ಬಂಗಾಳದಲ್ಲಿ ದೀದಿ ಕೋಟೆ ಧೂಳೀಪಟ! ಕಮ್ಯುನಿಸ್ಟ್ ಮಣ್ಣಲ್ಲಿ ಕೇಸರಿ ಅಲೆ ಎದಿದ್ದೇಗೆ! ಭದ್ರಲೋಕ್’ ಸಮುದಾಯ ಮೌನವಾಗಿ ಮಮತಾಗೆ ಶಾಕ್ ಕೊಟ್ಟಿದ್ದೆಲ್ಲಿ? How BJP won West Bengal

ಬಂಗಾಳದಲ್ಲಿ ದೀದಿ ಕೋಟೆ ಧೂಳೀಪಟ! ಕಮ್ಯುನಿಸ್ಟ್ ಮಣ್ಣಲ್ಲಿ ಕೇಸರಿ ಅಲೆ ಎದಿದ್ದೇಗೆ! ಭದ್ರಲೋಕ್’ ಸಮುದಾಯ ಮೌನವಾಗಿ ಮಮತಾಗೆ ಶಾಕ್ ಕೊಟ್ಟಿದ್ದೆಲ್ಲಿ?
ಬಂಗಾಳದಲ್ಲಿ ದೀದಿ ಕೋಟೆ ಧೂಳೀಪಟ! ಕಮ್ಯುನಿಸ್ಟ್ ಮಣ್ಣಲ್ಲಿ ಕೇಸರಿ ಅಲೆ ಎದಿದ್ದೇಗೆ! ಭದ್ರಲೋಕ್’ ಸಮುದಾಯ ಮೌನವಾಗಿ ಮಮತಾಗೆ ಶಾಕ್ ಕೊಟ್ಟಿದ್ದೆಲ್ಲಿ?
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭಾರಿ ಐತಿಹಾಸಿಕ ಸ್ಥಿತ್ಯಂತರವೊಂದು ಸಂಭವಿಸಿದೆ. ದಶಕಗಳಿಂದ ಧರ್ಮ ಆಧಾರಿತ ರಾಜಕೀಯವನ್ನು ತಿರಸ್ಕರಿಸುತ್ತಾ, ಸೆಕ್ಯುಲರ್ ಮತ್ತು ಎಡಪಂಥೀಯ ಸಿದ್ಧಾಂತಗಳಿಗೆ ಬೆನ್ನೆಲುಬಾಗಿ ನಿಂತಿದ್ದ ಬಂಗಾಳದ ಪ್ರಬುದ್ಧ ಮಧ್ಯಮ ವರ್ಗ ಸಮುದಾಯವು ಈ ಬಾರಿ ಬಿಜೆಪಿಯತ್ತ ವಾಲಿ(How BJP won West Bengal) ಮೌನ ಕ್ರಾಂತಿ ಸೃಷ್ಟಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಜಯಭೇರಿ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆಯನ್ನು ಪುಡಿಪುಡಿ ಮಾಡಿದೆ.
ಬಂಗಾಳದ ಒಟ್ಟು 294 ವಿಧಾನಸಭಾ ಸೀಟುಗಳ ಪೈಕಿ ಭರ್ಜರಿ 208 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಅಧಿಕಾರದಲ್ಲಿದ್ದ ಟಿಎಂಟಿ ಕೇವಲ 80 ಸ್ಥಾನಗಳಿಗೆ ಬಂದು ತಲುಪಿದೆ. ಈ ಚುನಾವಣೆಯ ಅತ್ಯಂತ ರೋಚಕ ತಿರುವೆಂದರೆ, ಕೋಲ್ಕತ್ತಾ ಮತ್ತು ಅದರ ಸುತ್ತಮುತ್ತಲಿನ ಪ್ರೆಸಿಡೆನ್ಸಿ ವಲಯದ 5 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ತೃಣಮೂಲ ಕಾಂಗ್ರೆಸ್‌ನ ಪರಮ ಭದ್ರಕೋಟೆಯಾಗಿದ್ದ ರಶ್‌ಬೆಹಾರಿ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಸ್ವಪನ್ ದಾಸ್‌ಗುಪ್ತಾ ಅವರು ದಾಖಲಿಸಿದ ಗೆಲುವು, ಬಂಗಾಳದ ಮತದಾರರ ಮನಸ್ಥಿತಿ ಹೇಗೆ ಬದಲಾಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಹಾಗಾದರೆ, ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಬಂಗಾಳದ ಮಣ್ಣಿಗೆ ಪರಕೀಯ ಎಂದು ಭಾವಿಸಿದ್ದ ಬುದ್ಧಿಜೀವಿಗಳ ಜಗತ್ತು ಒಮ್ಮೆಲೇ ಕೇಸರಿ ಪಕ್ಷವನ್ನು ಒಪ್ಪಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಈ ರಾಜಕೀಯ ಬದಲಾವಣೆಯ ಹಿಂದಿನ ಪ್ರಮುಖ ಕಾರಣಗಳ ವಿವರ ಇಲ್ಲಿದೆ.

