯನ್ ಆಗಲು ಚೋಪ್ರಾ ನೀಡಿದ ಆ 'ಮಾಸ್ಟರ್ ಪ್ಲಾನ್' ಇಲ್ಲಿದೆ | Rohit Sharma

Rohit Sharma | ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ
Rohit Sharma | ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ
Published on
ಮುಂಬೈ: ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಫಿಟ್‌ನೆಸ್ ಮತ್ತು ಮುಂಬರುವ ಐಪಿಎಲ್ ಕುರಿತು ಖ್ಯಾತ ವಿಶ್ಲೇಷಕ ಆಕಾಶ್ ಚೋಪ್ರಾ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದು, ಈ ಬಾರಿಯ ಐಪಿಎಲ್‌ನಲ್ಲಿ ಹಿಟ್​​ಮ್ಯಾನ್​​ ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ, ಮೈದಾನದಲ್ಲಿ ನಾಯಕ ಹಾರ್ದಿಕ್ ಪಾಂಡ್ಯಗೆ ಶಕ್ತಿಯಾಗಿ ನಿಲ್ಲಲಿದ್ದಾರೆ ಎಂದು ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಚೋಪ್ರಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ರೋಹಿತ್ ಶರ್ಮಾ ತಮ್ಮ ಫಿಟ್‌ನೆಸ್ ಕಡೆಗೆ ತುಂಬಾ ಗಮನ ಹರಿಸುತ್ತಿದ್ದು, ಅವರ ಮುಂದಿನ ಪ್ರಮುಖ ಗುರಿ 2027ರ ಏಕದಿನ ವಿಶ್ವಕಪ್. ರೋಹಿತ್ ಸದ್ಯ ಅತ್ಯಂತ ಫಿಟ್ ಮತ್ತು ಬಲಿಷ್ಠವಾಗಿ ಕಾಣುತ್ತಿದ್ದಾರೆ. ಅವರು ಪೂರ್ಣ ಫಾರ್ಮ್‌ಗೆ ಮರಳಲು ಈ ಐಪಿಎಲ್ ವೇದಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ಪಾತ್ರದ ಬಗ್ಗೆ ಚೋಪ್ರಾ ಹೇಳಿದ್ದೇನು..?

ಕಳೆದ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ಹೆಚ್ಚಾಗಿ ಇಂಪ್ಯಾಕ್ಟ್ ಸಬ್ (Impact Sub) ಆಗಿ ಬಳಸಿಕೊಂಡಿತ್ತು. ಅಂದರೆ ಅವರು ಕೇವಲ ಬ್ಯಾಟಿಂಗ್‌ಗೆ ಮಾತ್ರ ಸೀಮಿತವಾಗಿದ್ದರು. ಆದರೆ, ಈ ಬಾರಿ ಆ ತಪ್ಪು ಮರುಕಳಿಸಬಾರದು ಎಂದು ಚೋಪ್ರಾ ಎಚ್ಚರಿಸಿದ್ದಾರೆ.
ಓಪನರ್ ಆದವರು 20 ಓವರ್ ಡಗೌಟ್‌ನಲ್ಲಿ ಕುಳಿತು ಪಂದ್ಯ ನೋಡಿ ನಂತರ ಬ್ಯಾಟಿಂಗ್‌ಗೆ ಬರುವ ಅಭ್ಯಾಸ ಹೊಂದಿಲ್ಲ. ಅವರು ಮೈದಾನದಲ್ಲೇ ಇದ್ದು ಫೀಲ್ಡಿಂಗ್ ಮಾಡುತ್ತಾ ಆಟದ ವೇಗಕ್ಕೆ ಒಗ್ಗಿಕೊಳ್ಳಬೇಕು. ರೋಹಿತ್ ಈಗ ಪೂರ್ಣ ಫಿಟ್ ಆಗಿರುವುದರಿಂದ ಪಂದ್ಯದ ಎಲ್ಲಾ 40 ಓವರ್‌ಗಳ ಕಾಲ ಮೈದಾನದಲ್ಲಿರಬೇಕು ಎಂದು ಚೋಪ್ರಾ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ರೋಹಿತ್ ಮಾರ್ಗದರ್ಶನ

ರೋಹಿತ್ ಅವರಂತಹ ದಿಗ್ಗಜ ನಾಯಕ ಮೈದಾನದಲ್ಲಿದ್ದರೆ, ಹಾರ್ದಿಕ್ ಪಾಂಡ್ಯಗೆ ಕಠಿಣ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ. ನಾಯಕನಿಗೆ ಬೆಂಬಲ ಬೇಕಾದಾಗ ರೋಹಿತ್​ರ ಅನುಭವ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತದೆ. ಮುಂಬೈ ಇಂಡಿಯನ್ಸ್ ಅವರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಾಗ ಮಾತ್ರ ತಂಡ ಯಶಸ್ವಿಯಾಗಲು ಸಾಧ್ಯ ಎನ್ನುವುದು ಚೋಪ್ರಾ ಅಭಿಪ್ರಾಯ.
ರೋಹಿತ್ ಶರ್ಮಾರ ಪ್ರಸ್ತುತ ಫಿಟ್‌ನೆಸ್ ಮತ್ತು ಆತ್ಮವಿಶ್ವಾಸ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಹೊಸ ಆಶಾವಾದ ಮೂಡಿಸಿದ್ದು, ಐದು ಬಾರಿ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ಕೇವಲ 12ನೇ ಆಟಗಾರನಾಗದೆ, ತಂಡದ ಮುಖ್ಯ ಶಕ್ತಿಯಾಗಿ ಕಣಕ್ಕಿಳಿಯಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಆಶಯವೂ ಆಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net