ಒಂದು ರಾತ್ರಿಯಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರ: ರಾಹುಲ್ ಗಾಂಧಿ ವಿಚಾರದಲ್ಲಿ ಡಿಎಂಕೆ ಹೊಸ ವರಸೆ! | DMK U-Turn

DMK U-Turn: ಮಂಗಳವಾರ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕಡೆಯಿಂದ ವಾಗ್ದಾಳಿಗೆ ಗುರಿಯಾಗಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬುಧವಾರದ ವೇಳೆಗೆ ಅಚ್ಚರಿಯ ರೀತಿಯಲ್ಲಿ ಅದೇ ಪಕ್ಷದ ಸಂಪೂರ್ಣ ಬೆಂಬಲವನ್ನು ಗಳಿಸಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.
ರಾಹುಲ್ ಗಾಂಧಿ ವಿಚಾರದಲ್ಲಿ ಡಿಎಂಕೆ ಹೊಸ ವರಸೆ!
ರಾಹುಲ್ ಗಾಂಧಿ ವಿಚಾರದಲ್ಲಿ ಡಿಎಂಕೆ ಹೊಸ ವರಸೆ!
Published on: 

DMK U-Turn: ಮಂಗಳವಾರ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಕಡೆಯಿಂದ ವಾಗ್ದಾಳಿಗೆ ಗುರಿಯಾಗಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬುಧವಾರದ ವೇಳೆಗೆ ಅಚ್ಚರಿಯ ರೀತಿಯಲ್ಲಿ ಅದೇ ಪಕ್ಷದ ಸಂಪೂರ್ಣ ಬೆಂಬಲವನ್ನು ಗಳಿಸಿರುವುದು ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದೆ.

ಚುನಾವಣಾ ಆಯೋಗದ ವಿವಾದಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಡಿಎಂಕೆ ವಕ್ತಾರ ಟಿ ಕೆ ಎಸ್ ಇಳಂಗೋವನ್, ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಪ್ರಜಾಪ್ರಭುತ್ವ ವಿರೋಧಿಯಾಗಿದ್ದರೆ ಚುನಾವಣೆ ಹೇಗೆ ನ್ಯಾಯಸಮ್ಮತವಾಗಲು ಸಾಧ್ಯ..? ಅವರನ್ನು ಕೂಡಲೇ ವಜಾಗೊಳಿಸಬೇಕು. ಸರ್ಕಾರದ ತಪ್ಪುಗಳ ವಿರುದ್ಧ ಹೋರಾಡುವುದು ನಾಗರಿಕರ ಹಕ್ಕು, ನಿನ್ನೆ ರಾಹುಲ್ ಗಾಂಧಿ ಮಾಡಿದ್ದೂ ಅದೇ. ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷದ ನಾಯಕರು ಪ್ರತಿಭಟಿಸುವುದು ಈ ಸರ್ಕಾರ ಇಷ್ಟವಾಗುತ್ತಿಲ್ಲ ಎಂದಿದ್ದಾರೆ.

ತಮಿಳುನಾಡಿನಲ್ಲಿ ಮತದಾರರ ಹೆಸರುಗಳ ಡಿಲೀಟ್​ ಮಾಡಿರುವ ಕುರಿತಾಗಿ ರಾಹುಲ್ ಗಾಂಧಿ ಮೌನವನ್ನು ಪ್ರಶ್ನಿಸಿ ಡಿಎಂಕೆ ನಾಯಕರು ಕಾಂಗ್ರೆಸ್​ ನಾಯಕರನ್ನು ಟೀಕಿಸಿದ್ದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ.