ಯಾರು ಈ 'ಭದ್ರಲೋಕ್'?

ಬಂಗಾಳದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಗಮನಿಸಿದರೆ ಭದ್ರಲೋಕ್ ಎಂಬ ಪದಕ್ಕೆ ವಿಶೇಷ ಗೌರವವಿದೆ. ಬ್ರಿಟಿಷರ ಕಾಲದ ಜಮೀನ್ದಾರಿ ಪದ್ಧತಿಯಿಂದ ಹೊರಹೊಮ್ಮಿದ, ಇಂಗ್ಲಿಷ್ ಶಿಕ್ಷಣ ಪಡೆದ, ಪ್ರಗತಿಪರ ಆಲೋಚನೆ ಉಳ್ಳ ಮೇಲ್ವರ್ಗದ ಹಾಗೂ ಮಧ್ಯಮ ವರ್ಗದ ಬಂಗಾಳಿ ಜನರನ್ನು ಹೀಗೆ ಕರೆಯಲಾಗುತ್ತದೆ. ಅಲ್ಲದೆ, ಬಂಗಾಳದ ಸಾಹಿತ್ಯ, ಸಿನಿಮಾ, ನಾಟಕ ಹಾಗೂ ಕಲೆಗಳನ್ನು ಜೀವಂತವಾಗಿಟ್ಟಿರುವ ಈ ವರ್ಗವೇ ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವ ದಿಕ್ಸೂಚಿಯಾಗಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್‌ನ ಜಾತ್ಯತೀತ ನಿಲುವು ಹಾಗೂ ನಂತರದ 34 ವರ್ಷಗಳ ಎಡಪಂಥೀಯರ (ಸಿಪಿಎಂ) ಆಡಳಿತಕ್ಕೆ ಇವರೇ ಪ್ರಮುಖ ಶಕ್ತಿಯಾಗಿದ್ದರು. ಮಮತಾ ಅಧಿಕಾರಕ್ಕೆ ಬಂದಾಗಲೂ ಈ ವರ್ಗದ ಒಂದು ಭಾಗ ಅವರ ಕೈ ಹಿಡಿದಿತ್ತು. ಆದರೆ ಈಗ ಇದೇ ವರ್ಗವು ಬಿಜೆಪಿಯ ಸಿದ್ಧಾಂತಕ್ಕೆ ಜೈ ಎಂದಿದೆ.

ಉದ್ಯೋಗ ನಷ್ಟ ಮತ್ತು ಯುವ ಪೀಳಿಗೆಯ ಹತಾಶೆ

ಇವತ್ತಿನ ದಿನಗಳಲ್ಲಿ ಬಂಗಾಳ ಅನಾಥಾಶ್ರಮದಂತಾಗಿದೆ. ಇಲ್ಲಿ ಯುವಕರಿಗೆ ಯಾವುದೇ ಭವಿಷ್ಯವಿಲ್ಲ ಎಂಬುದು ಅಲ್ಲಿನ ಸ್ಥಳೀಯ ಯುವಕರ ಅಳಲು. ಕಳೆದ 15 ವರ್ಷಗಳ ಮಮತಾ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳು ಬರಲಿಲ್ಲ. ಮಾಹಿತಿ ತಂತ್ರಜ್ಞಾನ (IT) ಅಥವಾ ಸೇವಾ ವಲಯದಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಲಿಲ್ಲ. 2012 ರಿಂದ 2020 ರ ನಡುವೆ ದೇಶದ ಕೈಗಾರಿಕಾ ಪ್ರಗತಿ ದರ ಶೇ. 7.7 ರಷ್ಟಿದ್ದರೆ, ಬಂಗಾಳದಲ್ಲಿ ಇದು ಕೇವಲ ಶೇ. 6.6 ಕ್ಕೆ ಕುಸಿದಿತ್ತು.
ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಲಕ್ಷಾಂತರ ಪದವೀಧರ ಬಂಗಾಳಿ ಯುವಕರು ದಿಲ್ಲಿ, ಮುಂಬೈ, ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗಬೇಕಾಯಿತು. ಬಂಗಾಳದಲ್ಲೇ ಉಳಿದುಕೊಂಡವರಿಗೆ ಅತ್ಯಂತ ಕಡಿಮೆ ಸಂಬಳದ ಕೆಲಸಗಳು ಮಾತ್ರ ಸಿಗುತ್ತಿದ್ದವು. ಅಲ್ಲದೆ, ಈ ಆರ್ಥಿಕ ಹಿಂಜರಿತ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಮಧ್ಯಮ ವರ್ಗದ ಕುಟುಂಬಗಳು, ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮತ್ತು ಉದ್ಯೋಗ ತರಬಲ್ಲ ಏಕೈಕ ಪರ್ಯಾಯ ಶಕ್ತಿ ಬಿಜೆಪಿ ಎಂದು ನಂಬಿ ಬದಲಾವಣೆಗೆ ಮತ ಹಾಕಿದ್ದಾರೆ.

