

ನವದೆಹಲಿ: ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಬುಧವಾರ(ಅ. 08) ಇಂಡಿಯಾ ಮೈತ್ರಿಕೂಟ ನಡೆಸಿದ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಿರುದ್ಧ ದೆಹಲಿ ಪೊಲೀಸರು ಎರಡನೇ ಬಾರಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ(ಅ. 06) ಇಂಡಿಯಾ ಬ್ಲಾಕ್ ನಡೆಸಿದ ಪ್ರತಿಭಟನೆಯ ಮೆರವಣಿಗೆ ಸಂದರ್ಭದಲ್ಲಿ ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಇಬ್ಬರು ನಾಯಕರು ಸೇರಿ ಇತರೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಅದಾಗಿ ಎರಡು ದಿನಗಳ ಬಳಿಕ ಇಂದು ಎರಡನೇ ಎಫ್‌ಐಆರ್ ದಾಖಲಿಸಿದ್ದಾರೆ.
ಜನಪಥ್‌ನಲ್ಲಿರುವ ದಕ್ಷಿಣ ಭಾರತೀಯ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಬಳಿಕ ಇಂಡಿಯಾ ಕೂಟದ ನಾಯಕರು ಜಂತರ್ ಮಂತರ್‌ನಲ್ಲಿ ಅನಿರೀಕ್ಷಿತ ಧರಣಿ ನಡೆಸಲು ಬಸ್‌ಗಳಲ್ಲಿ ತೆರಳುವಾಗ ಪೊಲೀಸರು ಅವರನ್ನು ತಡೆದರು. ರಾಹುಲ್ ಗಾಂಧಿ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಿಯಾಂಕಾ ಗಾಂಧಿ ಮತ್ತು ಇತರ ಮಹಿಳಾ ಮುಖಂಡರು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ರಸ್ತೆಯಲ್ಲಿ ಮಲಗಿದ್ದರು. ಎಲ್ಲರನ್ನು ಪೊಲೀಸರ ಬಲವಂತವಾಗಿ ಎಳೆದುಕೊಂಡು ಪೊಲೀಸ್ ಬಸ್‌ಗಳಿಗೆ ಕರೆದೊಯ್ಯಲಾಯಿತು. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಘರ್ಷಣೆ ನಡೆಯಿತು.
ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್, ಪ್ರಿಯಾಂಕಾ, ಹಲವಾರು ಸಂಸದರು ಮತ್ತು ನಾಯಕರು ಸೇರಿದಂತೆ ಒಟ್ಟು 91 ಜನರನ್ನು ಬಂಧಿಸಿದ್ದು, ನಂತರ ಬಿಡುಗಡೆ ಮಾಡಲಾಯಿತು. ಪ್ರತಿಭಟನಾಕಾರರಲ್ಲಿ ಕಾಂಗ್ರೆಸ್, ಟಿಎಂಸಿ, ಸಿಪಿಐ-ಎಂ, ಸಿಪಿಐ, ಆರ್‌ಜೆಡಿ, ಐಯುಎಂಎಲ್ ಮತ್ತು ಇತರ ಕೆಲವು ಪಕ್ಷಗಳ ಸಂಸದರು ಭಾಗವಹಿಸಿದ್ದರು.
ಇನ್ನೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ಕಾಂಗ್ರೆಸ್ ನಾಯಕರಲ್ಲದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವವರ ಪಾತ್ರವನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).