ಪ್ರತಿಯೊಂದು ಎಫ್‌ಐಆರ್ ನನಗೆ ಮೆಡಲ್ ಇದ್ದಂತೆ ಎಂದ ರಾಹುಲ್​

ತಮ್ಮ ಮತ್ತು ಇತರೆ ವಿರೋಧ ಪಕ್ಷದ ಸಂಸದರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು ಯಾವುದೇ ರೀತಿಯಲ್ಲೂ ವಿಚಲಿತಗೊಳಿಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್​, ತಮ್ಮ ಮೇಲೆ ಈಗಾಗಲೇ 45 ಎಫ್‌ಐಆರ್‌ಗಳು ದಾಖಲಾಗಿದ್ದು, ಈ ಸಂಖ್ಯೆಯು 100 ತಲುಪಬೇಕು ಮತ್ತು ಅವೆಲ್ಲಾ ನನಗೆ ಪದಕಗಳಿದ್ದಂತೆ ಎಂದಿದ್ದಾರೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಇಂಡಿಯಾ ಮೈತ್ರಿಕೂಟದಿಂದ ಧರಣಿ ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ನಿನ್ನೆ ಅವಮಾನ, ಇಂದು ಸನ್ಮಾನ!

ಮಂಗಳವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ತಮಿಳುನಾಡಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಮಾಡಲಾದ ಮತದಾರರ ಕಡಿತದ ಕುರಿತು ರಾಹುಲ್ ಗಾಂಧಿ ಅವರ ನಿಲುವನ್ನು ಪ್ರಶ್ನಿಸಿದ್ದರು. ಚುನಾವಣಾ ಆಯೋಗದ ವಿರುದ್ಧದ ವ್ಯಾಪಕ ಅಭಿಯಾನಕ್ಕೆ ಸಿಕ್ಕಿದ ಮಹತ್ವ ರಾಜ್ಯದಲ್ಲಿ ಸಿಕ್ಕಿಲ್ಲ ಯಾಕೆ ಎಂದು ಪ್ರಶ್ನಿಸುವ ಮೂಲಕ, ಕಾಂಗ್ರೆಸ್ ನಾಯಕ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಅಣ್ಣಾದೊರೈ ಆರೋಪಿಸಿದ್ದರು.

ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಮಿಳುನಾಡಿನಲ್ಲಿ ಲಕ್ಷಾಂತರ ಮತದಾರರನ್ನು ಕೈಬಿಡಲಾಗಿದೆ ಎಂದು ಡಿಎಂಕೆ ಆರೋಪಿಸಿದೆ. ಜ್ಞಾನೇಶ್ ಕುಮಾರ್ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಆರಂಭಿಸುವ ಕಾರ್ಯತಂತ್ರ ರೂಪಿಸಲು ಕಳೆದ ವಾರ ನಡೆದಿದ್ದ ಇಂಡಿಯಾ ಮೈತ್ರಿಕೂಟದ ಸಭೆಗೂ ಡಿಎಂಕೆ ನಾಯಕರು ಹಾಜರಾಗಿರಲಿಲ್ಲ. ಆದರೂ ಈ ವಿಚಾರದಲ್ಲಿ ತಾವು ಹೋರಾಟವನ್ನು ಬೆಂಬಲಿಸುವುದಾಗಿ ಮತ್ತು ವಿಪಕ್ಷ ಮೈತ್ರಿಕೂಟದೊಂದಿಗೆ ನಿಲ್ಲುವುದಾಗಿ ಡಿಎಂಕೆ ಮುಖಂಡರು ಹೇಳಿದ್ದರು.

ಡಿಎಂಕೆ ನಾಯಕರ ಈ ಹೇಳಿಕೆಗೆ ರಾಹುಲ್ ಗಾಂಧಿ ಅಥವಾ ಅವರ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ದಶಕಗಳಷ್ಟು ಹಳೆಯದಾದ ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುರಿದುಬಿದ್ದಿತ್ತು. ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ನೀಡಿತ್ತು. ಈ ಮೂಲಕ ತನ್ನ ದೀರ್ಘಕಾಲದ ಮಿತ್ರಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡಿತು. ಇದು ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ತೀವ್ರ ಕಹಿ ಬೆಳವಣಿಗೆಗೆ ಕಾರಣವಾಗಿತ್ತು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net