ತಳಮಟ್ಟದ ರಾಜಕಾರಣದಲ್ಲಿ ಭ್ರಷ್ಟರ ಹಾವಳಿ

ರಾಜಕೀಯ ವಿಶ್ಲೇಷಕರ ಪ್ರಕಾರ, ಟಿಎಂಸಿ ಪಕ್ಷವು ಕಾಲಕ್ರಮೇಣ ತನ್ನ ಸುಶಿಕ್ಷಿತ ಹಾಗೂ ಸಭ್ಯ ನಾಯಕರನ್ನು ಮೂಲೆಗುಂಪು ಮಾಡಿತು. 2011 ರಲ್ಲಿ ಟಿಎಂಸಿ ಶೇ. 45 ಕ್ಕಿಂತ ಹೆಚ್ಚು ಸುಶಿಕ್ಷಿತ ಹಾಗೂ ಉದ್ಯೋಗಿ ವರ್ಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಆದರೆ 2021 ರ ವೇಳೆಗೆ ಇದು ಶೇ. 34 ಕ್ಕೆ ಕುಸಿಯಿತು. ಇದರ ಬದಲಾಗಿ ಸ್ಥಳೀಯ ಉದ್ಯಮಿಗಳು, ಗುತ್ತಿಗೆದಾರರು ಮತ್ತು ರೌಡಿ ಹಿನ್ನೆಲೆಯುಳ್ಳವರಿಗೆ ಪಕ್ಷದಲ್ಲಿ ಮನ್ನಣೆ ಸಿಕ್ಕಿತು.
ಅನುಬ್ರತಾ ಮೊಂಡಲ್ ಮತ್ತು ಶೇಖ್ ಷಹಜಹಾನ್ ಅವರಂತಹ ವಿವಾದಿತ ನಾಯಕರು ಟಿಎಂಸಿಯ ಮುಖವಾಡಗಳಾದರು. ಗೂಂಡಾಗಿರಿ, ಕಮಿಷನ್ ದಂಧೆ ಮತ್ತು ತೃಣಮೂಲ ಮಟ್ಟದ ಭ್ರಷ್ಟಾಚಾರದಿಂದಾಗಿ ಬಂಗಾಳದ ಸಭ್ಯ ನಾಗರಿಕರು ತೀವ್ರ ಮುಜುಗರ ಹಾಗೂ ಆಕ್ರೋಶ ಅನುಭವಿಸುವಂತಾಯಿತು. ಇದೇ ಸಮಯದಲ್ಲಿ, ಬಿಜೆಪಿ ತನ್ನ ಬಂಗಾಳ ಘಟಕದ ಅಧ್ಯಕ್ಷರಾಗಿ ಸಾಹಿತ್ಯ ಮತ್ತು ಕಲೆಯ ಅಭಿಮಾನಿಯಾದ ಸಮೀಕ್ ಭಟ್ಟಾಚಾರ್ಯ ಅವರಂತಹ ಸಭ್ಯ ನಾಯಕರನ್ನು ಮುನ್ನೆಲೆಗೆ ತಂದು ಭದ್ರಲೋಕ್ ಸಮುದಾಯದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಯಿತು.

'ಆರ್ ಜಿ ಕರ್' ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ

ಮಮತಾ ಅವರ ಅತಿ ದೊಡ್ಡ ಶಕ್ತಿಯಾಗಿದ್ದ ಮಹಿಳಾ ಮತದಾರರು ಅವರಿಂದ ದೂರಾಗಲು ಮುಖ್ಯ ಕಾರಣ ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಈ ಘಟನೆಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮತ್ತು ಪೊಲೀಸರು ನಡೆಸಿದ ಪ್ರಯತ್ನಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದವು.
ಇದರ ವಿರುದ್ಧ ರಾತ್ ದಖಲ್ ಎಂಬ ಬೃಹತ್ ಪ್ರತಿಭಟನೆಯನ್ನು ನಡೆಸಿ ನಾಗರಿಕ ಸಮಾಜ ಬೀದಿಗಿಳಿಯಿತು. ಟಿಎಂಸಿ ನಾಯಕರ ಮನೆಗಳಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗುತ್ತಿದ್ದ ಭ್ರಷ್ಟಾಚಾರದ ಹಗರಣಗಳ ಬೆನ್ನಲ್ಲೇ ನಡೆದ ಈ ಅಮಾನುಷ ಘಟನೆ, ಮಹಿಳೆಯರು ಮತ್ತು ಸುಶಿಕ್ಷಿತ ವರ್ಗದವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಿತು. ಇದು ಚುನಾವಣೆಯಲ್ಲಿ ಮಮತಾ ವಿರುದ್ಧದ ಭಾರಿ ಆಕ್ರೋಶವಾಗಿ ಮಾರ್ಪಟ್ಟಿತು.

RSS ನಿಶ್ಯಬ್ದ ಅಭಿಯಾನ ಮತ್ತು ಹಿಂದುತ್ವದ ಪುನರುತ್ಥಾನ

ಬಂಗಾಳದಲ್ಲಿ ಹಿಂದುತ್ವ ಹೊಸದೇನಲ್ಲ. 19ನೇ ಶತಮಾನದಲ್ಲೇ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ಚಂದ್ರನಾಥ್ ಬಸು ಹಾಗೂ ನಂತರದ ದಿನಗಳಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರು ಹಿಂದುತ್ವದ ಸಿದ್ಧಾಂತಕ್ಕೆ ಬಂಗಾಳದ ನೆಲದಲ್ಲೇ ನಾಂದಿ ಹಾಡಿದ್ದರು. ಆದರೆ ಕಮ್ಯುನಿಸ್ಟರ ಆಡಳಿತದಲ್ಲಿ ಇದು ಮೂಲೆಗುಂಪಾಗಿತ್ತು. ಮಮತಾ ಅವರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಆರಂಭಿಸಿದಾಗ, ಬಹುಸಂಖ್ಯಾತ ಹಿಂದೂಗಳಲ್ಲಿ ತಾರತಮ್ಯದ ಭಾವನೆ ಮೂಡಲಾರಂಭಿಸಿತು.
ಇದನ್ನು ಸರಿಯಾಗಿ ಬಳಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಂಗಾಳದ ಗಲ್ಲಿ ಗಲ್ಲಿಗಳಲ್ಲಿ ನಿಶ್ಯಬ್ದವಾಗಿ ಕೆಲಸ ಮಾಡಿತು. ಹಳ್ಳಿಗಳ ಟೀ ಅಂಗಡಿಗಳಿಂದ ಹಿಡಿದು ಹೈಟೆಕ್ ಅಪಾರ್ಟ್‌ಮೆಂಟ್‌ಗಳವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಣ್ಣ ಸಭೆಗಳನ್ನು ನಡೆಸಲಾಯಿತು. ಅಕ್ರಮ ನುಸುಳುಕೋರರ ಹಾವಳಿ ಮತ್ತು ಜನಸಂಖ್ಯಾ ಬದಲಾವಣೆಯ ಭೀತಿಯನ್ನು ಜನರ ಮನಸ್ಸಿಗೆ ಮುಟ್ಟಿಸುವಲ್ಲಿ RSS ಯಶಸ್ವಿಯಾಯಿತು. ಇಂಟರ್ನೆಟ್ ಮತ್ತು ವಾಟ್ಸಾಪ್ ಗ್ರೂಪ್‌ಗಳ ಮೂಲಕ ನಡೆದ ತಳಮಟ್ಟದ ಪ್ರಚಾರವು ಸುಶಿಕ್ಷಿತ ಬಂಗಾಳಿಗಳನ್ನು ಹಿಂದುತ್ವದ ಸಿದ್ಧಾಂತದತ್ತ ಸೆಳೆಯಿತು.
ಅಂತಿಮವಾಗಿ, ಬಂಗಾಳದ ಭದ್ರಲೋಕ್ ಸಮುದಾಯವು ಕೇವಲ ಧರ್ಮದ ಹೆಸರಿನಲ್ಲಿ ಬಿಜೆಪಿಗೆ ಮತ ಹಾಕಿಲ್ಲ. ಬದಲಾಗಿ, ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ, ನಿರಂಕುಶಾಧಿಕಾರ, ಉದ್ಯೋಗದ ಕೊರತೆ ಮತ್ತು ಅತಿರೇಕದ ಓಲೈಕೆ ರಾಜಕಾರಣಕ್ಕೆ ಭದ್ರಲೋಕ್ ನೀಡಿದ ಪ್ರಬಲವಾದ ಏಟು ಇದಾಗಿದೆ. ಈ ಐತಿಹಾಸಿಕ ಬದಲಾವಣೆಯು ಬಂಗಾಳದ ರಾಜಕೀಯ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net